ಮಂಗಳೂರು: ಶಕ್ತಿ ವಿದ್ಯಾಸಂಸ್ಥೆಯಲ್ಲಿ 'ಕಾರ್ಗಿಲ್ ವಿಜಯ್ ದಿವಸ್' ಆಚರಣೆ
Mangaluru Shakthi Education Trust: ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ 'ಕಾರ್ಗಿಲ್ ವಿಜಯ್ ದಿವಸ್' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳೂರು: 'ನಮ್ಮ ಸೈನಿಕರು ಗಡಿಯಲ್ಲಿ ನಿಂತು ಕಾಯುತ್ತಿದ್ದಾರೆ. ಇದರಿಂದ ದೇಶದೊಳಗೆ ಸುಖಕರವಾದ ವಾತಾವರಣ ನಿರ್ಮಾಣವಾಗಿದೆ' ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಈಚೆಗೆ 'ಶಕ್ತಿ' ವಿದ್ಯಾಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ 'ಕಾರ್ಗಿಲ್ ವಿಜಯ್ ದಿವಸ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ನಮ್ಮ ಸೈನಿಕರ ತ್ಯಾಗ ಅವಿಸ್ಮರಣಿಯವಾದದ್ದು, ಜಗತ್ತಿನಲ್ಲಿ ಎಲ್ಲಿಯೂ ಕಾರ್ಗಿಲ್ ನಷ್ಟು ಕಷ್ಟಕರವಾದ ಭೀಕರ ಯುದ್ಧ ಮತ್ತೊಂದು ನಡೆದಿಲ್ಲ. 74 ದಿನಗಳ ಕಾಲ ಜರುಗಿದ ಯುದ್ಧದಲ್ಲಿ ಭಾರತದ 1,363 ಸೈನಿಕರು ಗಾಯಗೊಂಡಿದ್ದರು. 500 ಜನ ಸೈನಿಕರು ಹುತಾತ್ಮರಾದರು' ಎಂದರು.

ಈ ಯುದ್ಧದಲ್ಲಿ ಭಾರತದ ಯೋಧರು, ಶತ್ರು ದೇಶದ 250ಕ್ಕೂ ಹೆಚ್ಚು ಮೃತ ಸೈನಿಕರ ದೇಹವನ್ನು ಅಂತ್ಯ ಸಂಸ್ಕಾರವನ್ನು ಮಾಡಿದರು. ಇದು ದೇಶದ ಸೈನಿಕರ ಯುದ್ಧ ಸಂಸ್ಕಾರವನ್ನು ತೋರಿಸುತ್ತದೆ' ಎಂದು ಹೇಳಿದರು.
'ನಮ್ಮ ಮಾತೃ ಭೂಮಿ, ಬದುಕಿಗೆ ಆಧಾರ. ಎಲ್ಲರಿಗೂ ಸೈನ್ಯಕ್ಕೆ ಸೇರುವ ಭಾಗ್ಯ ಸಿಗದೆ ಇದ್ದರೂ, ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಿ ದೇಶದ ರಕ್ಷಣೆಗೆ ಪ್ರಯತ್ನ ಮಾಡೋಣ' ಎಂದು ತಿಳಿಸಿದರು.
ಕ್ಯಾಪ್ಟನ್ ಮನೋಜ್ ಪಾಂಡೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದರು. ಅವರು ಯುದ್ಧಕ್ಕೆ ಹೋಗುವುದಕ್ಕಿಂತ ಮೊದಲು, ನನ್ನ ಹೃದಯ ಇನ್ನಷ್ಟು ಸಾಧನೆಯನ್ನು ಅಪೇಕ್ಷಿಸುತ್ತಿದೆಯೆಂದು ತಮ್ಮ ಸ್ಫೂರ್ತಿದಾಯಕ ಮಾತನ್ನು ಸೈನಿಕರೊಂದಿಗೆ ಹಂಚಿಕೊಂಡಿದ್ದರು ಎಂದು ಸ್ಮರಿಸಿದರು.

ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾಯ್ಕ್ ಮಾತನಾಡಿ, ಮಕ್ಕಳ ಸಾಧನೆ ನಮಗೆ ಖುಷಿ ತಂದಿದೆ. ಪ್ರತಿಯೊಬ್ಬರು ಶ್ರಮಪಟ್ಟು ನಿರಂತರ ಪ್ರಯತ್ನದೊಂದಿಗೆ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಕ್ಕಳು ಪ್ರಯತ್ನಿಸಲಿ ಎಂದು ಹೇಳುದರು.
ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ.ಕೆ ಮಾತನಾಡಿ, 'ನೀಟ್ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉತ್ತಮ ಅಂಕಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಯಾಗಿದೆ. ಹಗಲು-ರಾತ್ರಿ ನಿರಂತರ ಅಭ್ಯಾಸದೊಂದಿಗೆ ಛಲ ಬಿಡದೆ, ಈ ಸಾಧನೆಯನ್ನು ಮಾಡಿದ್ದಾರೆ' ಎಂದು ಹೇಳಿದರು.
ಈ ವೇಳೆ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರೊಂದಿಗೆ, ಶಕ್ತಿ ಪದವಿ ಪೂರ್ವ ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ಪೋಷಕರು ಸಂಸ್ಥೆಯ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಮಾತನಾಡಿ, ಶಕ್ತಿ ವಿದ್ಯಾಸಂಸ್ಥೆ, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು.
ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಸಿಯಲ್ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಮತ್ತು ಸೈನಿಕ ನರೇಶ್ ಪೈ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ್ ಅತಿಥಿ ಪರಿಚಯ ಮಾಡಿದರು. ವರ್ಚಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಗಿಲ್ ವಿಜಯ್ ದಿವಸ್ ಮಹತ್ವವನ್ನು ಸಾನ್ವಿ ಶೇಖರ್ ಓದಿದರು. ಪ್ರಗತಿ ಸ್ವಾಗತಿಸಿದರು. ಶ್ರೀಹರಿ ವಂದಿಸಿದರು.