ಎಂಬಿಬಿಎಸ್ ಪದವಿ ಮುಗಿಸಿದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ನೇರ ನೇಮಕಾತಿ; ಖಾಲಿ ಹುದ್ದೆ ಭರ್ತಿಗೆ ತುರ್ತು ಕ್ರಮ: ಯು.ಟಿ.ಖಾದರ್  

ಸಚಿವರಾದ ಕೂಡಲೇ ಫೀಲ್ಡಿಗಿಳಿದ ಆರೋಗ್ಯ ಸಚಿವ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಲೋಪ ಎಸಗಿದ್ರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಸೂಚನೆ, ಮೊದಲ ದಿನವೇ ಆರೋಗ್ಯ ಇಲಾಖೆಗೆ ಖದರ್ ತೋರಿಸಿದ ಸಚಿವ ಖಾದರ್

Jun 5, 2026 - 21:15
ಎಂಬಿಬಿಎಸ್ ಪದವಿ ಮುಗಿಸಿದ ಕೂಡಲೇ ಸರ್ಕಾರಿ ಆಸ್ಪತ್ರೆಗೆ ನೇರ ನೇಮಕಾತಿ; ಖಾಲಿ ಹುದ್ದೆ ಭರ್ತಿಗೆ ತುರ್ತು ಕ್ರಮ: ಯು.ಟಿ.ಖಾದರ್   

ಬೆಂಗಳೂರು, ಜೂನ್ 5: ಇಲ್ಲಿನ ಆರೋಗ್ಯಸೌಧದ ವಾರ್ ರೂಂ ಸಭಾಂಗಣದಲ್ಲಿ ಇಲಾಖೆಯ ಹಿರಿಯ ಐ.ಎ.ಎಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಸಚಿವ ಯು.ಟಿ.ಖಾದರ್‌,  ಎಂಬಿಬಿಎಸ್ ಪದವಿ ಮುಗಿಸಿ ಬರುವ ಯುವ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗೆ ನೇರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಈ ಮೂಲಕ ಅಧಿಕಾರ ಸ್ವೀಕರಿಸುತ್ತಿದ್ದಂತೆ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆ ಭರ್ತಿಗೆ ಮಹತ್ವದ ಕ್ರಮ ಕೈಗೊಂಡರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿಗೊಳಿಸಲು ತುರ್ತು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಎಂಬಿಬಿಎಸ್ ಪದವೀಧರರು ನೇರವಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅನುಮತಿ ಪತ್ರ ರವಾನಿಸಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಒಂದು ವಾರದೊಳಗೆ ಅವರನ್ನು ನೇಮಕಾತಿ ಮಾಡಿಕೊಂಡು ಕೆಲಸಕ್ಕೆ ಸೇರ್ಪಡೆ ಮಾಡಲಾಗುವುದು. ಹೊಸತಾಗಿ ನೇಮಕಾತಿ ಆಗುವ ವೈದ್ಯರಿಗೆ ತಿಂಗಳಿಗೆ 60,000 ರೂ. ವೇತನ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಾರ್ವಜನಿಕರಿಂದ ಮತ್ತು ವೈದ್ಯರಿಂದ ಸಲಹೆಗಳನ್ನು ಆಹ್ವಾನಿಸುವುದಾಗಿಯೂ ಸಚಿವರು ತಿಳಿಸಿದರು.

ರಾಜ್ಯದಲ್ಲಿ ಆರೋಗ್ಯ ಇಲಾಖೆ ಬೃಹತ್ ವ್ಯಾಪ್ತಿಯನ್ನು ಹೊಂದಿದ್ದು, ವೈದ್ಯರ ನೇಮಕಾತಿಯಿಂದ ಹಿಡಿದು ಆರೋಗ್ಯ ಸೇವೆ ಜನಸಾಮಾನ್ಯರಿಗೆ ತಲುಪಿಸುವುದಕ್ಕೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದ ಸಚಿವರು, ಇಲಾಖೆಯ ಹಿಂದಿನ ಸಚಿವರಾದ ದಿನೇಶ್ ಗುಂಡೂರಾವ್ ಜಾರಿಗೆ ತಂದಿದ್ದ ಉತ್ತಮ ಕೆಲಸಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಇದೇ ವೇಳೆ, ಸಚಿವರು ಆಯುಷ್ಮಾನ್ ಕರ್ನಾಟಕ ಯೋಜನೆಯ ಅನುಷ್ಠಾನದ ಬಗ್ಗೆ ವಿಮರ್ಶೆ ನಡೆಸಿದ್ದು, ಈ ಯೋಜನೆ ವ್ಯಾಪ್ತಿಯಲ್ಲಿರುವ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಇದರ ಬಗ್ಗೆ ಆರೋಗ್ಯ ಇಲಾಖೆಯಿಂದ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಯುಷ್ಮಾನ್ ಕರ್ನಾಟಕ ಯೋಜನೆಯಲ್ಲಿ ನಿಗದಿಪಡಿಸಿದ್ದಕ್ಕಿಂದ ಹೆಚ್ಚು ಹಣ ಪಡೆಯಲು ಅವಕಾಶ ಇಲ್ಲ. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಹಣ ಪಡೆದರೆ, ಜಿಲ್ಲಾ ಮಟ್ಟದ ಆರೋಗ್ಯ ಮಿತ್ರರ ಮೂಲಕ ಸಾರ್ವಜನಿಕರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನ್ ಪಾಂಡೆ, ಆಯುಕ್ತ ಗುರುದತ್ ಹೆಗಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಅವಿನಾಶ್ ಮೆನನ್ ರಾಜೇಂದ್ರನ್, ಔಷಧ ಹಾಗೂ ಆಹಾರ ಗುಣಮಟ್ಟದ ಆಯುಕ್ತ ಶ್ರೀನಿವಾಸನ್, ಆಯುಷ್ ಇಲಾಖೆಯ ಆಯುಕ್ತರಾದ ವಿಪಿನ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.