ಬಕುಲ: ಸುಗಂಧ & ಔಷಧದ ಸಂಗಮ.. ಉಪಯೋಗಗಳೇನು?

Spanish Cherry: 'ಬಕುಲ'ವು ಭಾರತದ ಪುರಾತನ ಹಾಗೂ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಆಯುರ್ವೇದ ಔಷಧೀಯ ವೃಕ್ಷವಾಗಿದೆ. ಇದು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.

Aug 25, 2026 - 09:24
ಬಕುಲ: ಸುಗಂಧ & ಔಷಧದ ಸಂಗಮ.. ಉಪಯೋಗಗಳೇನು?

'ಬಕುಲ'ವು ಭಾರತದ ಪುರಾತನ ಹಾಗೂ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಆಯುರ್ವೇದ ಔಷಧೀಯ ವೃಕ್ಷವಾಗಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ಮಿಮುಸಾಪ್ಸ್ ಎಲೆಂಜಿ (Mimusops Elengi). ಕನ್ನಡದಲ್ಲಿ ರಂಜ, ಮುಳ್ಳುಹೊನ್ನೆ, ಪಗಡೆಮರ, ಸಿನ್ನಮರ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ಬಕುಲ, ಮಧುಗಂಧ, ಸಿಂಹಕೇಸರ ಎನ್ನುವರು. ಇಂಗ್ಲಿಷ್‌ನಲ್ಲಿ ಸ್ಪ್ಯಾನಿಷ್ ಚೆರ್ರಿ, ಬುಲೆಟ್ ವುಡ್ ಎಂಬ ಹೆಸರಿದೆ. ಇದು ನಿತ್ಯಹರಿದ್ವರ್ಣದ, ಸುಮಾರು 15 ರಿಂದ 20 ಮೀಟರ್ ಎತ್ತರ ಬೆಳೆಯುವ ಮರವಾಗಿದೆ.

ಬಕುಲ ಮರದ ಎಲೆಗಳು ಹೊಳಪಿನಿಂದ ಕೂಡಿದ ದಟ್ಟ ಹಸಿರು ಬಣ್ಣದವು. ಇದರ ಹೂವುಗಳು ಚಿಕ್ಕದಾಗಿ, ಬಿಳಿ ಬಣ್ಣದ ನಕ್ಷತ್ರಾಕಾರದಲ್ಲಿದ್ದು, ಅತ್ಯಂತ ಸುಗಂಧಭರಿತವಾಗಿರುತ್ತವೆ. ಸಂಜೆ ಅರಳುವ ಈ ಹೂವುಗಳ ಸುಗಂಧವು ದೂರದವರೆಗೂ ಹರಡುತ್ತದೆ. ಹಣ್ಣುಗಳು ದ್ರಾಕ್ಷಿಯಂತಿದ್ದು, ಹಣ್ಣಾದಾಗ ಕಿತ್ತಳೆ-ಕೆಂಪು ಬಣ್ಣಕ್ಕೆ ತಿರುಗುತ್ತವೆ.

ಆಯುರ್ವೇದದ ಪ್ರಕಾರ, ಬಕುಲದ ಪ್ರತಿಯೊಂದು ಭಾಗವು ಔಷಧೀಯ ಗುಣವನ್ನು ಹೊಂದಿದೆ. ಇದರ ಗುಣಗಳು ಕಷಾಯ, ತಿಕ್ತ, ಮಧುರ ರಸ, ಲಘು ಗುಣ, ಶೀತ ವೀರ್ಯ ಹೊಂದಿದೆ ಎಂದು ಹೇಳಲಾಗಿದೆ.

ಪ್ರಮುಖ ಔಷಧೀಯ ಉಪಯೋಗಗಳು:

ಹಲ್ಲು & ವಸಡುಗಳ ಆರೋಗ್ಯ ವೃದ್ಧಿ: ಬಕುಲವನ್ನು ದಂತ ರೋಗಗಳಿಗೆ ಶ್ರೇಷ್ಠ ಔಷಧವೆಂದು ಆಯುರ್ವೇದದಲ್ಲಿ ಪರಿಗಣಿಸಲಾಗುತ್ತದೆ. ಇದರ ತೊಗಟೆಯ ಕಷಾಯದಿಂದ ದಿನಾಲೂ ಬೆಳಗ್ಗೆ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವು, ವಸಡಿನ ಊತ, ರಕ್ತಸ್ರಾವ, ಬಾಯಿ ದುರ್ವಾಸನೆ ನಿವಾರಣೆಯಾಗುತ್ತದೆ. ಇದರ ಕಡ್ಡಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ.

ತಲೆನೋವು ಮತ್ತು ನೆಗಡಿ ನಿವಾರಣೆಯಾಗುತ್ತದೆ: ಈ ಮರದ ಹೂವಿನ ಚೂರ್ಣವನ್ನು ಮೂಗಿನಲ್ಲಿ ಮೂಸುವುದರಿಂದ ಅಥವಾ ಹೂವಿನ ರಸವನ್ನು ಹಣೆಗೆ ಲೇಪಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಚರ್ಮರೋಗ ಹಾಗೂ ಗಾಯ ವಾಸಿಯಾಗುತ್ತದೆ: ಇದರ ತೊಗಟೆ ಹಾಗೂ ಎಲೆಗಳ ಲೇಪನವು ಚರ್ಮದ ತುರಿಕೆ, ಮೊಡವೆ & ಗಾಯವನ್ನು ಬೇಗ ಗುಣಪಡಿಸಲು ಸಹಕಾರಿಯಾಗಿದೆ

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ: ಈ ಮರದ ಬೀಜ ಮತ್ತು ಹಣ್ಣಿನ ಸೇವನೆಯು ಅತಿಸಾರ, ಭೇದಿ, ಹೊಟ್ಟೆನೋವನ್ನು ನಿಯಂತ್ರಿಸುತ್ತದೆ. ಜೀರ್ಣಾಗ್ನಿಯನ್ನು ಹೆಚ್ಚಿಸುತ್ತದೆ.

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು: ಬಕುಲದ ಹೂವಿನ ಸುಗಂಧವು ಮನಸ್ಸಿಗೆ ಅತ್ಯಂತ ನೆಮ್ಮದಿ ನೀಡುತ್ತದೆ. ಇದರ ಪರಿಮಳವು ಒತ್ತಡ, ಆತಂಕ, ನಿದ್ರಾಹೀನತೆಯನ್ನು ಕಡಿಮೆ ಮಾಡಿ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. 

ಧಾರ್ಮಿಕವಾಗಿ ಬಕುಲವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೇವಾಲಯಗಳು, ಮನೆಗಳ ಅಂಗಳದಲ್ಲಿ ಇದನ್ನು ಬೆಳೆಸುತ್ತಾರೆ. ಇದರ ಹೂವುಗಳನ್ನು ದೇವರ ಪೂಜೆಗೆ, ಹಾರಗಳನ್ನು ಕಟ್ಟಲು ಬಳಸುತ್ತಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.