ಊಟವಿಲ್ಲದೆ ಬದುಕಬಹುದು, ಉಸಿರಿಲ್ಲದೆ ಸಾಧ್ಯವಿಲ್ಲ: ರಾಘವೇಶ್ವರ ಶ್ರೀ
Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಇಂದು 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ಊಟವಿಲ್ಲದೇ ಕೆಲವು ಕಾಲ ಬದುಕಬಹುದು. ಆದರೆ, ಉಸಿರಾಟವಿಲ್ಲದೇ ಜೀವಿಸಲು ಸಾಧ್ಯವೇ ಇಲ್ಲ. ಯೋಗಿಯ ಸಮಾಧಿ ಸ್ಥಿತಿಯಲ್ಲಿ ಮಾತ್ರ ಉಸಿರಾಟವಿಲ್ಲದೆಯೂ ಬದುಕಿರಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಇಂದು 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಪ್ರವಚನ ನೀಡಿದರು.
ಸರಿಯಾದ ಉಸಿರಾಟವು ಮೂಲಾಧಾರ ಚಕ್ರದವರೆಗೆ ಸಂಚರಿಸಬೇಕು. ಉಸಿರಾಡುವಾಗ ಶ್ವಾಸಕೋಶದವರೆಗೆ ಗಾಳಿರೂಪದಲ್ಲಿ ಸಂಚರಿಸಿದರೆ, ಮುಂದೆ ಮೂಲಾಧಾರ ಚಕ್ರದವರೆಗೆ ಶ್ವಾಸವು ಚೈತನ್ಯದ ರೂಪದಲ್ಲಿ ಸಂಚರಿಸುತ್ತದೆ. ಉಸಿರಾಟದ ಗತಿಯು ಹಂಸದಂತೆ ಧಾವಂತ ಇಲ್ಲದೇ ಸರಾಗವಾಗಿ ಆದಾಗ ಸಮಾಧಾನವನ್ನು ಸಾಧಿಸಿಕೊಳ್ಳಲು ಸಾಧ್ಯ. ಸಮಾಧಾನದಿಂದ ಶರೀರ, ಮನಸ್ಸು, ಜೀವನಕ್ಕೆ ಅಪಾರವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು.
ಉಸಿರಾಟದ ಮೂಲಕ ಜೀವಿಯು ಗೊತ್ತಿದ್ದೋ ಗೊತ್ತಿಲ್ಲದೆಯೋ 'ಹಂಸಃ ಹಂಸಃ' ಎಂಬ ಜಪವನ್ನು ನಿರಂತರವಾಗಿ ಜಪಿಸುತ್ತಲೇ ಇರುತ್ತಾನೆ. 'ಹಂ' ಎಂಬುದು ಉಸಿರನ್ನು ಹೊರಬಿಡುವಾಗ ಮತ್ತು 'ಸಃ' ಎಂಬುದು ಉಸಿರನ್ನು ಒಳತೆಗೆದುಕೊಳ್ಳುವಾಗ ತಾನಾಗೇ ಉಂಟಾಗುವ ಹಂಸ ಗಾಯತ್ರೀ ಜಪವಾಗಿದೆ. ಇದು ನಮ್ಮ ಗಮನಕ್ಕೆ ಬಾರದೇ ನಡೆಯುವುದರಿಂದ ಇದಕ್ಕೆ ಅಜಪ ಎಂಬ ಹೆಸರಿದೆ ಎಂದು ಯೋಗಶಾಸ್ತ್ರದ ಆಧಾರದಲ್ಲಿ ಉಸಿರಾಟದ ಪ್ರಕ್ರಿಯೆಯನ್ನು ವಿವರಿಸಿದರು.
ಉಸಿರಾಟವು ಪ್ರಾಣಾಪಾನಗಳ ಎಳದಾಟವಾಗಿದ್ದು, ಗಾಳಿಯನ್ನು ಒಳಗೆಳೆದುಕೊಳ್ಳುವ ಉಚ್ವಾಸವು ಅಪಾನವಾದರೆ, ಗಾಳಿಯನ್ನು ಹೊರಹಾಕುವ ನಿಶ್ವಾಸವು ಪ್ರಾಣ ಎನಿಸಿಕೊಳ್ಳುತ್ತದೆ. ಉಸಿರಾಡುವಾಗ ಪ್ರಾಣ ದೀರ್ಘವಾಗಬೇಕು ಹಾಗೂ ಅಪಾನ ಹ್ರಸ್ವವಾಗಬೇಕು. ಇದು ಸರಿಯಾದ ಉಸಿರಾಟ ಕ್ರಮವಾಗಿದ್ದು, ಉಸಿರಾಟದ ಈ ಪ್ರಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡಿದಾಗ ಸಮಾಧಿ ಸ್ಥಿತಿಯನ್ನು ತಲುಪಲು ಸಾಧ್ಯ ಎಂದು ಉಸಿರಾಟದ ಮಹತ್ವವನ್ನು ತಿಳಿಸಿದರು.
ನಿವೃತ್ತ ರಾಜ್ಯ ಪೋಲಿಸ್ ಮಹಾನಿರ್ದೇಶಕರು ಹಾಗೂ ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಳ್ ದಂಪತಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಮುಳ್ಳೇರಿಯಾ ಹವ್ಯಕ ಮಂಡಲದ ಗುತ್ತಿಗಾರು,ಎಣ್ಮಕಜೆ, ಗುಂಪೆ, ಸುಳ್ಯ, ಕಾಸರಗೊಡು,ಕೊಡಗು ಹವ್ಯಕ ವಲಯಗಳ ಪರವಾಗಿ ಶಿವರಾಮಚಂದ್ರ ಶಿವಾಲ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ವಿನೋದ್ ಹೆಗಡೆ, ನಂದನ್ ಹೆಗಡೆ, ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಕೃಷ್ಣಮೂರ್ತಿ ಮಾಡಾವು, ಕೃಷ್ಣಪ್ರಮೋದ, ಕೇಶವ ಪ್ರಕಾಶ ಗುಂಪೆ, ದಿನಪ್ರಧಾನರಾಗಿ ಶಿರಸಿ ಲಕ್ಷ್ಮಣ ಶಾನಭಾಗ ದಂಪತಿಗಳು ಉಪಸ್ಥಿತರಿದ್ದರು.