ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ: ಸಿಎಂ ಡಿ.ಕೆ.ಶಿವಕುಮಾರ್
ಜನರ ಭಾವನೆ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ
ಬೆಂಗಳೂರು, ಜೂನ್ 6: ನಮ್ಮ ಸರ್ಕಾರ ಯಾವುದೇ ಜಾತಿ, ಧರ್ಮ, ಪ್ರಭಾವಗಳಿಗೆ ಹಾಗೂ ಒತ್ತಡಗಳಿಗೆ ಮಣಿಯುವುದಿಲ್ಲ. ಜನರ ಭಾವನೆ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಕಾರಾತ್ಮಕ ಭಾವದಿಂದ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅವರು ಶುಕ್ರವಾರ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ / ಎಲ್ಲಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು / ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿ, ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆ ಕೈಗೊಳ್ಳುವ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಪರಿಹಾರ ನೀಡಲು ಅನುಕೂಲವಾಗುವಂತೆ ಒಂದು ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗುವುದು. ಪ್ರತಿದಿನವೂ ಹಲವು ತಂಡಗಳು, ತಮ್ಮ ಸಮಸ್ಯೆಗಳ ಕುರಿತು ಪ್ರತಿಭಟನೆ ನಡೆಸುತ್ತಿದ್ದು, ಅವರ ಸಮಸ್ಯೆಗಳಿಗೆ ಕಿವಿಗೊಟ್ಟು, ಅವರ ಬೇಡಿಕೆಗಳ ವಾಸ್ತವಾಂಶವಿದೆಯೇ ಮತ್ತು ನ್ಯಾಯಬದ್ಧವಾಗಿದೆಯೇ ಇಲ್ಲವೇ ಎಂಬ ಮಾಹಿತಿಗಳನ್ನು ಪಡೆದು, ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಅಲ್ಲದೇ ಪ್ರತಿಭಟನಾಕಾರರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪರಿಹಾರ ನೀಡಲು ಕ್ರಮಕೈಗೊಳ್ಳಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂದರು.
ಲಭ್ಯವಿರುವ ಆರ್ಥಿಕ ವ್ಯವಸ್ಥೆಯೊಳಗೆ ಬಾಕಿ ಇರುವ ಕಾಮಗಾರಿಗಳಲ್ಲದೇ ಹೊಸದಾಗಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ 25 ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಲ್ಲಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಜಿಲ್ಲಾ ಪ್ರವಾಸ ಕೈಗೊಂಡು ಅಗತ್ಯ ಮಾರ್ಗದರ್ಶನ ಮತ್ತು ನೆರವು ಒದಗಿಸಲು ಸೂಚಿಸಲಾಗಿದೆ ಮುಖ್ಯಮಂತ್ರಿಗಳು ತಿಳಿಸಿದರು.
15 ದಿನಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
15 ದಿನಗಳಲ್ಲಿ ಕ್ರಿಯಾ ಯೋಜನೆಯನ್ನು ಇಲಾಖೆಗಳಿಗೆ ಸಿದ್ದಪಡಿಸಲು ಸೂಚಿಸಲಾಗಿದೆ. ಎಲ್ಲರೂ ಉತ್ತರದಾಯಿಯಾಗಿರಬೇಕು ಹಾಗೂ ಪ್ರಜ್ಞಾವಂತಿಕೆಯಿಂದ ಕೆಲಸ ಮಾಡಬೇಕು. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದು, ಅದನ್ನು ಬಗೆಹರಿಸಲು ಸಕಾರಾತ್ಮಕ ಮನೋಭಾವ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನನಗೆ ಇತಿಹಾಸವನ್ನು ಓದಲಾಗಲಿ, ಬರೆಯಲಾಗಲಿ ಆಸಕ್ತಿ ಇಲ್ಲ. ಇತಿಹಾಸವನ್ನು ನಿರ್ಮಾಣ ಮಾಡಬೇಕು ಎಂದ ಮುಖ್ಯಮಂತ್ರಿಗಳು ಅವಕಾಶಗಳು ಸಿಕ್ಕಾಗ ಸಾಕ್ಷಿಗಳನ್ನು ಬಿಟ್ಟುಹೋಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪ್ರಣಾಳಿಕೆ, ಆಯವ್ಯಯ ಘೋಷಣೆಗಳನ್ನು ಅನುಷ್ಠಾನಗೊಳಿಸಲು 15 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು
ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್ ) ನಡೆಯುತ್ತಿದ್ದು, ಈ ದೇಶದ ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು . ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳದಿದ್ದರೆ ಎಲ್ಲಾ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ . ಹಾಗಾಗಿ ಮತದಾರರ ಪಟ್ಟಿ ಹೊಂದಿರುವವರು ಅರ್ಜಿಗಳನ್ನು ಭರ್ತಿ ಮಾಡುವಂತೆ ಮತದಾರರಿಗೆ ಜಾಗೃತಿ ಮೂಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಮತದಾರರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಾಗಿದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು. ಕೇರಳಂ ಬಿಟ್ಟರೆ ಉಳಿದೆಡೆಗಳಲ್ಲಿ ಬಹಳಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ . ಈ ರೀತಿ ನಮ್ಮ ರಾಜ್ಯದಲ್ಲಿ ಆಗಬಾರದು. ಸ್ಥಳೀಯ ಸಂಸ್ಥೆಗಳು ನಿವಾಸ ಪ್ರಮಾಣಪತ್ರಗಳನ್ನು ಒದಗಿಸಿಕೊಡಬೇಕು ಮತ್ತು ಹೆಲ್ಪ್ ಡೆಸ್ಕ್ ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಭಾರತ್ ಜೋಡೋ ಯುವಕರ ಸಂಘಗಳನ್ನು ರಚಿಸುವ ಬಗ್ಗೆ ಆರ್ಥಿಕ ಸಂಪನ್ಮೂಲ ಲಭ್ಯತೆಯ ಬಗ್ಗೆ ಪ್ರತಿಪಕ್ಷ ಮಾಡಿರುವ ಟೀಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯಾವುದೇ ಕೆಲಸ ಮಾಡಿದರೂ ಆರ್ಥಿಕ ಹೊರೆ ಇದ್ದೇ ಇರುತ್ತದೆ. ಈ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು ಎಂದರು.
ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, 200 ಯೂನಿಟ್ ಎಂದು ಹೇಳಿ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವ ಬಗ್ಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, 1.60 ಕೋಟಿ ಜನ ವೈಯಕ್ತಿಕವಾಗಿ ಸೌಲಭ್ಯ ಪಡೆದುಕೊಂಡಿದ್ದಾರೆ. ಒಬ್ಬರ ಹೆಸರಲ್ಲಿ ಐದಾರು ಮೀಟರ್ ಗಳಿದ್ದು ಫಲಾನುಭವಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಸಿಎಸ್ ಅರ್ ನಿಧಿಯ ಸಮರ್ಪಕ ಬಳಕೆಗೆ ಅಧಿಕಾರಿಗಳಿಗೆ ಸೂಚನೆ
ಕರ್ನಾಟಕ ರಾಜ್ಯಕ್ಕೆ ದೊರೆಯುವ ಸಿಎಸ್ ಆರ್ ನಿಧಿಯಡಿ ಸುಮಾರು 8 ಸಾವಿರ ಕೋಟಿಗಳಷ್ಟು ಹಣವಿದ್ದು,ಈ ನಿಧಿಯನ್ನು ರಾಜ್ಯದಲ್ಲಿ ಎಲ್ಲಿ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯಿರಬೇಕು. ಈಗಾಗಲೇ ನೀಡಲಾಗಿರುವ ಸಿಎಸ್ ಆರ್ ನಿಧಿಯು ಸೂಕ್ತವಾಗಿ ವಿನಿಯೋಗವಾಗುತ್ತಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಸರ್ಕಾರ ಈಗಾಗಲೇ ಮೂರು ಗ್ರಾಮಪಂಚಾಯತಿಗಳಿಗೆ ಒಂದರಂತೆ ಒಂದು ಶಾಲೆಯನ್ನು ನಿರ್ಮಿಸಲು ತೀರ್ಮಾನಿಸಿದೆ. ಶಾಲೆಯ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸಲು ,ಸೂಕ್ತ ಮಾರ್ಗಸೂಚಿಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನೀಡಲಾಗುವುದು. ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಸಿಎಸ್ ಆರ್ ನಿಧಿ ಎಲ್ಲಿ ಬಳಕೆಯಾಗುತ್ತಿದೆ ಎಂಬ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕು. ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದರಿಂದ, ಪ್ರಾಥಮಿಕ ಶಾಲೆಗಳ ನಿರ್ಮಾಣ, ಅವುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ ಪರಿಕರಗಳನ್ನು ಒದಗಿಸಲು ಸಿಎಸ್ ಆರ್ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ವಿಸ್ತೃತವಾದ ಮಾರ್ಗಸೂಚಿಗಳನ್ನು ಸಧ್ಯದಲ್ಲಿಯೇ ನೀಡಲಾಗುವುದು ಎಂದರು.
ಎನ್ ಆರ್ ಐ ಗಳಿಗಾಗಿ ಪ್ರತ್ಯೇಕ ಸಚಿವಾಲಯ
ಅನಿವಾಸಿ ಭಾರತೀಯರಿಗಾಗಿ ಎನ್ ಆರ್ ಐ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಹೊರದೇಶದಲ್ಲಿ ನೆಲೆಸಿರುವ ಭಾರತೀಯರು ಹಾಗೂ ರಾಜ್ಯದಲ್ಲಿ ಎನ್ ಆರ್ ಐ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗುವಂತೆ ಕಾನೂನು ರೂಪಿಸಲು ಸೂಚನೆ ನೀಡಲಾಗಿದೆ ಎಂದರು.
ಸಚಿವರು, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು
ಸಚಿವರು ಹಾಗೂ ಸರ್ಕಾರದ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ, ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು. ನ್ಯಾಯಬದ್ಧವಾದ, ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಹಕಾರ ನೀಡಲು ಮುಖ್ಯಮಂತ್ರಿಗಳು ಕೋರಿದರು.
ರೌಡಿ ಚಟುವಟಿಕೆಗಳನ್ನು ನಿಗ್ರಹಿಸಲು ಕಾರ್ಯಪಡೆ
ಪ್ರತಿಯೊಂದು ತಾಲ್ಲೂಕಿನಲ್ಲಿ ರೌಡಿ ಚಟುವಟಿಕೆಗಳನ್ನು ಮತ್ತು ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸಲು ಕಾರ್ಯಪಡೆಯನ್ನು ರಚಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮರ್ ಹೇಳಿದರು..
ನವದೆಹಲಿಯ ಕರ್ನಾಟಕ ಭವನ: ಸಮರ್ಪಕ ಕಾರ್ಯನಿರ್ವಹಣೆಗೆ ಸಿಎಂ ಸಭೆ
ನವದೆಹಲಿಯಲ್ಲಿ ಕರ್ನಾಟಕ ಭವನದ ಕಾರ್ಯನಿರ್ವಹಣೆ ಸಮಾಧಾನಕರವಾಗಿಲ್ಲ..ಅಲ್ಲಿನ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ದೇಶದ ವಿವಿಧ ರಾಜ್ಯಗಳನ್ನು ಗಮನಿಸಿ, ಕರ್ನಾಟಕ ರಾಜ್ಯಕ್ಕೆ ಹೊಸ ಯೋಜನೆಗಳ ಬಗ್ಗೆ ಸಲಹೆ ನೀಡುವ ಮತ್ತು ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರದ ಗಮನಸೆಳೆಯಲು ಅನುಕೂಲವಾಗುವಂತೆ ಪ್ರತ್ಯೇಕ ಸೆಲ್ ಒಂದನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಅಧಿಕಾರಿಗಳು ಕಡ್ಡಾಯವಾಗಿ ನೀಡುವ ಜೊತೆಗೆ , ಸ್ವತ: ಭೇಟಿ ನೀಡಿ, ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.


