ಮಂಗರವಲ್ಲಿ: ಆರೋಗ್ಯಕಾರಿ ಪ್ರಯೋಜನಗಳೇನು ಗೊತ್ತಾ?

Mangaravalli: ಇದು ಪ್ರಮುಖ ಆಯುರ್ವೇದ ಸಸ್ಯವಾಗಿದ್ದು, ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.

Aug 30, 2026 - 10:20
ಮಂಗರವಲ್ಲಿ: ಆರೋಗ್ಯಕಾರಿ ಪ್ರಯೋಜನಗಳೇನು ಗೊತ್ತಾ?

ಕಂದವೇಲವನ್ನು ಮರಾಠಿಯಲ್ಲಿ ಕಂದವೇಲ, ಹಿಂದಿಯಲ್ಲಿ ಹಡ್ಜೋಡ್, ಸಂಸ್ಕೃತದಲ್ಲಿ ಅಸ್ಥಿಸಂಹಾರ, ಅಸ್ಥಿಶೃಂಖಲಾ ಹಾಗೂಕನ್ನಡದಲ್ಲಿ ಮಂಗರವಲ್ಲಿ, ಮಂಗರ ಬಳ್ಳಿ, ಸಂಧಾನಿ ಬಳ್ಳಿ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು 'Cissus Quadrangularis'. ಇದು ಭಾರತದ ಬಿಸಿಲಿನ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ, ಬಹುವಾರ್ಷಿಕ ಬಳ್ಳಿ ಸಸ್ಯವಾಗಿದೆ.
 
ಲಕ್ಷಣಗಳೇನು:
 
ಇದರ ಕಾಂಡವು ವಿಶಿಷ್ಟವಾಗಿದೆ. ನಾಲ್ಕು ಮೂಲೆಗಳಿಂದ ಕೂಡಿದ್ದು, ದಪ್ಪ, ರಸಭರಿತ ಮತ್ತು ಹಸಿರು ಬಣ್ಣದಲ್ಲಿರುತ್ತದೆ. ಕಾಂಡದ ಪ್ರತಿ ಗಂಟಿನಲ್ಲಿ ಎಲೆಗಳು ಹಾಗೂ ತೆಳುವಾದ ಆಕರ್ಷಕ ಬಳ್ಳಿಗಳು ಬರುತ್ತವೆ. ಎಲೆಗಳು ಚಿಕ್ಕದಾಗಿ, ತ್ರಿಕೋನಾಕಾರದಲ್ಲಿರುತ್ತವೆ. ಇದಕ್ಕೆ ಸಣ್ಣ ಬಿಳಿ ಅಥವಾ ಗುಲಾಬಿ ಹೂಗಳು ಬಿಟ್ಟು, ನಂತರ ಕೆಂಪು ಬಣ್ಣದ ಸಣ್ಣ ಹಣ್ಣುಗಳು ಆಗುತ್ತವೆ. ಇದನ್ನು ಮನೆಯಂಗಳದಲ್ಲಿ, ಬೇಲಿಗಳ ಮೇಲೆ ಸುಲಭವಾಗಿ ಬೆಳೆಸಬಹುದು.
 
ಆಯುರ್ವೇದದಲ್ಲಿ ಮಹತ್ವ:
 
ಆಯುರ್ವೇದದಲ್ಲಿ ಕಂದವೇಲವನ್ನು ಮೂಳೆ ಮುರಿತಕ್ಕೆ ರಾಮಬಾಣ ಎಂದು ಪರಿಗಣಿಸಲಾಗಿದೆ. 'ಅಸ್ಥಿಸಂಹಾರ' ಎಂದರೆ ಮೂಳೆಗಳನ್ನು ಕೂಡಿಸುವುದು ಎಂದರ್ಥ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಕ್ಯಾರೋಟಿನ್, ಫೈಟೊಸ್ಟೆರಾಲ್ ಗಳು ಹಾಗೂ ಕೀಟೋಸ್ಟೆರಾಯ್ಡ್ ಗಳು ಹೇರಳವಾಗಿವೆ. ಇದು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುವ ಆಸ್ಟಿಯೋಬ್ಲಾಸ್ಟ್ ಕೋಶಗಳನ್ನು ಉತ್ತೇಜಿಸುತ್ತದೆ.
 
ಪ್ರಮುಖ ಉಪಯೋಗಗಳು:
 
ಮೂಳೆ ಮುರಿತ & ಕೀಲು ನೋವು: ಮುರಿದ ಮೂಳೆ ಬೇಗ ಕೂಡಿಸಲು ಇದರ ಕಾಂಡದ ರಸವನ್ನು ಕುಡಿಯಲು ಕೊಡುತ್ತಾರೆ. ಕಾಂಡವನ್ನು ಅರೆದು ಲೇಪ ಹಾಕುತ್ತಾರೆ. ಸಂಧಿವಾತ, ಕೀಲು ಊತ, ಬೆನ್ನು ನೋವು, ಸ್ನಾಯು ಸೆಳೆತಕ್ಕೆ ಇದು ಅತ್ಯುತ್ತಮ ರಾಮಬಾಣವಾಗಿದೆ.
 
ಜೀರ್ಣಕ್ರಿಯೆ ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿ: ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಗ್ಯಾಸ್, ಅಜೀರ್ಣ, ಮಲಬದ್ಧತೆಯನ್ನು ನಿವಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 
ಮಧುಮೇಹ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯವನ್ನು ರಕ್ಷಿಸಲು ಉಪಯುಕ್ತವಾಗಿದೆ.
 
ಮಹಿಳೆಯರ ಆರೋಗ್ಯ: ಅನಿಯಮಿತ ಮುಟ್ಟು ಹಾಗೂ ಋತುಬಂಧದ ನಂತರದ ಮೂಳೆ ಸವೆತವನ್ನು ತಡೆಯಲು ಇದನ್ನು ಬಳಸಲಾಗುತ್ತದೆ.
 
ಬಳಸುವ ವಿಧಾನ: ತಾಜಾ ಕಾಂಡದ 10-15 ಮಿ.ಲೀ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಒಂದು ಬಾರಿ ಸೇವಿಸಬಹುದು. ಒಣಗಿದ ಪುಡಿಯನ್ನು 1-3 ಗ್ರಾಂ ನಷ್ಟು ಬೆಚ್ಚಗಿನ ನೀರಿನಲ್ಲಿ ತೆಗೆದುಕೊಳ್ಳಬಹುದು. ಆದರೆ ಇದನ್ನು ಹೆಚ್ಚು ಸೇವಿಸಿದರೆ ಹೊಟ್ಟೆ ಉರಿ ಬರಬಹುದು.
 
ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಚಿಕ್ಕ ಮಕ್ಕಳು ವೈದ್ಯರ ಸಲಹೆ ಇಲ್ಲದೆ ಬಳಸಬಾರದು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.