ಮಹಾಪ್ರಾಣದ ಉಚ್ಚಾರಣೆಯಿಂದ ದೇಹದಲ್ಲಿ ಅಗ್ನಿ ಜಾಗೃತಿ: ರಾಘವೇಶ್ವರ ಶ್ರೀ
Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ವರ್ಣಮಾಲೆಯಲ್ಲಿ ಮಹಾಪ್ರಾಣ ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ ದೇಹದಲ್ಲಿ ಅಗ್ನಿ ಜಾಗೃತಿ ಉಂಟಾಗುತ್ತದೆ. ಮಹಾಪ್ರಾಣವನ್ನು ಉಚ್ಚರಿಸುವಾಗ, ನಾಭಿಸ್ಥಾನದಲ್ಲಿ ಒತ್ತಡ ಉಂಟಾಗುವುದರಿಂದ ಅಗ್ನಿಯ ಬಲವೃದ್ಧಿಯಾಗುತ್ತದೆ. ಅಕ್ಷರಗಳನ್ನು ಸಮರ್ಪಕವಾಗಿ ಉಚ್ಚರಿಸುವುದರಿಂದ ಅಪ್ರತ್ಯಕ್ಷವಾಗಿ ಅಗ್ನಿಯನ್ನು ಪ್ರಚೋದಿಸಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ನೀಡಿದರು.
ಜೀರ್ಣಕ್ರಿಯೆಯನ್ನು ಅರಿತುಕೊಳ್ಳುವುದು ಆಹಾರವನ್ನು ಜೀರ್ಣಮಾಡಿಕೊಂಡಷ್ಟು ಸುಲಭವಲ್ಲ. ದೇಹದಲ್ಲಿರುವ ಎಲ್ಲಾ ಪ್ರಮುಖ 18 ಅಗ್ನಿಗಳು ಜಠರಾಗ್ನಿಯನ್ನು ಹೊಂದಿಕೊಂಡಿವೆ. ಜಠರಾಗ್ನಿಯ ಮೇಲಾಗುವ ವ್ಯತ್ಯಾಸವು ಬೇರೆಲ್ಲಾ ಅಗ್ನಿಗಳ ಮೇಲೂ ಪರಿಣಾಮವನ್ನು ಬೀರುತ್ತದೆ. ವಿಧಿವತ್ತಾದ ಹಿತ-ಮಿತ ಹಾಗೂ ಯುಕ್ತವಾದ ಆಹಾರ ಪಾನೀಯಗಳೇ ಇಂಧನವಾಗಿ ಜಠರಾಗ್ನಿಯು ಉತ್ತಮವಾಗಿ ಕಾರ್ಯನಿರ್ವಹಿಸಲು ಕಾರಣವಾಗುತ್ತದೆ. ದೇಹಕ್ಕೆ ಶಕ್ತಿ ಹಾಗೂ ಆಯುಷ್ಯ ಎರಡೂ ಜಠರಾಗ್ನಿಯಿಂದಲೇ ಸಿಗುತ್ತದೆ ಎಂದರು.
ಹೊಟ್ಟೆಯೊಳಗೊಂದು ಅಡುಗೆಮನೆ: ಕೃಕರ ಎಂಬ ಪ್ರಾಣವು ಹಸಿವಿನ ಸೂಚನೆ ಕೊಡುವುದರ ಮೂಲಕ ಊಟದ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರಾಣವು ಆಹಾರವನ್ನು ಬಾಯಿಯಿಂದ ಜಠರಕ್ಕೆ ತಳ್ಳುತ್ತದೆ. ಸಮಾನ ವಾಯುವು ಆಹಾರವನ್ನು ಪಾಕಮಾಡಿ, ಸಾರ ಮತ್ತು ಕಲ್ಮಷಗಳನ್ನು ವಿಂಗಡಿಸುತ್ತದೆ. ವ್ಯಾನ ವಾಯುವು ಸಾರವನ್ನು ದೇಹದ ಅಂಗಾಂಗಗಳಿಗೆ ತಲುಪಿಸುತ್ತದೆ. ಅಪಾನ ವಾಯುವು ಉಳಿದ ಕಲ್ಮಷವನ್ನು ಹಾಗೂ ಜೀರ್ಣವಾಗದೇ ಉಳಿದ ಅಂಶವನ್ನು ದೇಹದಿಂದ ವಿವಿಧ ರೂಪದಲ್ಲಿ ಹೊರಗೆ ಹಾಕುತ್ತದೆ. ಉದಾನ ವಾಯುವು ಆಹಾರದ ಸಾರದಿಂದ ದೇಹಕ್ಕೆ ಬಲ, ಬಣ್ಣಗಳನ್ನು ನೀಡುತ್ತದೆ. ಹೀಗೆ ಐದು ಪ್ರಾಣಗಳು ಹೊಟ್ಟೆಯೊಳಗೊಂದು ಅಡುಗೆಮನೆಯನ್ನೇ ನಡೆಸುತ್ತವೆ ಎಂದು ವಿವರಿಸಿದರು.
ಊಟವನ್ನು ಸ್ವೀಕರಿಸುವಾಗ ನಾಗವೆಂಬ ಪ್ರಾಣವು ಹೊಟ್ಟೆ ತುಂಬಿರುವುದನ್ನು ಸೂಚಿಸುತ್ತದೆ. ಆಹಾರವನ್ನು ಸೇವಿಸುವಾಗ ದೇಹವು ನೀಡುವ ಸೂಚನೆಗಳನ್ನು ನಾವು ಅನುಸರಿಸಬೇಕು. ಊಟವನ್ನು ಮಾಡುವಾಗ ತೇಗು ಬಂದಾಗ ಊಟಮಾಡುವುದನ್ನು ನಿಲ್ಲಿಸಬೇಕು. ದೇಹದ ಈ ಸೂಚನೆಯನ್ನು ನಾವು ಲೆಕ್ಕಿಸದೇ ಊಟವನ್ನು ಮುಂದುವರಿಸಿದರೆ, ಕಾಲಕ್ರಮೇಣ ಆ ಸಹಜ ಪ್ರಕ್ರಿಯೆಯೇ ನಿಂತುಹೋಗುತ್ತದೆ. ಇದು ಮುಂದಿನ ವಿಪತ್ತುಗಳಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.
ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀಗಳ ಆಶೀರ್ವಾದ ಪಡೆದರು.
ಹೊನ್ನಾವರ ಹವ್ಯಕ ಮಂಡಲದ ಗೇರುಸೊಪ್ಪ, ಹೊನ್ನಾವರ, ಕಡ್ಲೆ, ಮುಗ್ವಾ, ಹೊಸಾಕುಳಿ ಹವ್ಯಕ ವಲಯಗಳ ಪರವಾಗಿ ಲಕ್ಷ್ಮೀನಾರಾಯಣ ಹೆಗಡೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ನೆರವೇರಿಸಿದರು. ವೇ.ಮೂ.ಸುಬ್ರಹ್ಮಣ್ಯ ಭಟ್ಟ ಅಮ್ಮನವರಮನೆ, ಆರ್.ಜಿ.ಹೆಗಡೆ ಹೊಸಾಕುಳಿ, ಪರಮೇಶ್ವರ ಎನ್ ಭಟ್ಟ, ಕೃಷ್ಣ ಹೆಗಡೆ ಚಿಟ್ಟಾಣಿ, ರೇಷ್ಮಾ ಭಟ್, ದಿನೇಶ ಹೆಗಡೆ, ಮಹೇಶ ಎಂ.ಎನ್, ದಿನ ಪ್ರಧಾನರಾಗಿ ವಿಶ್ವೇಶ್ವರ ಭಟ್ ಎಲಿಯೂರು ಉಪಸ್ಥಿತರಿದ್ದರು.