ಮೈಸೂರಿನಿಂದ ಮಂಗಳೂರಿಗೆ ನೀರಲ್ಲಿ ಆಟವಾಡಲು ಬಂದ ಮೂವರು ಯುವತಿಯರ ದಾರುಣ ಅಂತ್ಯ; ಈಜುಕೊಳದಲ್ಲಿ ಈ ವಿದ್ಯಾರ್ಥಿನಿಯರು ಪ್ರಾಣ ಕಳೆದುಕೊಂಡಿರುವುದು ಹೇಗೆ? ಇಲ್ಲಿದೆ ಸಮಗ್ರ ವರದಿ

Nov 17, 2024 - 21:10
Nov 18, 2024 - 07:46

ಮಂಗಳೂರು: ವೀಕೆಂಡ್‌ನಲ್ಲಿ ಎಂಜಾಯ್‌ ಮಾಡುವುದಕ್ಕೆಂದು ದೂರದ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರು ಭಾನುವಾರ(ಇಂದು) ಬೆಳಗ್ಗೆ ಈಜುಕೊಳದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತ ಯುವತಿಯರನ್ನು ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಎಸ್‌ಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೂರನೇ ವರ್ಷದ ಬಿಇ ಪದವಿ ಓದುತ್ತಿದ್ದ ವಿಜಯನಗರ ನಿವಾಸಿ ಕೀರ್ತನಾ(21), ಕುರುಬರಹಳ್ಳಿ ನಿವಾಸಿ ನಿಶಿತಾ(21) & ರಾಮಾನುಜ ರಸ್ತೆಯ ನಿವಾಸಿ ಪಾರ್ವತಿ ಎಸ್‌(20) ಎಂದು ಗುರುತಿಸಲಾಗಿದೆ. ಈ ಮೂವರು ಕೂಡ ಒಟ್ಟಾಗಿ ವೀಕೆಂಡ್‌ನಲ್ಲಿ ಬೀಚ್‌ನಲ್ಲಿ ಎಂಜಾಯ್‌ ಮಾಡುವ ಉದ್ದೇಶದಿಂದಲೇ ಶನಿವಾರ ಬೆಳಗ್ಗೆಯೇ ಮಂಗಳೂರಿನ ಸೋಮೇಶ್ವರಕ್ಕೆ ಬಂದಿದ್ದರು. ಆ ಕಾರಣದಿಂದಲೇ ಸೋಮೇಶ್ವರ ಬೀಚ್‌ಗೆ ಹೊಂದಿಕೊಂಡಿದ್ದ ವಾಝ್ಕೋ ಬೀಚ್‌ ರೆಸಾರ್ಟ್‌ ಎಂಬ ಹೆಸರಿನ ರೆಸಾರ್ಟ್‌ನಲ್ಲಿ ಆನ್‌ಲೈನ್‌ ಮೂಲಕ ರೂಂ ಬುಕ್‌ ಮಾಡಿಕೊಂಡಿದ್ದರು. ಬೀಚ್‌ನಲ್ಲಿ ಆಟವಾಡಿ ಭಾನುವಾರ ಸಂಜೆ ವಾಪಾಸ್‌ ಹೋಗುವುದಕ್ಕೆ ಪ್ಲ್ಯಾನ್‌ ಮಾಡಿಕೊಂಡು ಬಂದಿದ್ದರು. ಅದರಂತೆ ಸಾಕಷ್ಟು ಖುಷಿಯಿಂದ ನೀರಿನಲ್ಲಿ ಆಟವಾಡುವುದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಶನಿವಾರ ಬೆಳಗ್ಗೆ ರೆಸಾರ್ಟ್‌ಗೆ ಬಂದಿದ್ದಾರೆ. ಬಸ್‌ ನಿಲ್ದಾಣದಲ್ಲಿ ಇಳಿದು ಆಟೋ ಮಾಡಿಕೊಂಡು ರೆಸಾರ್ಟ್‌ಗೆ ಬಂದಿದ್ದರು. ರಾತ್ರಿ ಊಟ ಮಾಡಿ ಮಲಗಿದವರು ಭಾನುವಾರ ಬೆಳಗ್ಗೆ ಎದ್ದು ಸುಮಾರು 10 ಗಂಟೆಗೆ ರೆಸಾರ್ಟ್‌ನೊಳಗಿರುವ ಈಜುಕೊಳಕ್ಕೆ ಹೋಗಿದ್ದಾರೆ. ಯುವತಿಯರು ತಮ್ಮ ಮೊಬೈಲ್‌ನ್ನು ಒಂದುಕಡೆ ರೆಕಾರ್ಡ್‌ ಮಾಡುವುದಕ್ಕೆ ಇಟ್ಟು ನೀರಿಗೆ ಇಳಿದಿದ್ದಾರೆ. ಆದರೆ ಯಾರೊಬ್ಬರಿಗೂ ಈಜಾಡುವುದಕ್ಕೆ ಗೊತ್ತಿರಲಿಲ್ಲ. 

ಈಜುಕೊಳದಲ್ಲಿ ಸುಮಾರು ಐದೂವರೆ ಅಡಿಯಷ್ಟು ನೀರು ಇತ್ತು ಎನ್ನಲಾಗುತ್ತಿದೆ. ನೀರಿನೊಳಗೆ ಇದ್ದ ಟ್ಯೂಬ್‌ ತೆಗೆಯುವುದಕ್ಕೆಂದು ಸ್ವಲ್ಪ ಆಳವಿದ್ದ ಜಾಗಕ್ಕೆ ಒಬ್ಬರು ಹೋಗಿದ್ದಾರೆ. ಅಷ್ಟೊತ್ತಿಗೆ ಕಾಲು ಜಾರಿ ನೀರಿನೊಳಗೆ ಮುಳುಗಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಬ್ಯಾಲೆನ್ಸ್‌ ಮಾಡುವುದಕ್ಕೆ ಸಾಧ್ಯವಾಗದೆ ನೀರು ಕುಡಿಯುತ್ತಾ ಉಸಿರುಗಟ್ಟಲಾರಂಭಿಸಿತ್ತು. ಅದನ್ನು ನೋಡಿದ ಮತ್ತೊಬ್ಬರು ಆಕೆಯನ್ನು ರಕ್ಷಣೆ ಮಾಡುವುದಕ್ಕೆ ಹೋಗಿದ್ದಾರೆ. ಅವರಿಗೂ ಈಜಾಡುವುದಕ್ಕೆ ಗೊತ್ತಿಲ್ಲದೆ ಅತ್ತ ಗಾಬರಿಕೊಂಡು ಅವರೂ ನೀರಿನಲ್ಲಿ ಏಕಾಏಕಿ ಮುಳುಗಿದ್ದಾರೆ. ಇಬ್ಬರು ಅಪಾಯದಲ್ಲಿರುವುದನ್ನು ನೋಡಿದ ಮೂರನೇ ಯುವತಿ ಕೂಡ ಅವರಿಬ್ಬರನ್ನು ರಕ್ಷಿಸುವ ಲೆಕ್ಕಾಚಾರದಲ್ಲಿ ಸುಮಾರು ಐದೂವರೆ ಫೀಟ್‌ ಆಳವಿದ್ದ ಜಾಗಕ್ಕೆ ಹೋಗಿದ್ದಾರೆ. ಹೀಗೆ, ಮೂವರು ನೀರು ಕುಡಿಯುತ್ತಾ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದಾರೆ. 

ಆದರೆ, ಸ್ಥಳದಲ್ಲಿ ನಿಯಮಾನುಸಾರ ಯಾವುದೇ ಲೈಫ್‌ ಗಾರ್ಡ್‌ ಅಥವಾ ರೆಸಾರ್ಟ್‌ ಸಿಬ್ಬಂದಿ ಇರಲಿಲ್ಲ. ಹೀಗಾಗಿ, ಉಸಿರುಗಟ್ಟಿ ಒದ್ದಾಡುತ್ತಾ ನೀರೊಳಗೆಯೇ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ಬಳಿಕ ಸಿಬ್ಬಂದಿಗೆ ವಿಷಯ ಗೊತ್ತಾಗಿದೆ. ಈ ದೃಶ್ಯವು ರೆಸಾರ್ಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರೆಸಾರ್ಟ್‌ ಮಾಲೀಕ ಪೊಲೀಸರ ವಶಕ್ಕೆ

ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸೇರಿದಂತೆ ಹೆಚ್ಚಿನ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಂತದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅಲ್ಲದೆ, ಮೇಲ್ನೋಟಕ್ಕೆ ಈ ದುರಂತಕ್ಕೆ ರೆಸಾರ್ಟ್‌ನವರ ನಿರ್ಲಕ್ಷ್ಯ ಕಾರಣ ಎಂಬುದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ವಾಝ್ಕೊ ರೆಸಾರ್ಟ್‌ನ ಮಾಲೀಕ ಮನೋಹರ್‌ ಪುತ್ರನ್‌ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ತಾತ್ಕಾಲಿಕವಾಗಿ ರೆಸಾರ್ಟ್‌ನ್ನು ಬಂದ್‌ ಮಾಡಲಾಗಿದೆ.

ಮೂವರಿಗೂ ಈಜು ಗೊತ್ತಿರಲಿಲ್ಲ: ಪೊಲೀಸ್‌ ಆಯುಕ್ತರು

ಮೂವರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ, ಒಬ್ಬರನ್ನು ರಕ್ಷಿಸುವುದಕ್ಕೆ ಹೋಗಿ ಉಳಿದ ಇಬ್ಬರು ಕೂಡ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರೆಸಾರ್ಟ್‌ನವರು ಈಜುಕೊಳದ ಆಳವನ್ನು ಸ್ಪಷ್ಟವಾಗಿ ತಿಳಿಸುವ ಜತೆಗೆ ಲೈಫ್‌ಗಾರ್ಡ್‌ಗಳನ್ನು ನಿಯೋಜಿಸಬೇಕಿತ್ತು. ಸಿಸಿ ಕ್ಯಾಮೆರಾ ದೃಶ್ಯ ನೋಡುವಾಗ ಅವರು ರಕ್ಷಣೆಗಾಗಿ ಕೂಗಾಡುತ್ತಿರುವುದು, ಸಹಾಯಕ್ಕೆ ಯಾರು ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಮೃತ ಮೂವರ ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಪೋಷಕರು ಈಗಾಗಲೈ ಮೈಸೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಏನೇ ಹೇಳಿದರೂ ತಮ್ಮ ಮಕ್ಕಳನ್ನು ಓದಿಸಿ ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ ಈ ಯುವತಿಯರ ಪೋಷಕರಿಗೆ ಈ ದುರ್ಘಟನೆ ಗೊತ್ತಾಗಿ ದೊಡ್ಡ ಶಾಕ್‌ಗೆ ಒಳಗಾಗಿದ್ದಾರೆ.

ಕಾರ್ಯಕ್ರಮಕ್ಕೆ ಹೋಗುವುದಾಗಿ ಹೇಳಿ ಬಂದಿದ್ದರು!  

ಮೈಸೂರಿನಿಂದ ಈ ಮೂವರು ವಿದ್ಯಾರ್ಥಿಗಳು ಮಂಗಳೂರಿನಲ್ಲಿರುವ ತಮ್ಮ ಗೆಳತಿಯ ಮನೆಗೆ ಹೋಗುತ್ತಿರುವುದಾಗಿ ಹೇಳಿ ಬಂದಿದ್ದರು. ಮಂಗಳೂರಿನಲ್ಲಿ ಕಾರ್ಯಕ್ರಮವಿದ್ದು, ಅಲ್ಲಿಗೆ ಹೋಗುತ್ತಿರುವುದಾಗಿ ಮಾತ್ರ ಹೇಳಿದ್ದರು. ಉಳ್ಳಾಲದಲ್ಲಿ ಈ ರೀತಿ ಬೀಚ್‌ಗೆ ಹೋಗುವುದಾಗಿ ತಿಳಿಸಿರಲಿಲ್ಲ ಎನ್ನಲಾಗಿದೆ. ಪಾರ್ವತಿ, ನಿಶಿತಾ ಹಾಗೂ ಕೀರ್ತನಾ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಹೀಗಾಗಿ, ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಓದುತ್ತಿದ್ದರು. ಈ ನಡುವೆ ಶನಿವಾರ ರಾತ್ರಿ ರೆಸಾರ್ಟ್‌ನಲ್ಲಿದ್ದ ವೇಳೆ ಪಾರ್ವತಿ ಅವರು ತಾಯಿ ಮಂಜುಳಾ ಅವರಿಗೆ ವಿಡಿಯೋ ಕಾಲ್‌ ಮಾಡಿ ರೆಸಾರ್ಟ್‌ನಲ್ಲಿ ಇರುವುದನ್ನು ತೋರಿಸಿದ್ದಾರೆ. ಅಷ್ಟೇಅಲ್ಲ ಭಾನುವಾರ ಬೆಳಗ್ಗೆ ಮತ್ತೆ ತಂದೆ ಶ್ರೀನಿವಾಸ್‌ ಅವರಿಗೆ ಕರೆ ಮಾಡಿದ್ದ ಪಾರ್ವತಿ 11 ಗಂಟೆಗೆ ರೆಸಾರ್ಟ್‌ನಿಂದ ಚೆಕ್‌ಔಟ್‌ ಮಾಡುವುದಾಗಿಯೂ ಹೇಳಿದ್ದರು. ಮೂವರು ಕೂಡ ಮೈಸೂರಿನಿಂದ ರೈಲಿನಲ್ಲಿ ಮಂಗಳೂರಿಗೆ ಪ್ರವಾಸ ಬಂದಿದ್ದರು.

 

ಬೀಚ್‌ಗೆ ನೀರಿನಲ್ಲಿ ಆಟವಾಡಲು ಬರುವವರಿಗೆ ಇರಲಿ ಎಚ್ಚರ

ಈಗ ಮಳೆಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ರಜಾ ದಿನ ಹಾಗೂ ವೀಕೆಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧೆಯಿಂದ ಮಂಗಳೂರು ಸೇರಿದಂತೆ ಕರಾವಳಿಗೆ ಪ್ರವಾಸಕ್ಕೆ ಬರುತ್ತಿರುತ್ತಾರೆ. ಅದರಲ್ಲಿಯೂ ಬೀಚ್‌ನಲ್ಲಿ ನೀರಲ್ಲಿ ಆಟವಾಡುವ ಖುಷಿಯಿಂದಲೇ ಪ್ಲ್ಯಾನ್‌ ಮಾಡಿಕೊಂಡು ಆಗಮಿಸುತ್ತಾರೆ. ಆದರೆ, ಬೀಚ್‌ಗಳಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ. ನಾನಾ ರೀತಿಯ ನಿರ್ಲಕ್ಷ್ಯದಿಂದಾಗಿ ನೀರಿನಲ್ಲಿ ಆಟವಾಡುವುದಕ್ಕೆ ಬಂದವರು ಪ್ರಾಣ ಕಳೆದುಕೊಂಡಿದ್ದಾರೆ. ಬೀಚ್‌ ಅಥವಾ ಈಜುಕೊಳಗಳಲ್ಲಿ ಲೈಫ್‌ಗಾರ್ಡ್‌ ಇರಲಿ ಅಥವಾ ಇಲ್ಲದೇ ಇರಲಿ; ಜೀವಕ್ಕೆ ಅಪಾಯವಿರುವ ಜಾಗಗಳಲ್ಲಿ ಸ್ವಯಂ ಎಚ್ಚರ ವಹಿಸುವುದು ಬಹಳ ಮುಖ್ಯ. ಆ ಮೂಲಕ ಇಂತಹ ದುರಂತಗಳನ್ನು ತಪ್ಪಿಸಬಹುದು. ನೀರು, ಬೆಂಕಿ ಯಾವತ್ತಿಗೂ ಅದು ಡೇಂಜರ್‌ ಎನ್ನುವುದನ್ನು ಯಾರೂ ಮರೆಯಬಾರದ್ದು.