ಛಾಯಾಗ್ರಹಣದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಶ್ರೀವತ್ಸ ಶಾಂಡಿಲ್ಯ

ಬೆಂಗಳೂರಿನ ಖ್ಯಾತ ಕಾರ್ಪೊರೇಟ್ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಶ್ರಿವತ್ಸಶಾಂಡಿಲ್ಯ ಅವರು, ಭಾರತದ ಅಗ್ರಗಣ್ಯ ಉದ್ಯಮಿಗಳಿಂದ ಹಿಡಿದು ಚಿತ್ರರಂಗದ ಮಹಾನ್ ಕಲಾವಿದರವರೆಗೆ ಅನೇಕರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದಾರೆ.

May 13, 2026 - 10:12
ಛಾಯಾಗ್ರಹಣದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಶ್ರೀವತ್ಸ ಶಾಂಡಿಲ್ಯ

ಬೆಂಗಳೂರು, ಮೇ 13: ಛಾಯಾಗ್ರಹಣವೆಂಬ ಕಲೆಯನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸಿಕೊಂಡು ಬಂದ ಅಪರೂಪದ ಪ್ರತಿಭೆಗಳಲ್ಲೊಬ್ಬರು ಶ್ರಿವತ್ಸ ಶಾಂಡಿಲ್ಯ. ಸುಮಾರು ಎಪ್ಪತ್ತೈದು ವರ್ಷಗಳ ಛಾಯಾಗ್ರಹಣ ಪರಂಪರೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದಿರುವ ಅವರು, ಕಳೆದ 40 ವರ್ಷಗಳಿಂದ ಕ್ಯಾಮೆರಾ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

ಬೆಂಗಳೂರಿನ ಖ್ಯಾತ ಕಾರ್ಪೊರೇಟ್ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಶ್ರಿವತ್ಸಶಾಂಡಿಲ್ಯ ಅವರು, ಭಾರತದ ಅಗ್ರಗಣ್ಯ ಉದ್ಯಮಿಗಳಿಂದ ಹಿಡಿದು ಚಿತ್ರರಂಗದ ಮಹಾನ್ ಕಲಾವಿದರವರೆಗೆ ಅನೇಕರ ನೆಚ್ಚಿನ ಫೋಟೋಗ್ರಾಫರ್ ಆಗಿದ್ದಾರೆ.

ಕಾರ್ಪೊರೇಟ್ ಜಗತ್ತಿನ ದಿಗ್ಗಜರಾದ ಅಂಬಾನಿ, ಅದಾನಿ, ಮಹೇಂದ್ರಾ, ಎಲ್ & ಟಿ ಸಂಸ್ಥೆಗಳ ಪ್ರಮುಖರು ಸೇರಿದಂತೆ ಅನೇಕ ಉದ್ಯಮ ನಾಯಕರ ವ್ಯಕ್ತಿತ್ವವನ್ನು ತಮ್ಮ ಕ್ಯಾಮೆರಾದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ. ಕೇವಲ ಕಾರ್ಪೊರೇಟ್ ಕ್ಷೇತ್ರವಲ್ಲದೆ, ಸಿನಿರಂಗದಲ್ಲೂ ಶ್ರಿವತ್ಸಛಾಯಾಗ್ರಹಣ ವಿಶೇಷ ಗುರುತನ್ನು ಪಡೆದಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯಿಂದ ಆರಂಭಿಸಿ ಡಾ. ರಾಜ್ ಕುಮಾರ್ ಹಾಗೂ ಇಂದಿನ ತಲೆಮಾರಿನ ನಟ ಯಶ್‌ವರೆಗೆ ಅನೇಕ ಗಣ್ಯರ ಛಾಯಾಚಿತ್ರಗಳನ್ನು ಅವರು ಕಲಾತ್ಮಕವಾಗಿ ಮೂಡಿಸಿದ್ದಾರೆ.

ಮುಖಭಾವ, ವ್ಯಕ್ತಿತ್ವ ಮತ್ತು ಕ್ಷಣದ ಜೀವಂತಿಕೆಯನ್ನು ಸಹಜವಾಗಿ ಹಿಡಿದಿಡುವ ಅವರ ಛಾಯಾಗ್ರಹಣ ಶೈಲಿ ಅವರನ್ನು ಇತರರಿಂದ ವಿಭಿನ್ನರನ್ನಾಗಿಸಿದೆ. ಡ್ಯಾನ್ಸರ್ಸ್ ಪ್ರೊಫೈಲ್ ಫೋಟೋಗ್ರಫಿಯಲ್ಲಿಯೂ ಅವರು ಸಿದ್ಧಹಸ್ತರಾಗಿದ್ದು, ನೃತ್ಯಗಾರರ ಭಾವಭಂಗಿ, ಚಲನೆ ಮತ್ತು ಕಲಾತ್ಮಕತೆಯನ್ನು ಜೀವಂತವಾಗಿ ಚಿತ್ರಿಸುವ ಮೂಲಕ ವಿಶಿಷ್ಟ ಮೆಚ್ಚುಗೆ ಪಡೆದಿದ್ದಾರೆ.

ನಾಲ್ಕು ದಶಕಗಳ ಅನುಭವ, ತಲೆಮಾರಿನ ಪರಂಪರೆ ಮತ್ತು ಕಲೆಯ ಮೇಲಿನ ಅಪಾರ ಅಭಿರುಚಿಯಿಂದ ಶ್ರಿವತ್ಸ ಶಾಂಡಿಲ್ಯ ಇಂದು ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರುಗಳಲ್ಲೊಬ್ಬರಾಗಿದ್ದಾರೆ. ಅವರ ಕ್ಯಾಮೆರಾ ಕೇವಲ ಚಿತ್ರಗಳನ್ನು ಮಾತ್ರ ಸೆರೆಹಿಡಿಯುವುದಿಲ್ಲ; ವ್ಯಕ್ತಿತ್ವ, ಭಾವನೆ ಮತ್ತು ಕಾಲದ ನೆನಪುಗಳನ್ನು ಶಾಶ್ವತಗೊಳಿಸುವ ಕಲಾತ್ಮಕ ಸಾಧನವಾಗಿದೆ.