ಪ್ರವಾಸಿ ಲೇಖನ: ನಮ್ಮೆಲ್ಲ ನೋವು, ನಲಿವುಗಳಾಚೆಗೂ ಹೃದಯ ಸ್ಪಂದಿಸಿದ ಕ್ಷಣಗಳಿವು!
Travel Story: ಮೈಸೂರಿನಿಂದ ಹಾಸನ ಜಿಲ್ಲೆಯ ವಿವಿಧೆಡೆ ನಾಗರಾಜ ಕಜಂಪಾಡಿ ಅವರು, ತಮ್ಮವರೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಆ ಕುರಿತು ಮನದಾಳದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದೇ ಭಾನುವಾರ ಬೆಳಗಿನ ಚುಮು-ಚುಮು ನಸುಕಿನಲ್ಲಿ ನಾವು 13 ಜನ ಮೈಸೂರಿನಿಂದ ಪ್ರವಾಸ ಹೊರಟೆವು. ರೂಪಾನಗರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನದೊಂದಿಗೆ ಪ್ರವಾಸವನ್ನು ಶುಭಾರಂಭ ಮಾಡಿದೆವು. ತಂಪಾದ ಗಾಳಿ, ಹಕ್ಕಿಗಳ ಕಲರವ, ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಬೆಳೆಗಳನ್ನು ಹೊತ್ತ ಭೂಮಿ ತಾಯಿ, ಭತ್ತದ ಗದ್ದೆಗಳು, ಎಲ್ಲ ಸೌಂದರ್ಯವನ್ನು ದಾರಿಯುದ್ದಕ್ಕೂ ಕಣ್ತುಂಬಿಕೊಂಡು ನಮ್ಮ ಪ್ರಯಾಣ ಸಾಗಿತು.
ಕೆಲವರು ಹರಟೆಯಲ್ಲಿ ತಲ್ಲೀನರಾಗಿದ್ದರೆ, ಕೆಲವರು ಅದಾಗಲೇ ನಿದ್ರೆಗೆ ಮೊರೆ ಹೋಗಿದ್ದರು. ನಮ್ಮ ಅರಿವಿಗೆ ಬಾರದಂತೆಯೇ ಮೂಡಣ ದಿಕ್ಕಿನಲ್ಲಿ ಅದಾಗಲೇ ರವಿ ತನ್ನ ಇರವನ್ನು ತೋರಿಸುತ್ತಿದ್ದ. ಆದರೆ, ಇದಾವುದನ್ನೂ ಗಮನಿಸದ ಸಾರಥಿ ವಿನೋದ್ ರಸ್ತೆಯ ಎತ್ತರ ತಗ್ಗುಗಳನ್ನು ಅತ್ಯಂತ ನಾಜೂಕಾಗಿ ಕ್ರಮಿಸುತ್ತಾ ಹಾಡುಗಳನ್ನು ಆಲಿಸುತ್ತಾ ವಾಹನ ಚಾಲನೆಯಲ್ಲಿ ಮಾಡುತ್ತಿದ್ದರು.

ನಾವು ಬೇಲೂರು ಸಮೀಪದ ಮೂಳೇನಹಳ್ಳಿ ತಲಪಿದಾಗ, ಸಮಯ 8.30 ಆಗಿತ್ತು. ಆಗಲೇ, ಎಲ್ಲರಿಗೂ ಹೊಟ್ಟೆ ಹಸಿವು ಶುರುವಾಗಿತ್ತು. ಅಲ್ಲಿಯೇ ರಸ್ತೆಯ ಬದಿಯಲ್ಲಿ ನಮ್ಮ ಕಣ್ಣಿಗೆ ಗೋಚರಿಸಿದ್ದು ಎನ್‌ಹೆಚ್ 57 ರೆಸ್ಟ್ ಜೋನ್. ಪ್ರಕಾಶಣ್ಣ ಹಾಗೂ ಪ್ರಮೀಳಕ್ಕ ಮನೆಯಲ್ಲೇ ಸಿದ್ಧಪಡಿಸಿದ ಇಡ್ಲಿ ಚಟ್ನಿಯ ಡಬ್ಬ ಹೊರ ತೆಗೆದು ಬಡಿಸಲಾರಂಭಿಸಿದರೆ, ನಾಗರಾಜಣ್ಣ ಕವಿತಕ್ಕ ಚಿತ್ರಾನ್ನ ಹಾಗೂ ಸಿಹಿ ಉಂಡೆಗಳನ್ನು ನೀಡಿದರು. ಎಲ್ಲರೂ ಶುಚಿ ರುಚಿಯಾದ ತಿಂಡಿಯನ್ನು ಹೊಟ್ಟೆ ತುಂಬ ತಿಂದೆವು. ಅಷ್ಟರಲ್ಲಿ ಎನ್‌ಹೆಚ್ 57 ರೆಸ್ಟ್ ಜೋನ್ ಮಾಲಿಕರು ಬಂದ ಕಾರಣ, ಅಲ್ಲಿಯೇ ಕಾಫಿ ಕುಡಿದೆವು.
ಬೆಳಗ್ಗೆ 9 ಗಂಟೆಗೆ ಅಲ್ಲಿಂದ ಹೊರಟು ಹಳೇಬೀಡು ಸಮೀಪದ ಪುಷ್ಪಗಿರಿ ಮಲ್ಲಿಕಾರ್ಜುನ ದೇವಾಲಯ ತಲಪಿದಾಗ ಸಮಯ 9.15 ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು, ಪಕ್ಕದಲ್ಲೇ ಇದ್ದ ಪುಷ್ಪಗಿರಿ ಮಹಾಸಂಸ್ಥಾನ ಶ್ರೀಮಠಕ್ಕೆ ಭೇಟಿ ನೀಡಿದೆವು. ಅಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಹಾಗೂ 30 ಅಡಿ ಎತ್ತರದ ಶಿವನ ಪ್ರತಿಮೆ ಕಣ್ಮನ ಸೆಳೆದವು. ಪ್ರಕೃತಿಯ ರಮಣೀಯ ದೃಶ್ಯ ವೈಭವ ನೋಡಿಯೇ ಆನಂದಿಸಬೇಕು. ಫೋಟೋ ತೆಗೆಯುವುದರಲ್ಲಿ ನಿರತರಾದ ಸದಸ್ಯರನ್ನು ಒತ್ತಾಯಪೂರ್ವಕವಾಗಿ ಹೊರಡಿಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು.

ಮುಂದಿನ ನಮ್ಮ ಹೆಜ್ಜೆ ಅನತಿ ದೂರದ ಹಳೇಬೀಡು.. ಹೊಯ್ಸಳರಿಂದ ನಿರ್ಮಾಣಗೊಂಡ ಶಿವ ದೇವಾಲಯ, ನಂದಿಯ ವಿಗ್ರಹಗಳು, ಆಕರ್ಷಕ ಕೆತ್ತನೆ ವಿನ್ಯಾಸಗಳ ಸೊಬಗನ್ನು ಆಸ್ವಾದಿಸಿ, ನಮ್ಮ ಮುಂದಿನ ಗಮ್ಯಸ್ಥಾನಕ್ಕೆ ಅಡಿ ಇಟ್ಟೆವು.
ಬೆಳಗ್ಗೆ 10.30ಕ್ಕೆ ಸರಿಯಾಗಿ ಹಳೇಬೀಡಿನಿಂದ ಹೊರಟೆವು. ಒಟ್ಟಾಗಿ ಹೊರಟ ತಂಡ ಎರಡಾಯಿತು. ಅಂತ್ಯಾಕ್ಷರಿ ಪ್ರಾರಂಭ. ನಗು, ಕಿರಿಚಾಟ, ಗದ್ದಲಗಳ ಮಧ್ಯೆ ನಾವೇ ಗೆದ್ದೆವೆಂದು ಎರಡೂ ತಂಡಗಳು ಘೋಷಿಸಿ, ಸಂಭ್ರಮಿಸುತ್ತಿದ್ದಾಗ ಜಾವಗಲ್ ಮೂಲಕ ಅರಸೀಕೆರೆ ತಲಪಿಯೇ ಬಿಟ್ಟೆವು.

ಅಲ್ಲಿನ ಶಿವಾಲಯ ತಲಪಿದಾಗ 11.30 ಆಗಿತ್ತು. ಚಂದ್ರಮೌಳೇಶ್ವರನ ದರ್ಶನ ಪಡೆದು, ಒಂದಷ್ಟು ಫೋಟೋ ಕ್ಲಿಕ್ಕಿಸಿ 11.45ಕ್ಕೆ ಹೊರಟೆವು. ನಮ್ಮ ಮುಂದಿನ ಪಯಣ ಮಾಲೇಕಲ್ ತಿರುಪತಿ ದೇವಸ್ಥಾನದ ಕಡೆಗೆ.. ಅಲ್ಲಿಗೆ ತಲಪಿದಾಗ 11.50 ಸಮಯವಾಗಿತ್ತು. ದೇವರ ದರ್ಶನ ಮುಗಿಸಿ, ಸಮೀಪದಲ್ಲೇ ಇದ್ದ ಶ್ರೀನಿವಾಸ ಕಲ್ಯಾಣ ಮತ್ತು ವಿಷ್ಣುವಿನ ದಶಾವತಾರದ ಕಲಾಕೃತಿಗಳ ಪ್ರದರ್ಶನ ನೋಡಿ, 12.20ಕ್ಕೆ ಹೊರಟೆವು.
ಆ ಬಳಿಕ ನಾವು ಅಡಿ ಇಟ್ಟದ್ದು ಜೇನುಕಲ್ಲು ಶ್ರೀ ಸಿದ್ಧೇಶ್ವರ ದೇವಸ್ಥಾನದತ್ತ.. 12.50ಕ್ಕೆ ಅಲ್ಲಿಗೆ ತಲುಪಿ, ಸುಮಾರು 1000 ಮೆಟ್ಟಲುಗಳನ್ನು ಎಲ್ಲರೂ ನಿರಾಯಾಸದಿಂದ ಹತ್ತಿದೆವು. ದೇವರ ಪಾದಗಳ ದರ್ಶನ ಪಡೆದು, ವಿಶೇಷವಾಗಿ ಸಿಗುವ ಹಲವು ಬಗೆಯ ಪ್ರಸಾದಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದೆವು. ಬೆಟ್ಟ ಇಳಿದು ಬಂದು ದಾಸೋಹದಲ್ಲಿ ರುಚಿಕರವಾದ ಭೋಜನ ಪ್ರಸಾದವನ್ನೂ ಸ್ವೀಕರಿಸಿದೆವು.

ಮಧ್ಯಾಹ್ನ 2.40ಕ್ಕೆ ಅಲ್ಲಿಂದ ಹೊರಟೆವು. ಹೊಟ್ಟೆ ತುಂಬಿದ್ದರಿಂದಲೋ ಅಥವಾ ಬೆಳಗಿನಿಂದ ವಾಹನ ಪ್ರಯಾಣ, ಕಾಲ್ನಡಿಗೆ ಇವುಗಳಿಂದ ದಣಿವಾಗಿದ್ದ ದೇಹ ಕೊಂಚ ವಿಶ್ರಾಂತಿ ಬಯಸಿದ ಕಾರಣ, ಕೆಲವರು ನಿದ್ರೆಗೆ ಜಾರಿದರು.. ಒಂದಷ್ಟು ಹರಟೆ, ತಮಾಷೆಯೊಂದಿಗೆ ಕುರುಕಲು ತಿಂಡಿ ತಿನ್ನುತ್ತಾ ನಾವು ಮುಂದಿನ ನಮ್ಮ ತಾಣ ಹೊಸಹೊಳಲು ಲಕ್ಷ್ಮೀ ನಾರಾಯಣ ದೇವಸ್ಥಾನ ತಲಪಿದಾಗ 4.30 ಆಗಿತ್ತು. ಹೊಯ್ಸಳರಿಂದ ನಿರ್ಮಿಸಲ್ಪಟ್ಟ ಸುಂದರವಾದ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡ ದೇವಸ್ಥಾನವದು. ಅಲ್ಲಿನ ಅರ್ಚಕರು ಬಹಳ ಆಸಕ್ತಿಯಿಂದ ವಿವರಣೆಯನ್ನು ನೀಡಿದರು. ಅದನ್ನು ತಿಳಿದುಕೊಳ್ಳುವ ಆಸಕ್ತಿ ನಮ್ಮಲ್ಲಿಯೂ ಇತ್ತು. ಅಲ್ಲಿಯೂ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ ಸಂಜೆ 5.15ಕ್ಕೆ ಹೊರಟು ಕಲ್ಲಹಳ್ಳಿ ಶ್ರೀ ಲಕ್ಷ್ಮೀ ಸಹಿತ ಭೂವರಾಹ ಸ್ವಾಮಿ ದೇವಸ್ಥಾನ ತಲುಪಿದಾಗ 6 ಗಂಟೆಯಾಗಿತ್ತು.
ಅದಾಗಲೇ ಸೂರ್ಯ ತನ್ನ ಸಮಯವಾಯಿತೆಂದು ಪಶ್ಚಿಮದಲ್ಲಿ ಅಸ್ತಂಗತನಾಗಲು ಹವಣಿಸುತ್ತಿದ್ದ. ಅಲ್ಲಿ ದೇವರ ದರ್ಶನ ಪಡೆದು ಹೊರಬಂದೆವು. ದಾಸೋಹ ಇದ್ದರೂ ಅದಾಗಲೇ ಸಾಕಷ್ಟು ಕುರುಕಲು ತಿಂಡಿ ಹೊಟ್ಟೆ ಸೇರಿದ್ದರಿಂದ ಯಾರೂ ಆ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ನಂತರದ ಪ್ರಯಾಣದಲ್ಲಿ ನಿಜವಾದ ಪ್ರತಿಭೆಗಳು ಅನಾವರಣಗೊಂಡವು. ವಾಹನದ ಧ್ವನಿವರ್ಧಕದ ಮೂಲಕ ಹೊರಬಂದ ಧ್ವನಿ ಮತ್ತು ಬೆಳಕಿಗೆ ಹಿಂದಿನ ಸಾಲಿನ ಗುಂಪು ನರ್ತಿಸಲು ತೊಡಗಿದಾಗ, ಮುಂದಿನ ಸಾಲಿನ ಕೆಲವರು ಜೊತೆಗೂಡಿದರು.
.
ಅಂತೂ ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಪ್ರವಾಸ 8 ಗಂಟೆಗೆ ಮುಗಿಯಿತು. ನಮ್ಮೆಲ್ಲ ನೋವು, ನಲಿವುಗಳಾಚೆಗೂ ನಮ್ಮ ಹೃದಯ ಸ್ಪಂದಿಸಿದ ಕ್ಷಣಗಳಾಗಿದ್ದವು. ಮತ್ತೊಂದು ಪ್ರವಾಸದ ಯೋಜನೆಯನ್ನು ತುಂಬಿಕೊಂಡು ಪರಸ್ಪರ ವಿದಾಯ ಹೇಳಿದೆವು.
ನಿಮ್ಮ ಲೇಖನಗಳಿಗೂ ಸ್ವಾಗತ:
ನೀವು ಪ್ರವಾಸ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಇನ್ನಿತರೇ ವಿಷಯಗಳ ಬಗ್ಗೆ ಬರೆಯಲು ಆಸಕ್ತಿ ಹೊಂದಿದ್ದರೆ 'Day2day News' ಮುಕ್ತ ವೇದಿಕೆ ಕಲ್ಪಿಸುತ್ತದೆ. ಇನ್ನೇಕೆ ತಡ 7070708646ಗೆ ನಿಮ್ಮ ಲೇಖನಗಳನ್ನು ವಾಟ್ಸಪ್ ಮಾಡಿ.