“ವಾಗೊಂಚೊ ಖೆಳ್“ ನೂತನ ಕೊಂಕಣಿ ಚಿತ್ರದ ಮುಹೂರ್ತ, ಪೋಸ್ಟರ್ ರಿಲೀಸ್

"ವಾಗೊಂಚೊ ಖೆಳ್" ಕೊಂಕಣಿ ಚಲನಚಿತ್ರದ ಮುಹೂರ್ತ ಮತ್ತು ಪೋಸ್ಟರ್ ರಿಲೀಸ್ ಕಾರ್ಯಕ್ರಮ ಶುಕ್ರವಾರ ಸಂಜೆ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಮಿನಿ ಹಾಲ್ ನಲ್ಲಿ ಜರುಗಿತು.

Nov 9, 2024 - 11:44
“ವಾಗೊಂಚೊ ಖೆಳ್“ ನೂತನ ಕೊಂಕಣಿ ಚಿತ್ರದ ಮುಹೂರ್ತ, ಪೋಸ್ಟರ್ ರಿಲೀಸ್
"Vagoncho Khel" New Konkani Movie Muhurta, Poster Release

ಮಂಗಳೂರು: ಪ್ರವೀಣ್‌ ಫೆರ್ನಾಂಡಿಸ್ ಇವರ ಸನ್ ಶೈನ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ತಯಾರಾಗುತ್ತಿರುವ "ವಾಗೊಂಚೊ ಖೆಳ್" ಕೊಂಕಣಿ ಚಲನಚಿತ್ರದ ಮುಹೂರ್ತ ಮತ್ತು ಪೋಸ್ಟರ್ ರಿಲೀಸ್ ಕಾರ್ಯಕ್ರಮ ಶುಕ್ರವಾರ ಸಂಜೆ ಕುಲಶೇಖರದ ಹೋಲಿ ಕ್ರಾಸ್ ಚರ್ಚ್ ಮಿನಿ ಹಾಲ್ ನಲ್ಲಿ ಜರುಗಿತು. 
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ದೇಶಕ ಅರ್ವಿನ್ ಲೋಬೊ ಅವರು, ”ಚಿತ್ರೀಕರಣ ಇದೇ ಬರುವ ನವೆಂಬರ್ 11ರಿಂದ ಶುರುವಾಗಲಿದ್ದು ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಬಿಕರ್ನಕಟ್ಟೆ, ಶಕ್ತಿನಗರ, ಮೂಡುಶೆಡ್ಡೆ, ವಾಮಂಜೂರು, ವಲೆನ್ಸಿಯ, ಬೈತುರ್ಲಿ, ಸುರತ್ಕಲ್, ಹಾಗೂ ಬೆಳ್ಮಣ್ ಪರಿಸರದಲ್ಲಿ ಚಿತ್ರಿಕರಣಗೊಳ್ಳಲಿದೆ“ ಎಂದರು. 

”ಚಿತ್ರದಲ್ಲಿ ಡೊಲ್ಲಾ ಮಂಗಳೂರ್, ಆಡ್ರಿನ್ ಡಿ'ಕುನ್ಹಾ, ಕ್ಲಿಯೋನಾ ಜೇನ್ ಡಿಸೋಜಾ, ವಿಯೊಲಾ ಡಿಸೋಜಾ, ಅನುಪ್ ಹ್ಯಾರಿಕ್, ವಿನೋದ್ ತಾಕೊಡೆ, ಲೂಸಿ ಲೋಬೊ, ರೀಟಾ ಫೆರ್ನಾಂಡಿಸ್, ಜೋಸೆಫ್ ರೆಗೊ, ಪ್ರಶಾಂತ್ ಸಿ.ಕೆ., ದೀಕ್ಷಿತ್ ಸೊರಕೆ, ಫ್ರಾನ್ಸಿಸ್ ಪ್ರೀತಮ್ ಇನ್ನಿತರ ಕಲಾವಿದರು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ“ ಎಂದರು. 
ನಿರ್ದೇಶಕ ಮತ್ತು ನಿರ್ಮಾಣ ವ್ಯವಸ್ಥಾಪಕರಾಗಿರುವ ನೋರ್ಬಟ್ ಜಾನ್ ಮಾಹಿತಿ ನೀಡಿ ”ಚಿತ್ರಕ್ಕೆ ಅರ್ವಿನ್ ಲೋಬೋ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಇದ್ದು ಡೆನೆಲ್ ಜೈಸನ್ ಛಾಯಾಗ್ರಹಣ, ಪ್ರಜ್ವಲ್ ಸುವರ್ಣ ಕಲರಿಂಗ್ ಮತ್ತು ವಿ.ಎಫ್.ಎಕ್ಸ್, ಡೋಲ್ವಿನ್ ಕೊಳಲಿಗಿರಿ ಅವರು ಸಂಗೀತ ನೀಡಲಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ಸೀಮಾ ಡೈನಾ ಫೆರ್ನಾಂಡಿಸ್‌ ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಈ ಚಿತ್ರದ ಪ್ರಚಾರ ಕಲೆ ಪವನ್ ಆಚಾರ್ಯ ಬೋಳೂ‌ರ್ ಮಾಡಲಿದ್ದಾರೆ“ ಎಂದರು. 


”ಚಿತ್ರವು ಕರಾವಳಿ ಭಾಗದ ಸಂಸ್ಕೃತಿಯಾದ ಹುಲಿ ವೇಷ ಆಧಾರಿತ ಮತ್ತು ಕ್ರೈಂ ಆಧಾರಿತ ಚಿತ್ರವಾಗಿದ್ದು, ಇದರಲ್ಲಿ ಕೊಂಕಣಿ, ತುಳು, ಕನ್ನಡ, ಬ್ಯಾರಿ ಬಾಷೆಗಳನ್ನು ಉಪಯೋಗಿಸಲಾಗಿದೆ. ಈ ಚಿತ್ರವು ಒಟ್ಟು 20 ದಿನದ ಚಿತ್ರಿಕರಣ ಅವಧಿ ಹೊಂದಿದ್ದು, ಮುಂಬರುವ 2025 ಇಸವಿಯ ಮೇ, ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾದ್ಯತೆ ಇದೆ“ ಎಂದು ಚಿತ್ರತಂಡ ಮಾಹಿತಿ ನೀಡಿದೆ.