ನಮ್ಮ ಜೀವನದಲ್ಲಿ ಸಮ ಪ್ರಮಾಣದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿ: ರಾಘವೇಶ್ವರ ಭಾರತೀ ಶ್ರೀಗಳು
Shree Ragaveshwara Bharathi Swamiji: ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ ನಡೆದ 'ಅನ್ನಂ ಬ್ರಹ್ಮ' ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿ, ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿದರು.
ಗೋಕರ್ಣ: ಅಕಾಲದಲ್ಲಿ ಹಸಿವಾದರೆ, ಯಾವಾಗಲೋ ನಿದ್ದೆ ಬಂದರೆ ದೇಹದ ಯಂತ್ರ ಕೆಟ್ಟಿದೆ ಎಂದರ್ಥ. ಆಗ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಲು ಸಕಾಲ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಮಂಗಳವಾರ ನಡೆದ 'ಅನ್ನಂ ಬ್ರಹ್ಮ' ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು.
ಜೀವನ ಕ್ರಮವನ್ನು ಸರಿಪಡಿಸಿಕೊಳ್ಳುವುದರ ಮೂಲಕ ದೇಹದ ಯಂತ್ರವನ್ನು ಸರಿಪಡಿಸಿಕೊಳ್ಳಬೇಕು. ಶರೀರದ ಕ್ರಮದಲ್ಲಿ ಕೃತ್ರಿಮ ಹಸ್ತಕ್ಷೇಪ ಸಲ್ಲದು. ಕೃತ್ರಿಮವಾಗಿ ದೇಹವನ್ನು ಸರಿಪಡಿಸಲು ಹೊರಟಾಗ ಅದು ವಿರುದ್ಧ ಪರಿಣಾಮವನ್ನು ಉಂಟು ಮಾಡುತ್ತದೆ ಎಂದರು.

ಮಲಮೂತ್ರಾದಿ ಶರೀರದ ವೇಗಗಳನ್ನು ತಡೆಹಿಡಿಯಬಾರದು. ತಡೆಹಿದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಧಾರ್ಮಿಕವಾಗಿಯೂ ಮಲಮೂತ್ರಾದಿಗಳನ್ನು ತಡೆಹಿಡಿದು ಪೂಜೆ-ಪಾರಾಯಣಗಳನ್ನು ಮಾಡುವುದೂ ದೋಷವೇ ಆಗಿದೆ. ಆದರೆ ಮನಸ್ಸಿನ ವೇಗಗಳನ್ನು ತಡೆಹಿಡಿಯಬೇಕು. ದುರಾಸೆ, ದ್ವೇಷ, ಸಿಟ್ಟು, ದುರಭಿಮಾನ, ಲಜ್ಜೆ ಮುಂತಾದ ಮನೋವೇಗಗಳನ್ನು ಪ್ರಯತ್ನ ಪಟ್ಟು ತಡೆಹಿಡಿಯಬೇಕು. ಅದು ಜೀವಕ್ಕೆ ಹಿತ ಎಂದು ಅಭಿಪ್ರಾಯಪಟ್ಟರು.
ಆಧುನಿಕ ವಿಜ್ಞಾನವೂ ಕೂಡ ನಿದ್ದೆಯ ಹೆಚ್ಚಳ ಹಾಗೂ ನಿದ್ರಾಹೀನತೆಯಿಂದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಹೇಳುತ್ತವೆ. ಇದರಿಂದ ಜೀವಿತಾವಧಿಯ ಮೇಲು ಇದು ಪ್ರಭಾವ ಬೀರುತ್ತದೆ. ಹಾಗೆಯೇ ಆಯುರ್ವೇದವೂ ಕೂಡ ಹೆಚ್ಚಿನ ನಿದ್ದೆಯಿಂದ ಆಯಸ್ಸು ಕಡಿಮೆ ಹಾಗೂ ಜೀವನಕ್ಕೆ ಸುಖಲಿಲ್ಲ ಎಂದು ನಿರೂಪಿಸುತ್ತದೆ. ಸಮಪ್ರಮಾಣದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿ ಎಂದೂ ಭಾರತೀಯ ಶಾಸ್ತ್ರಗಳು ಹೇಳಿವೆ ಎಂದರು.

ಹೃದಯ ಕಮಲ- ನಿದ್ದೆ:
ಭಾರತೀಯ ಶಾಸ್ತ್ರಗಳಲ್ಲಿ ಹೇಳುವ ಹೃದಯ ಕಮಲಕ್ಕೂ ಹಾಗೂ ದೇಹದ ಅಂಗವಾದ ಹೃದಯಕ್ಕೂ ವ್ಯತ್ಯಾಸವಿದೆ. ಎದೆಗುಂಡಿಗೆಯ ಹಿಂಬಾಗದಲ್ಲಿ ತೇಜೋಮಯವಾಗಿರುವುದೇ ಹೃದಯ ಕಮಲವಾಗಿದ್ದು, ಇದಕ್ಕೆ ಅನಾಹತ ಚಕ್ರ ಎಂದು ಯೋಗದಲ್ಲಿ ಕರೆಯಲಾಗಿದೆ. ಯೋಗದ ಜ್ಞಾನ ದೃಷ್ಟಿಗೆ ಮಾತ್ರ ಇದು ಕಾಣುವಂತದ್ದಾಗಿದ್ದು, ಉಪಕರಣಗಳಿಂದ ಇದನ್ನು ನೋಡಲು ಸಾಧ್ಯವಿಲ್ಲ. ಈ ಹೃದಯ ಕಮಲವನ್ನುವನ್ನು ತಮಸ್ಸು ಮುಸುಕಿದಾಗ ನಿದ್ದೆ ಬರುತ್ತದೆ. ಆಗ ಹೃದಯ ಕಮಲ ಮುದುಗುತ್ತದೆ. ನಾವು ಜಾಗೃತವಾಗಿದ್ದಾಗ ರಜೋಗುಣ ಕೆಲಸ ಮಾಡುತ್ತದೆ. ಆಗ ಹೃದಯ ಕಮಲ ಅರೆ ಬಿರಿದ ಸ್ಥಿತಿಯಲ್ಲಿರುತ್ತದೆ ಹಾಗೂ ಸತ್ವಗುಣ ಕೆಲಸ ಮಾಡುವಾಗ ಜ್ಞಾನಿಗಳಿಗೆ ಹೃದಯ ಕಮಲ ಪೂರ್ಣ ಅರಳುತ್ತದೆ. ಈ ಸ್ಥಿತಿಯನ್ನು ಯೋಗಿಗಳು ಮಾತ್ರ ಅನುಭವಿಸಬಹುದು ಎಂದರು.

ನೀರು ಎಷ್ಟು ಕುಡಿಯಬೇಕು?
ಇಂದು ಗೂಗಲ್ ನೋಡಿ ದೇಹ ನೀರನ್ನು ಕೇಳದೇ ಇದ್ದರೂ ದಿನಕ್ಕಿಷ್ಟು, ಗಂಟೆಗಿಷ್ಟು ಎಂಬ ಲೆಕ್ಕದಲ್ಲಿ ನೀರನ್ನು ಹೆಚ್ಚೆಚ್ಚು ಕುಡಿಯುವ ಪ್ರವೃತ್ತಿ ಬೆಳೆಯುತ್ತಿದೆ. ಆದರೆ ದೇಹಕ್ಕೆ ಎಷ್ಟು ನೀರು ಬೇಕು ಎಂಬುದು ದೇಹಕ್ಕೇ ಗೊತ್ತು. ಅದು ದೇಹದಿಂದ ದೇಹಕ್ಕೆ ನೀರಿನ ಅವಶ್ಯಕತೆ ವ್ಯತ್ಯಾಸವಾಗುತ್ತದೆ. ನೀರು ಅಗತ್ಯವಿದ್ದಾಗ ದೇಹವೇ ಬಾಯಾರಿಕೆಯ ಮೂಲಕ ಸೂಚನೆ ನೀಡುತ್ತದೆ. ಆಗಷ್ಟೇ ನೀರು ಕುಡಿಯಬೇಕು. ಅತಿಯಾದ ನೀರನ ಸೇವನೆಯೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದರು.

ರಾಮಚಂದ್ರಾಪುರ ಮಂಡಲದ ಭೀಮನಕೊಣೆ, ಕಾನುಗೋಡು, ಪುರಪ್ಪೇಮನೆ, ಶಿವಮೊಗ್ಗ, ತೀರ್ಥರಾಜಪುರ ವಲಯಗಳ ಪರವಾಗಿ ಕಿರಣ್ ದಂಪತಿಗಳು ಭಿಕ್ಷಾಸೇವೆ ಸಮರ್ಪಿಸಿದರು.
ವಿವಿವಿಯ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಲಕ್ಷ್ಮೀನಾರಾಯಣ ಕೆ.ಪಿ, ಸೀತಾರಾಮ ಇಕ್ಕೇರಿ, ರಮೇಶ ಕಾನುಗೋಡು, ದಿನ ಪ್ರಧಾನರಾಗಿ ಚಂದ್ರಶೇಖರ ಹೊಸಗದ್ದೆ ದಂಪತಿಗಳು ಉಪಸ್ಥಿತರಿದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.