ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಧಿಕೃತ ಬೆಂಬಲ ಕೋರಿ ಸಿಎಂ ಡಿಕೆಶಿಗೆ ಕ್ಯಾ.ಚೌಟ ಪತ್ರ

Brijesh Chowta: ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ ಸಂಬಂಧ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಬೆಂಬಲ ಕೋರಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

Aug 25, 2026 - 21:06
Aug 25, 2026 - 21:17
ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಧಿಕೃತ  ಬೆಂಬಲ ಕೋರಿ ಸಿಎಂ ಡಿಕೆಶಿಗೆ ಕ್ಯಾ.ಚೌಟ ಪತ್ರ

ದಕ್ಷಿಣ ಕನ್ನಡ: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ (South Western Railway) ವಲಯಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು  ಕಾರ್ಯರೂಪಕ್ಕೆ ತರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ರೀತಿಯ ಆಡಳಿತಾತ್ಮಕ ಸಹಕಾರ ನೀಡಬೇಕೆಂದು ಕೋರಿ, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ (Brijesh Chowta) ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗೆ ಬರೆದಿರುವ ಈ ಸುಧೀರ್ಘ ಪತ್ರದಲ್ಲಿ, ಕ್ಯಾ.ಚೌಟ ಅವರು ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಮಂಗಳೂರು ರೈಲು ಜಾಲವನ್ನು ಪಾಲ್ಘಾಟ್‌ ವಿಭಾಗದಿಂದ ಬೇರ್ಪಡಿಸಿ, ಮೈಸೂರು ವಿಭಾಗಕ್ಕೆ ಸೇರಿಸುವುದಕ್ಕೆ ಈಗಾಗಲೇ ರೈಲ್ವೆ ಸಚಿವಾಲಯವು ಅಗತ್ಯ ಕ್ರಮ ಕೈಗೊಂಡು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಕರಾವಳಿ ರೈಲು ಪ್ರಯಾಣಿಕರ ಬಹು ವರ್ಷಗಳ ಈ ಬೇಡಿಕೆ ಈಡೇರಿದ್ದು, ಈ ಭಾಗಕ್ಕೆ ಮಾತ್ರವಲ್ಲ ಸಮಗ್ರ ಕರ್ನಾಟಕದ ರೈಲು ಜಾಲ ಬಲವರ್ಧನೆಗೂ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹೀಗಿರುವಾಗ, ಆದಷ್ಟು ಬೇಗ ಮಂಗಳೂರು ರೈಲು ಭಾಗವನ್ನು ಮೈಸೂರು ವಿಭಾಗದ ಜೊತೆಗೆ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಆಡಳಿತಾತ್ಮಕ ವಿಳಂಬ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ರೈಲ್ವೆ ಮಂಡಳಿ ಹೊರಡಿಸಿರುವ ಮಹತ್ವದ ಈ ಆದೇಶ ಮರುಪರಿಶೀಲಿಸುವಂತೆ ಕೇರಳ ಮುಖ್ಯಮಂತ್ರಿಗಳಿಂದ ಹಿಡಿದು, ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಈ ಎಲ್ಲ ಬೆಳವಣಿಗೆ ಗಮನಿಸಿರುವ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ರೈಲು ಭಾಗ ಮೈಸೂರು ವಿಭಾಗಕ್ಕೆ ಸೇರಿಸುವ ಮೂಲಕ ಕರ್ನಾಟಕದ ಹಿತ ಕಾಪಾಡುವುದಕ್ಕೆ ಡಿ.ಕೆ.ಶಿವಕುಮಾರ್ ಅವರು ಬಹಳ ತುರ್ತಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಆ ಮೂಲಕ, ಯಾವುದೇ ಕಾರಣಕ್ಕೂ ರೈಲ್ವೆ ಸಚಿವಾಲಯದ ಈ ಆದೇಶ ಜಾರಿಗೆ ಅಡ್ಡಿ-ಆತಂಕಗಳು ಎದುರಾಗದಂತೆ ನೋಡಿಕೊಳ್ಳಬೇಕೆಂದು ಕೋರಿದ್ದಾರೆ.

ಈ ನಿರ್ಧಾರದಿಂದ ಮಂಗಳೂರು ರೈಲ್ವೆ ಜಾಲದ ಸಮಗ್ರ ಸುಧಾರಣೆ, ಆಡಳಿತ ವ್ಯವಸ್ಥೆ ಹಾಗೂ ಕಾರ್ಯಾಚರಣೆಗೆ ಹೆಚ್ಚಿನ ಅನುಕೂಲವಾಗಲಿದೆ.  ಭಾರತ ಸರ್ಕಾರವು ವಸ್ತುಸ್ಥಿತಿಯ ಪರಾಮರ್ಶಿಸಿ, ಇಡೀ ಕರಾವಳಿ ಹಾಗೂ ಕರ್ನಾಟಕದ ರೈಲು ವ್ಯವಸ್ಥೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವುದಕ್ಕೆ ಮಹತ್ವದ ನಿರ್ಧಾರವನ್ನು ಅಂತಿಮವಾಗಿ ಕೈಗೊಂಡು ಅಧಿಸೂಚನೆ ಹೊರಡಿಸಿದೆ. ಹೀಗಿರುವಾಗ ಕೇಂದ್ರ ಸರ್ಕಾರದ ಈ ತೀರ್ಮಾನವನ್ನು ನೆರೆಯ ರಾಜ್ಯದ ವಿರುದ್ಧದ ನಿಲುವಾಗಿ ನೋಡದೆ, ಮಂಗಳೂರಿನ ಆಡಳಿತಾತ್ಮಕ ಅಗತ್ಯವೆಂದು ಪರಿಗಣಿಸಬೇಕಿದೆ. ಅಲ್ಲದೆ, ಕೇರಳದ ಕಡೆಯಿಂದ ಅಪಸ್ವರ ಕೇಳಿ ಬಂದಿರುವ ಕಾರಣ, ಕರ್ನಾಟಕ ಸರ್ಕಾರವು ತನ್ನ ಸ್ಪಷ್ಟ ನಿಲುವನ್ನು ಕೂಡ ಕೇಂದ್ರ ಸರ್ಕಾರದ ಮುಂದೆ ಅಧಿಕೃತವಾಗಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕ್ಯಾ.ಚೌಟ, ಸಿಎಂ ಡಿಕೆ ಶಿವಕುಮಾರ್‌ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.