ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

"5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗವಾಗುತ್ತಿರುವುದಕ್ಕೆ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕು. ರೈತರಿಗೆ ಯಾವುದೇ ಕಾರಣಕ್ಕೂ ವಂಚನೆಯಾಗಬಾರದು, ಅರ್ಹ ಫಲಾನುಭವಿಗಳಿಗೇ ಸಾಲ ತಲುಪಬೇಕು," ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ, ಸಹಕಾರ ಇಲಾಖೆ ಅಡಿಯಲ್ಲಿ ಚುನಾವಣೆ ಬಾಕಿ ಇರುವ ಎಲ್ಲಾ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸುವಂತೆ ಸೂಚಿಸಿದರು.

Jun 15, 2026 - 19:03
ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕ ಪೂರೈಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಜೂನ್‌ 15: ರಾಜ್ಯದಲ್ಲಿ ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಂತಹ ಪ್ರಕೃತಿ ವೈಪರೀತ್ಯಗಳನ್ನು ಎದುರಿಸಲು ಇಲಾಖೆಗಳು ಸನ್ನದ್ಧವಾಗಿರಬೇಕು ಮತ್ತು ಬರ ಪರಿಸ್ಥಿತಿ ಎದುರಿಸಲು ತುರ್ತು ಕ್ರಮಗಳ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತೆಗೆ ಆದ್ಯತೆ
ರೈತರಿಗೆ ಕ್ರಿಮಿನಾಶಕ ಮತ್ತು ಔಷಧ ಸಿಂಪರಣೆ ಸಲಕರಣೆಗಳ ನೆರವು ನೀಡುವಂತೆ ಸೂಚಿಸಿದ ಸಿಎಂ, ಕೃಷಿ ಕ್ಷೇತ್ರದಲ್ಲಿ ದ್ರೋಣ್ ಹಾಗೂ ಕೃತಕ ಬುದ್ಧಿಮತ್ತೆ (AI) ಯಂತಹ ಆಧುನಿಕ ತಂತ್ರಜ್ಞಾನಗಳನ್ನು ರೈತರ ಬಳಿಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳಿಗೆ ಬಿದ್ದು ಸಾವನ್ನಪ್ಪುವ ಘಟನೆಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಹೊಂಡಗಳಿಗೆ ಬೇಲಿ ನಿರ್ಮಿಸಲು ಅಗತ್ಯ ಯೋಜನೆ ರೂಪಿಸಿ, ಹಣಕಾಸು ನೆರವು ಒದಗಿಸುವ ಬಗ್ಗೆ ಚರ್ಚಿಸಲು ನಿರ್ದೇಶಿಸಿದರು. ಇತರ ರಾಜ್ಯಗಳಲ್ಲಿರುವ ಮಾದರಿ ಯೋಜನೆಗಳನ್ನು ಅಧ್ಯಯನ ಮಾಡಿ, ನಮ್ಮ ರಾಜ್ಯದ ಕೃಷಿ ಸಂಸ್ಕೃತಿಗೆ ಅನುಗುಣವಾಗಿ ಅವುಗಳನ್ನು ಜಾರಿಗೆ ತರಲು ತಿಳಿಸಿದರು.

ಸಾಲ ಸೌಲಭ್ಯ ದುರುಪಯೋಗಕ್ಕೆ ಬ್ರೇಕ್; ರೈತರಿಗೆ ವಂಚಿಸಿದರೆ ಕಠಿಣ ಕ್ರಮ
ಸಹಕಾರ ಇಲಾಖೆಯ ಅಡಿಯಲ್ಲಿ ಕಾಸ್ಕಾರ್ಡ್ ಬ್ಯಾಂಕ್‌ಗಳು ನೀಡುವ ಬಡ್ಡಿ ರಹಿತ ಸಾಲದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬ್ಯಾಂಕ್‌ನವರೇ ತಮಗೆ ಬೇಕಾದವರ ಹೆಸರಿನಲ್ಲಿ ಸಾಲ ಪಡೆಯುತ್ತಿದ್ದಾರೆ ಎಂದು ರೈತರು ನನ್ನ ಬಳಿ ಬಂದು ದೂರುತ್ತಿದ್ದಾರೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.

"5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯ ದುರುಪಯೋಗವಾಗುತ್ತಿರುವುದಕ್ಕೆ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕು. ರೈತರಿಗೆ ಯಾವುದೇ ಕಾರಣಕ್ಕೂ ವಂಚನೆಯಾಗಬಾರದು, ಅರ್ಹ ಫಲಾನುಭವಿಗಳಿಗೇ ಸಾಲ ತಲುಪಬೇಕು," ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ, ಸಹಕಾರ ಇಲಾಖೆ ಅಡಿಯಲ್ಲಿ ಚುನಾವಣೆ ಬಾಕಿ ಇರುವ ಎಲ್ಲಾ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸುವಂತೆ ಸೂಚಿಸಿದರು.

ಮಾವು ಬೆಳೆಗಾರರಿಗೆ ₹229 ಕೋಟಿ ಪರಿಹಾರ

ರಾಜ್ಯದಲ್ಲಿ ಈ ವರ್ಷ ಬರೋಬ್ಬರಿ 1,068 ಕೋಟಿ ರೂಪಾಯಿ ಮೌಲ್ಯದ ಮಾವು ಬೆಳೆ ನಾಶವಾಗಿದೆ. ನಿಯಮಾವಳಿಗಳ ಪ್ರಕಾರ ಇದರ ಶೇ. 25 ರಷ್ಟು, ಅಂದರೆ ಒಟ್ಟು 229 ಕೋಟಿ ರೂಪಾಯಿ ಪರಿಹಾರವನ್ನು ಮಾವು ಬೆಳೆಗಾರರಿಗೆ ವಿತರಿಸಬೇಕಿದೆ. ಇದರಲ್ಲಿ ಕರ್ನಾಟಕ ಸರ್ಕಾರ 114 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 115 ಕೋಟಿ ರೂ. ನಷ್ಟ ಪರಿಹಾರ ಭರಿಸಬೇಕಾಗಿದ್ದು, ಕಾನೂನು ಪ್ರಕಾರ ಮಾವು ಬೆಳೆಗಾರರಿಗೆ ತಕ್ಷಣ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ತೋಟಗಾರಿಕೆ ಇಲಾಖೆಗೆ ನಿರ್ದೇಶನ ನೀಡಿದರು.

ರಫ್ತು ಉತ್ತೇಜನ ಮತ್ತು ಸಬ್ಸಿಡಿಗಳ ಪರಿಶೀಲನೆ
ರಾಜ್ಯದ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಸಿಎಂ ಗಂಭೀರ ಸೂಚನೆ ನೀಡಿದ್ದಾರೆ. ಕೆಪೆಕ್ (KAPPEC) ಮೂಲಕ ರಫ್ತು ಎಷ್ಟು ಹೆಚ್ಚಾಗಿದೆ ಮತ್ತು ಅದಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಕೇಳಿದ್ದಾರೆ. ರಫ್ತು ಉತ್ತೇಜನಕ್ಕೆ ಸೂಕ್ತ ಯೋಜನೆ ರೂಪಿಸಲು ಸರ್ಕಾರದ ಆರ್ಥಿಕ ಸಲಹೆಗಾರರಾದ ಎಲ್.ಕೆ. ಅತೀಕ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ (ACS) ತುಷಾರ ಗಿರಿನಾಥ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಇದರೊಂದಿಗೆ ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ (ಶೀತಲೀಕರಣ ಗೃಹ) ಮತ್ತು ಗೋದಾಮುಗಳ ಪಟ್ಟಿಯನ್ನು ಒದಗಿಸಲು ಸೂಚಿಸಲಾಗಿದೆ.

ರೈತರಿಗೆ ನೀಡಲಾಗುತ್ತಿರುವ ಸಬ್ಸಿಡಿಗಳು ಎಷ್ಟು ಪ್ರಯೋಜನಕಾರಿಯಾಗಿವೆ ಮತ್ತು ಸಬ್ಸಿಡಿ ನೀಡಿದ ಮೂಲ ಉದ್ದೇಶ ಜಾರಿಯಾಗುತ್ತಿದೆಯೇ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಇಲಾಖೆ ಅಧೀನದಲ್ಲಿರುವ ಐದು ನಿಗಮ ಮತ್ತು ಮಂಡಳಿಗಳ ಸ್ಥಿತಿಗತಿಗಳ ಬಗ್ಗೆಯೂ ವರದಿ ಕೇಳಲಾಗಿದೆ.

ಕೇಂದ್ರದ ಯೋಜನೆಗಳ ಮೇಲ್ವಿಚಾರಣೆ ಮತ್ತು ಆಡಳಿತ ಸುಧಾರಣೆ
ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗುತ್ತಿವೆ ಎಂಬುದರ ವರದಿ ಸಿದ್ಧಪಡಿಸಲು ಸೂಚಿಸಿದ ಸಿಎಂ, ಕೇಂದ್ರದಿಂದ ಬರಬೇಕಾದ ಸಹಕಾರ ಹಾಗೂ ಅನುದಾನವನ್ನು ಪಡೆದುಕೊಳ್ಳಲು ಒಟ್ಟಾಗಿ ಒತ್ತಡ ಹೇರೋಣ ಎಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMC) ಜಾಗಗಳನ್ನು ಸುರಕ್ಷಿತವಾಗಿಡಲು ಕಾಂಪೌಂಡ್ ನಿರ್ಮಿಸಬೇಕು ಮತ್ತು APMC ಆವರ್ತ ನಿಧಿ (Revolving Fund) ಸಮರ್ಪಕವಾಗಿ ಬಳಕೆಯಾಗಬೇಕು ಎಂದು ತಿಳಿಸಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸಲು ಪ್ರಾಥಮಿಕ ಕೃಷಿಯೊಂದಿಗೆ ಸೆಕೆಂಡರಿ ಕೃಷಿ (ಉಪ ಕಸುಬುಗಳು) ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಇಲಾಖೆಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಆದೇಶಿಸಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.