ಪಟ್ಟೆ ಶ್ರೀಕೃಷ್ಣ ಸಮೂಹ ಸಂಸ್ಥೆಗಳಲ್ಲಿ 'ಮಾಯಕದಬಿನ್ನೆದಿ' ತುಳು ಯಕ್ಷಗಾನ
Patte Sri Krishna Educational Institutions: ಇತ್ತೀಚೆಗೆ ಪಟ್ಟೆಯ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಭಾಭವನದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಕಟೀಲು, ತುಳುವ ಮಹಾಸಭೆ ಪುತ್ತೂರು ವಲಯ, ತುಳುವೇಶ್ವರಿ ಆಟ ಕೂಟ ಸಹಯೋಗದಲ್ಲಿ, ಸೋಣದ ದುನಿಪು & ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ ಬರೆದ 'ಮಾಯಕದ ಬಿನ್ನೆದಿ' ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.
ಪುತ್ತೂರು (ಪಟ್ಟೆ ಬಡಗನ್ನೂರು): 'ತುಳು ಭಾಷೆಗೆ ಅಂತರರಾಷ್ಟ್ರೀಯ ಮನ್ನಣೆ ದೊರೆಯುವಂತಾಗಬೇಕು. ಈ ಮೂಲಕ ತುಳು ಭಾಷೆಗೆ ವಿಶ್ವ ಮಾನ್ಯತೆ ಸಿಗಬೇಕು. ಗಂಡು ಕಲೆ ಎಂದು ಹೆಸರಾದ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು' ಎಂದು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹೇಳಿದರು.
ಇತ್ತೀಚೆಗೆ ಪಟ್ಟೆಯ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಭಾಭವನದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಕಟೀಲು, ತುಳುವ ಮಹಾಸಭೆ ಪುತ್ತೂರು ವಲಯ, ತುಳುವೇಶ್ವರಿ ಆಟ ಕೂಟ ಸಹಯೋಗದಲ್ಲಿ, ಸೋಣದ ದುನಿಪು & ತುಳುವ ವಾಲ್ಮೀಕಿ ಮಂದಾರ ಕೇಶವ ಭಟ್ ಬರೆದ 'ಮಾಯಕದ ಬಿನ್ನೆದಿ' ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಈ ವೇಳೆ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಭಾನುಮತಿ ಶೆಟ್ಟಿ ಕಕ್ವಗುತ್ತು ಉದ್ಘಾಟಿಸಿದರು. 'ಯಕ್ಷಗಾನದ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು' ಎಂದು ಕರೆ ನೀಡಿದರು.
ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ.ರಾಜೇಶ್ ಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 'ಸೋಣದ ದುನಿಪು'ನ ಕುರಿತು ಮಾತನಾಡಿದರು. ಆಟಿ ತಿಂಗಳ ಕಷ್ಟದ ದಿನಗಳು, ಸೋಣ ತಿಂಗಳ ಹಬ್ಬದ ದಿನಗಳು, ಆಚಾರ-ವಿಚಾರಗಳು ಹಾಗೂ ಆಹಾರ ಪದ್ಧತಿಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಮಾತನಾಡಿ, 'ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ವಿನೂತನ ಕಾರ್ಯಕ್ರಮ ಏರ್ಪಡಿಸಿ, ಸಂಸ್ಥೆಯ ಹೆಸರನ್ನು ಜನಪ್ರಿಯಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಿ, ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು ಶ್ರಮ ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ' ಎಂದು ಹೇಳಿದರು.
ಮಂದಾರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಸಪ್ರೆ, ಪುತ್ತೂರು ವಲಯದ ತುಳುವ ಮಹಾಸಭೆಯ ಸಂಚಾಲಕ ಮನೋಹರ ರೈ ಮನವಳಿಕೆ, ಅಧ್ಯಕ್ಷೆ ವೇದಾವತಿ ರಾಜೇಶ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ತುಳು ವಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ್ ರೈ, ಬಸ್ರೂರು ತುಳುವೇಶ್ವರಿ ದೇವಸ್ಥಾನದ ಪ್ರಧಾನ ಸಂಚಾಲಕ ಅರವಿಂದ ಬೆಳ್ಚಡ ಉಪಸ್ಥಿತರಿದ್ದರು.
ಪುತ್ತೂರಿನ ದ್ವಾರಕಾ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕ ಗಣರಾಜ ಕುಂಬ್ಳೆ ಅವರು ಸ್ವಾಗತಿಸಿ, ವಂದಿಸಿದರು.
ಪ್ರಶಾಂತ್ ರೈ ಮುಂಡಾಳಗುತ್ತು, ಪ್ರಮೋದ್ ಕುಮಾರ್, ರೋಹಿತ್ ಉಚ್ಚಿಲ, ಅಕ್ಷಯ್ ಮಾರ್ನಡ್ , ಶಶಿಕಿರಣ್ ಕಾವು, ಚಂದ್ರಶೇಖರ್ ಧರ್ಮಸ್ಥಳ, ಸಂಸ್ಥೆ ವಿದ್ಯಾರ್ಥಿಗಳಾದ 10ನೇ ತರಗತಿಯ ಆದಿತ್ಯಕೃಷ್ಣ, 9ನೇ ತರಗತಿಯ ಸ್ವರೂಪ್, ಅಹನ ಹಾಗೂ ಪಲ್ಲವಿ ಕಲಾವಿದರಾಗಿ ಪಾಲ್ಗೊಂಡಿದ್ದರು.
ಪಟ್ಟೆ ವಿದ್ಯಾ ಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ, ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಊರಿನ ಯಕ್ಷಗಾನ ಕಲಾಭಿಮಾನಿಗಳು ಹಾಗೂ ನಿವೃತ್ತ ಶಿಕ್ಷಕರು ಭಾಗವಹಿಸಿದ್ದರು.