ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಕರಾವಳಿಗರ ಜನಾಕ್ರೋಶ; ಗುಂಡ್ಯದಲ್ಲಿ ಬೃಹತ್‌ ಪ್ರತಿಭಟನೆ

ನ.15ರ ಶುಕ್ರವಾರ ಬೆಂಗಳೂರು - ಮಂಗಳೂರು ಹೆದ್ದಾರಿ ತಡೆ ನಡೆಸಿದ ಘಟನೆ ನಡೆಯಿತು.

Nov 15, 2024 - 16:40
Nov 15, 2024 - 17:14
ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಕರಾವಳಿಗರ ಜನಾಕ್ರೋಶ; ಗುಂಡ್ಯದಲ್ಲಿ ಬೃಹತ್‌ ಪ್ರತಿಭಟನೆ
Protest in Gundya against Kasturi Rangan report

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಜನವಾಸಿಗಳಿಗೆ ಮಾರಕವಾಗಿರುವ ಕಸ್ತೂರಿ ರಂಗನ್‌ ವರದಿಗೆ ದಕ್ಷಿಣ ಕನ್ನಡದಲ್ಲಿ ಜನಾಕ್ರೋಶ ಹೆಚ್ಚಾಗುತ್ತಿದೆ. ಸ್ಥಳೀಯ ಜನರು ಸಂಘ ಸಂಸ್ಥೆಗಳು ಹಾಗೂ ರಾಜಕೀಯ ನಾಯಕರು-ಮುಖಂಡರ ಬೆಂಬಲದೊಂದಿಗೆ ಅಲ್ಲಲ್ಲಿ ಪ್ರತಿಭಟನೆ, ರಸ್ತೆತಡೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಆ ಮೂಲಕ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್‌ ವರದಿಯನ್ನು ಪಶ್ಚಿಮ ಘಟ್ಟದ ಜನವಾಸ ಪ್ರದೇಶದಲ್ಲಿ ಜಾರಿಗೊಳಿಸುವುದಕ್ಕೆ ಅವಕಾಶ ನೀಡದಂತೆ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.  

ಅದರಂತೆ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯಿಂದ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಕಸ್ತೂರಿ ರಂಗನ್‌ ವರದಿ ಬಾಧಿತ ಗ್ರಾಮಸ್ಥರಿಂದ ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ಸಭೆ ನಡೆಸಲಾಯಿತು.  ಬಳಿಕ ಬೆಂಗಳೂರು - ಮಂಗಳೂರು ಹೆದ್ದಾರಿ ತಡೆಯನ್ನು ನಡೆಸಿ ಯಾವುದೇ ಕಾರಣಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸುವುದಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ.

ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಸಂಜೀವ ಮಠಂದೂರು, ಧರ್ಮಗುರುಗಳಾದ ರೆ.ಫಾ.ಆದರ್ಶ ಜೋಸೆಫ್, ರೆ.ಫಾ.ಸಿಬಿ, ಜಿಪಂ ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪ್ರಮುಖರಾದ ಎ.ವಿ. ತೀರ್ಥರಾಮ, ವೆಂಕಪ್ಪ ಗೌಡ ಸುಳ್ಯ ವೆಂಕಟ್ ವಳಲಂಬೆ, ಸುಧೀ‌ರ್ ಕುಮಾ‌ರ್ ಶೆಟ್ಟಿ, ಮುಹಮ್ಮದ್ ಅಲಿ ಹೊಸಮಠ ಮತ್ತಿತರರು ಭಾಗಿಯಾಗಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ರೈತರೆಂದರೆ ಹೆಬ್ಬೆಟ್ಟಲ್ಲ ನೆನಪಿರಲಿ, ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾವಂತರು ಇದ್ದಾರೆ. ನಾವು ಪ್ರತಿಭಟನೆಗೆ ಮಾನಸಿಕವಾಗಿ ಸಿದ್ದರಾಗಿಯೇ ಬಂದಿದ್ದೇವೆ. ಯಾವುದೇ ಕೇಸ್‌ ಹಾಕಿದರೂ ನಾವು ಹೆದರುವುದಿಲ್ಲ. ಇಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಮನವಿ ಕೊಡುವುದಿಲ್ಲ. ಅಕ್ರಮ-ಸಕ್ರಮಕ್ಕೆ ಹಣ ಪಡೆದ ಬಗ್ಗೆ ವೀಡಿಯೋ ಸಹಿತ ಸಾಕ್ಷಿ ಇದೆ. ಕಂದಾಯ ಇಲಾಖೆಯವರು ಅಕ್ರಮ ಮಾಡಿರುವುದಕ್ಕೆ ದಾಖಲೆ ಇದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

ನಮ್ಮ ಬೇಡಿಕೆಯನ್ನು ಪರಿಗಣಿಸದಿದ್ದಲ್ಲಿ ಅಗತ್ಯ ಬಂದರೆ ಬೆಂಗಳೂರು ಚಲೋ ನಡೆಸುತ್ತೇವೆ ಎಂದ ಕಿಶೋರ್ ಶಿರಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರು ಮುಂದೆ ನಿಂತು ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮಗಳ ಸಾವಿರಾರು ಗ್ರಾಮಸ್ಥರು ಈ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.