ಕಬ್ಬಿನ ನಾರಿನಿಂದ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ಪ್ಯಾಕಿಂಗ್ ಬಾಕ್ಸ್‌ಗಳು!
Biodegradable Packing Boxes: ಕಬ್ಬಿನ ನಾರಿನಿಂದ ತಯಾರಿಸಿದ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್ ಪ್ಯಾಕಿಂಗ್ ಬಾಕ್ಸ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ.
ಬೆಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿನಿಸು ಹಂಚುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಭಾಗ. ಆದರೆ ಸಿಹಿತಿನಿಸುಗಳ ಪ್ಯಾಕಿಂಗ್‌ನಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದಕ್ಕೆ ಪರ್ಯಾಯವಾಗಿ ಕಬ್ಬಿನ ನಾರಿನಿಂದ ತಯಾರಿಸಿದ ಬಯೋಡಿಗ್ರೇಡಬಲ್ ಸಿಹಿತಿನಿಸುಗಳ ಬಾಕ್ಸ್‌ಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿವೆ.
ಕಬ್ಬಿನಿಂದ ಸಕ್ಕರೆ ಉತ್ಪಾದನೆಯ ಬಳಿಕ, ಉಳಿಯುವ ನಾರಿನಂಥ ಉಪಉತ್ಪನ್ನವನ್ನು 'ಬಗಾಸ್' ಎಂದು ಕರೆಯಲಾಗುತ್ತದೆ. ಇದೇ ಬಗಾಸ್ ಅನ್ನು ಸಂಸ್ಕರಿಸಿ ಬೋರ್ಡ್ ರೂಪಕ್ಕೆ ತಂದು, ಅದರಿಂದ ವಿವಿಧ ವಿನ್ಯಾಸ ಹಾಗೂ ಗಾತ್ರದ ಬಾಕ್ಸ್‌ಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ, ರೂಪುಗೊಂಡಿರುವ ಈ ಉತ್ಪನ್ನವನ್ನು ಪರಿಸರ ಸ್ನೇಹಿ ಪ್ಯಾಕಿಂಗ್‌ಗೆ ಪರ್ಯಾಯವಾಗಿ ಪರಿಚಯಿಸಲಾಗುತ್ತಿದೆ.
ಈ ವಿನೂತನ ಪ್ರಯತ್ನವನ್ನು ಅಗ್ರಿನ್ ಜೀನಿಯಂ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ.ನರೇಂದ್ರ ರೆಡ್ಡಿ ಹಾಗೂ ರಶ್ಮಿ ಪಿ.ಎನ್ ಅವರ ಪರಿಕಲ್ಪನೆಯೊಂದಿಗೆ, ಬೆಂಗಳೂರಿನ ಅಟಲ್ ಇನ್‌ಕ್ಯುಬೇಶನ್ ಸೆಂಟರ್ ಮೂಲಕ ಮುನ್ನಡೆಸಲಾಗುತ್ತಿದೆ.
ಪ್ಲಾಸ್ಟಿಕ್‌ಗೆ ಪ್ರಕೃತಿ ಸ್ನೇಹಿ ಪರ್ಯಾಯ:
ಬಗಾಸ್‌ನಿಂದ ತಯಾರಾಗುವ ಬಾಕ್ಸ್‌ಗಳ ಪ್ರಮುಖ ವಿಶೇಷತೆ ಅವುಗಳ ಜೈವಿಕ ವಿಘಟನೀಯ ಗುಣ. ಬಳಕೆಯ ನಂತರ ಸೂಕ್ತ ಪರಿಸರದಲ್ಲಿ ಜೈವಿಕವಾಗಿ ವಿಭಜನೆಯಾಗುವ ಸಾಮರ್ಥ್ಯ ಹೊಂದಿರುವ ಈ ಬಾಕ್ಸ್‌ಗಳು, ಪ್ಲಾಸ್ಟಿಕ್ ಪ್ಯಾಕಿಂಗ್‌ಗೆ ಪರ್ಯಾಯ ಒದಗಿಸುವ ಉದ್ದೇಶ ಹೊಂದಿವೆ. ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಸಿಹಿತಿನಿಸುಗಳ ಪ್ಯಾಕಿಂಗ್‌ನಲ್ಲೇ, ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸುವುದು ಈ ಪ್ರಯತ್ನದ ಪ್ರಮುಖ ಉದ್ದೇಶವಾಗಿದೆ.

ಸಿಹಿ, ಡ್ರೈಫ್ರೂಟ್‌ಗೂ ಸೂಕ್ತ:
ಸಿಹಿತಿನಿಸುಗಳ ಬಾಕ್ಸ್‌ಗಳಿಗೆ ಮಾತ್ರ ಸೀಮಿತವಾಗದೆ, ಡ್ರೈಫ್ರೂಟ್, ಚಾಕೊಲೇಟ್ ಹಾಗೂ ವಿವಿಧ ಉಡುಗೊರೆ ಪ್ಯಾಕಿಂಗ್‌ಗಳಿಗೂ ಈ ಬಗಾಸ್ ಆಧಾರಿತ ಬಾಕ್ಸ್‌ಗಳನ್ನು ಬಳಸಬಹುದಾಗಿದೆ. ಹೀಗಾಗಿ ಹಬ್ಬದ ಉಡುಗೊರೆಯೊಂದಿಗೆ ಪರಿಸರ ಕಾಳಜಿಯ ಸಂದೇಶವನ್ನು ನೀಡಬಹುದಾಗಿದೆ.
ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನ:
ಕಬ್ಬಿನ ನಾರಿನಂತಹ ಕೃಷಿ–ಕೈಗಾರಿಕಾ ಉಪ ಉತ್ಪನ್ನವನ್ನು ತ್ಯಾಜ್ಯವೆಂದು ಪರಿಗಣಿಸುವ ಬದಲು, ಅದನ್ನು ಮೌಲ್ಯವರ್ಧಿತ ಉತ್ಪನ್ನವನ್ನಾಗಿ ಪರಿವರ್ತಿಸುವುದು ಈ ಪರಿಕಲ್ಪನೆಯ ಮತ್ತೊಂದು ವಿಶೇಷತೆ. ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಪ್ಲಾಸ್ಟಿಕ್‌ಗೆ ಪರ್ಯಾಯ ಸೃಷ್ಟಿಸುವುದರ ಜೊತೆಗೆ, ಹೊಸ ಉದ್ಯಮ ಹಾಗೂ ಉದ್ಯೋಗಾವಕಾಶಗಳಿಗೂ ಇದು ದಾರಿ ಮಾಡಿಕೊಡುವ ಸಾಧ್ಯತೆಯಿದೆ.
ನವೀನ ಆವಿಷ್ಕಾರಗಳು ಹಾಗೂ ಉದ್ಯಮಶೀಲ ಪರಿಕಲ್ಪನೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಅಟಲ್ ಇನ್‌ಕ್ಯುಬೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಕೇಂದ್ರ ಸರ್ಕಾರದ ಸಹಾಯಧನದ ಮೂಲಕವು ಇಂತಹ ಪ್ರಯತ್ನಗಳಿಗೆ ಬೆಂಬಲ ದೊರೆಯುತ್ತಿದೆ.
ತಂತ್ರಜ್ಞಾನ-ಪರಿಸರ ಕಾಳಜಿಯ ಸಂಗಮ:
ರಶ್ಮಿ ಪಿ.ಎನ್ ಅವರು ಎಂಜಿನಿಯರಿಂಗ್‌ನಲ್ಲಿ ಬಿಇ (ಇಂಡಸ್ಟ್ರಿಯಲ್) ಮತ್ತು ಎಂ.ಟೆಕ್ (ಪಾಲಿಮರ್ ಸೈನ್ಸ್) ಪದವಿ ಪಡೆದಿದ್ದು, ಪಾಲಿಮರ್ ಕ್ಷೇತ್ರದ ತಮ್ಮ ಜ್ಞಾನವನ್ನು ಪರಿಸರ ಸ್ನೇಹಿ ಉತ್ಪನ್ನಗಳ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಸಿಹಿತಿನಿಸು ಹಂಚುವಾಗ ಅದರ ಪ್ಯಾಕಿಂಗ್ ಕೂಡ ಪರಿಸರಕ್ಕೆ ಸಿಹಿಯಾಗಿರಲಿ ಎಂಬ ಆಶಯದೊಂದಿಗೆ ರೂಪುಗೊಂಡಿರುವ ಈ ಬಗಾಸ್ ಬಾಕ್ಸ್‌ಗಳು, 'ಪ್ಲಾಸ್ಟಿಕ್‌ಗೆ ವಿದಾಯ, ಪ್ರಕೃತಿಗೆ ಸ್ವಾಗತ' ಎಂಬ ಸಂದೇಶವನ್ನು ಸಾರುತ್ತಿವೆ.

ಜೈವಿಕ ವಸ್ತು ಸಂಶೋಧನೆಯಲ್ಲಿ ಪ್ರೊ. ನರೇಂದ್ರ ರೆಡ್ಡಿ:
ಬೆಂಗಳೂರಿನ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 'CIIRC' ವಿಭಾಗದಲ್ಲಿ ಪ್ರಾಧ್ಯಾಪಕ ಪ್ರೊ.ನರೇಂದ್ರ ರೆಡ್ಡಿ, ಬಯೋಪಾಲಿಮರ್, ಬಯೋಮೆಟೀರಿಯಲ್ಸ್, ಸುಸ್ಥಿರ ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಅವರು, ಅಗ್ರ ಶೇಕಡ 2% ವಿಜ್ಞಾನಿಗಳಲ್ಲಿಯೂ ಗುರುತಿಸಲ್ಪಟ್ಟಿದ್ದಾರೆ.
180ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಹಾಗೂ 8 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 15,000ಕ್ಕೂ ಹೆಚ್ಚು ಸೈಟೇಶನ್‌ಗಳನ್ನು ಹೊಂದಿದ್ದಾರೆ. ಕೃಷಿ ತ್ಯಾಜ್ಯದಿಂದ ಜೈವಿಕ ವಿಘಟನೀಯ ವಸ್ತುಗಳ ಅಭಿವೃದ್ಧಿ ಸೇರಿದಂತೆ, ಸುಸ್ಥಿರ ವಸ್ತು ವಿಜ್ಞಾನ ಕ್ಷೇತ್ರದಲ್ಲಿ ಅವರ ಸಂಶೋಧನೆ ಗಮನಾರ್ಹವಾಗಿದೆ. ಕರ್ನಾಟಕ ಸರ್ಕಾರದ 'ಸರ್ ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ’ಯನ್ನು ಅವರು ಪಡೆದಿದ್ದಾರೆ.
ಈ ಬಯೋಡಿಗ್ರೇಡಬಲ್ ಪ್ಯಾಕಿಂಗ್ ಬಾಕ್ಸ್‌ಗಳನ್ನು ಆರ್ಡರ್ ಮಾಡಲು 79752 25469 ಅಥವಾ 7337612660 ಸಂಖ್ಯೆಯನ್ನು ಸಂಪರ್ಕಿಸಿರಿ.