ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿಯಲ್ಲಿ ಬೃಹತ್ ಅಕ್ರಮ: ಹೆಚ್.ಡಿ.ಕುಮಾರಸ್ವಾಮಿ
HD Kumaraswamy: ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿಯಲ್ಲಿ ಬೃಹತ್ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಇಲಾಖೆ ಮಂತ್ರಿಯಾಗಿದ್ದಾಗ, 2022ರಲ್ಲಿ ಕೆಪಿಎಸ್‌ಸಿ ಮೂಲಕ ನಡೆದಿರುವ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ಆಯ್ಕೆ ಹಾಗೂ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು. ಈ ಅಕ್ರಮ ನೇಮಕಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು. ಸಚಿವ ಸ್ಥಾನಕ್ಕೆ ಅವರು, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಇದಾಗಿದೆ. ಇಡೀ ಹಗರಣವನ್ನು ಅವರು ಮುಚ್ಚಿ ಹಾಕಲು ಅವರು, ಈಗ ಗೃಹ ಖಾತೆ ವಹಿಸಿಕೊಂಡಂತಿದೆ ಎಂದು ದೂರಿದರು.
ಅಲ್ಲದೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೆಚ್‌ಡಿಕೆ ಬಿಡುಗಡೆ ಮಾಡಿದರು. ತನಿಕಾ ವರದಿ, ಒಎಂಆರ್ ಶೀಟ್‌ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವಾರು ದಾಖಲೆಗಳನ್ನು ಮಾಧ್ಯಮಗಳಿಗೆ ಸಚಿವರು ನೀಡಿದರು.
ಪ್ರಿಯಾಂಕ್ ಖರ್ಗೆ, ಒಂದು ಕಡೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ ಎಂದು ವೀರಾವೇಶದಿಂದ ಮಾತನ್ನಾಡುತ್ತಾರೆ. ಇನ್ನೊಂದು ಕಡೆ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದಲ್ಲಿ ಭಾಗಿಯರುವ ಆರೋಪ ಎದುರಿಸುತ್ತಿರುವ, ಅಂದು ಪರೀಕ್ಷಾ ನಿಯಂತ್ರಕರಾಗಿದ್ದ ಐಪಿಎಸ್ ಅಧಿಕಾರಿ ಗ್ಯಾನೇಂದ್ರ ಗಂಗ್ವಾರ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಪ್ರಿಯಾಂಕ್ ಖರ್ಗೆ ಆರೋಪಿತ ಅಧಿಕಾರಿಗಳನ್ನು ಯಾವ ಆಧಾರದ ಮೇಲೆ ಸಮರ್ಥನೆ ಮಾಡಿಕೊಳ್ಳುತ್ತಾರೆ? ಸಚಿವರಾದ ಅವರಿಗೆ ಜವಾಬ್ದಾರಿ ಬೇಡವೇ? ಜಾರಿ ನಿರ್ದೇಶನಾಲಯ (ED) ದಾಳಿ ಮಾಡುತ್ತಿದ್ದಂತೆಯೇ ಅವರು ನಾಪತ್ತೆಯಾದರು. ಅವರ ನಾಪತ್ತೆಗೂ ಸಚಿವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಕೆಪಿಎಸ್‌ಸಿ ಅಕ್ರಮಕ್ಕೆ ಕೊನೆಯೇ ಇಲ್ಲದಾಗಿದೆ. 400 ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿಯೂ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗಿದೆ. ಒಂದೊಂದು ಹುದ್ದೆಗೆ ರೂ.80 ಲಕ್ಷ ರೇಟು ಫಿಕ್ಸ್ ಮಾಡಿದ್ದಾರೆ ಎಂದು ಮಂಜುನಾಥ್ ಎಂಬುವವರು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಇಡಿ ಅಧಿಕಾರಿಗಳು ಕೇಸು ದಾಖಲಿಸುತ್ತಾರೆ. ಅದಾದ ಕೂಡಲೇ, ಈ ಅಧಿಕಾರಿ ನಾಪತ್ತೆ ಆಗಿದ್ದಾರೆ. ಇದರ ಬಗ್ಗೆ ಅತೀ ಉತ್ಸಾಹದಿಂದ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ತಮ್ಮ ತಂದೆಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಸರ್ಕಾರದ ಅನುಮತಿ ಪಡೆದು ಅವರ ಸ್ವಂತ ಊರು ಲಖನೌಗೆ ಹೋಗಿದ್ದಾರೆ ಎಂದು ಹೇಳಿದ್ದರು. ಅಲ್ಲದೆ, ಗ್ಯಾನೇಂದ್ರ ನನಗೆ ದೂರವಾಣಿ ಕರೆ ಮಾಡಿದ್ದರು. ತಮ್ಮ ತಂದೆಗೆ ಹುಷಾರಿಲ್ಲ ಎಂದು ತಿಳಿಸಿದ್ದರು. ಎರಡು ದಿನಗಳಲ್ಲಿ ವಾಪಸ್ ಬೆಂಗಳೂರಿಗೆ ಬರುತ್ತೇನೆ ಎಂದು ಮಾಹಿತಿ ನೀಡಿದ್ದರು. ತಮ್ಮ ಮೇಲಿನ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾಗಿ ಎಂದು ಗೃಹ ಸಚಿವರು ತಿಳಿಸಿದ್ದರು ಎಂಬುದಾಗಿ ಪ್ರಿಯಾಂಕ್ ಖರ್ಗೆ ಅವರ ಮಾಧ್ಯಮ ಹೇಳಿಕೆಗಳನ್ನು ಕುಮಾರಸ್ವಾಮಿ ಉಲ್ಲೇಖಿಸಿದರು.
ಆಗಸ್ಟ್ 25ರಂದು ಇನ್ನೊಂದು ಹೇಳಿಕೆ ನೀಡಿದ್ದ ಗೃಹ ಸಚಿವರು, ಗ್ಯಾನೇಂದ್ರ ಎಲ್ಲಿದ್ದಾರೋ ಗೊತ್ತಿಲ್ಲ ಎನ್ನುತ್ತಾರೆ. ಗೊತ್ತಿಲ್ಲ ಅಂದರೆ ಗೃಹ ಇಲಾಖೆ ಯಾಕೆ ನಡೆಸ್ತೀರಾ? ಗೃಹ ಇಲಾಖೆ ಸ್ವಚ್ಚ ಮಾಡ್ತೀನಿ ಎನ್ನುತ್ತೀರಿ. ಮತ್ತೊಂದು ಕಡೆ ಗ್ಯಾನೇಂದ್ರಗೆ ರಕ್ಷಣೆ ಕೊಟ್ಟಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಅವರು ತಮ್ಮಲ್ಲಿ ಪಾರದರ್ಶಕತೆ ಅಥವಾ ಮಾತಿನ ಮೇಲೆ ನಿಗಾ ಇದ್ದರೆ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಸಿಬಿಐಗೆ ಕೊಡಬೇಕು ಎಂದು ಹೇಳಿತ್ತು. ಈ ಸರ್ಕಾರದ ಯೋಗಿತೆಗೆ ಒಂದು ಪ್ರಕರಣವನ್ನು ದಾಖಲಿಸಿ ಎಫ್ಐಆರ್ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.
ಈ ವಿಷಯವನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಈಗ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಕ್ರಮ ಆಗದೇ ನಾನು ಬಿಡುವುದಿಲ್ಲ. ಈ ಅಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾಗಿಯಾಗಿದ್ದಾರೆ. ಅಂದಿನ ಕಾರ್ಯದರ್ಶಿ ಕೂಡ ಶಾಮೀಲಾಗಿದ್ದಾರೆ ಎಂದು ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದರು.
ಯುವ ಜನರು ಬೀದಿಗೆ ಇಳಿಯಬೇಕು:
ರಾಜ್ಯದಲ್ಲಿ ಇಷ್ಟೆಲ್ಲ ಅನ್ಯಾಯ ಮತ್ತು ಅಕ್ರಮಗಳು ನಡೆಯುತ್ತಿದ್ದರು ನಿರುದ್ಯೋಗಿಗಳು ಮತ್ತು ಯುವ ಸಮುದಾಯ, ವಿದ್ಯಾರ್ಥಿಗಳು ಸುಮ್ಮನಿರುವುದು ಬೇಡ. ನೀವೆಲ್ಲ ಬೀದಿಗಿಳಿದು ಹೋರಾಟ ನಡೆಸಬೇಕು. ಇಷ್ಟೆಲ್ಲ ನಡೆಯುತ್ತಿದ್ದರು ಏಕೆ ಮೌನವಾಗಿದ್ದೀರಿ? ದಯವಿಟ್ಟು ಬೀದಿಗಿಳಿಯಿರಿ ಎಂದು ಯುವ ಜನರಿಗೆ ಕರೆ ನೀಡಿದರು.