ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ
ಗುಜರಾತ್ನ ಕಚ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ.
ಗುಜರಾತ್:ಗುಜರಾತ್ ನ ಕಚ್‌ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಕಚ್‌ನಲ್ಲಿ ಬಿಎಸ್‌ಎಫ್ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ಅವರಿಗೆ ಸ್ವೀಟ್ ಹಂಚಿದ್ದಾರೆ. ಕಚ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾದಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ ಪ್ರಧಾನಿ ಮೋದಿ ಭಾರತೀಯ ಸೈನಿಕರಿಗೆ ಸಿಹಿತಿಂಡಿಗಳನ್ನು ತಿನ್ನಿಸಿದ್ದಾರೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷವೂ ದೀಪಾವಳಿಯನ್ನು ದೇಶದ ವಿವಿಧ ಮೂಲೆಗಳಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಸೇನೆಯ ಸಮವಸ್ತ್ರವನ್ನು ಧರಿಸಿರುವ ಪ್ರಧಾನಿ ಮೋದಿ ಕಚ್‌ನಲ್ಲಿ ನಿಯೋಜಿಸಲಾದ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಅವರು ಮಾತನಾಡಿದರು. ʼʼ21ನೇ ಶತಮಾನದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೇನೆ ಮತ್ತು ಭದ್ರತಾ ಪಡೆಗಳನ್ನು ಆಧುನಿಕ ಸಂಪನ್ಮೂಲಗಳೊಂದಿಗೆ ಸಜ್ಜುಗೊಳಿಸುತ್ತಿದೆʼʼ ಎಂದು ತಿಳಿಸಿದ್ದಾರೆ.ದೇಶದ ಒಂದು ಇಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಅವರ ಕೆಲಸವನ್ನು ಸುಲಭಗೊಳಿಸಲು ಯಾವುದಾದರೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೇ ಪ್ರಶ್ನಿಸಿದರು. ಭುಜ್‌ಗೆ ತೆರಳುವ ಮೊದಲು ಮೋದಿ ಕೊಲ್ಲಿ ಪ್ರದೇಶವನ್ನು ಖುದ್ದಾಗಿ ಪರಿಶೀಲಿಸಿದರು. ಸುಮಾರು ಒಂದು ಗಂಟೆ ಅಲ್ಲಿಯೇ ಕಾಲ ಕಳೆದರು.