ಶಮಿ ವೃಕ್ಷ: ಆರೋಗ್ಯ ವೃದ್ಧಿಗೂ ಸಹಕಾರಿ

Shami Tree: ಶಮಿ ವೃಕ್ಷವು ಜನರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.

Aug 28, 2026 - 12:35
ಶಮಿ ವೃಕ್ಷ: ಆರೋಗ್ಯ ವೃದ್ಧಿಗೂ ಸಹಕಾರಿ

ಶಮಿ ವೃಕ್ಷವನ್ನು ಕನ್ನಡದಲ್ಲಿ ಬನ್ನಿ ಮರ ಅಥವಾ ಬನ್ನಿ ಗಿಡ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪ್ರೋಸೋಪಿಸ್ ಸಿನೆರೇರಿಯಾ (Prosopis Cineraria) ಎಂದು. ಇದು ಮುಖ್ಯವಾಗಿ ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್ ಹಾಗೂ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಮರದ ಬೇರುಗಳು ನೆಲದ ಆಳಕ್ಕೆ 30 ಮೀಟರ್‌ವರೆಗೂ ಹೋಗಿ ನೀರನ್ನು ಹುಡುಕುತ್ತವೆ.

ಧಾರ್ಮಿಕ ಮಹತ್ವ:

ಶಮಿ ವೃಕ್ಷಕ್ಕೆ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವಿದೆ. ಮಹಾ ಭಾರತದ ಕಥೆಯ ಪ್ರಕಾರ, ಪಾಂಡವರು ತಮ್ಮ ಅಜ್ಞಾತವಾಸಕ್ಕೆ ಹೋಗುವ ಮೊದಲು ತಮ್ಮ ಅಸ್ತ್ರ-ಶಸ್ತ್ರಗಳನ್ನು ಈ ಮರದ ಪೊಟರೆಯಲ್ಲಿ ಬಚ್ಚಿಟ್ಟಿದ್ದರು. ಅಜ್ಞಾತವಾಸ ಮುಗಿದ ನಂತರ, ವಿಜಯದಶಮಿ ದಿನದಂದು ಅವುಗಳನ್ನು ಹಿಂಪಡೆದು, ಶಮಿ ಮರವನ್ನು ಪೂಜಿಸಿದರು. 

ಆದ್ದರಿಂದ ದಸರಾ ಹಬ್ಬದಂದು ಬನ್ನಿ ಪತ್ರೆಯನ್ನು ಪೂಜಿಸಿ, ಒಬ್ಬರಿಗೊಬ್ಬರು 'ಬನ್ನಿ ಬಂಗಾರ' ಎಂದು ವಿನಿಮಯ ಮಾಡಿಕೊಳ್ಳುವುದು ಶುಭವೆಂದು ನಂಬಲಾಗಿದೆ. ಶನಿ ದೋಷ ಇರುವವರು ಶನಿವಾರದಂದು ಶಿವಲಿಂಗಕ್ಕೆ ಶಮಿ ಪತ್ರೆಯನ್ನು ಅರ್ಪಿಸಿದರೆ, ಶನಿಯ ಕಾಟ ಕಡಿಮೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಗಣಪತಿಗೆ ಸಹ ಶಮಿ ಪತ್ರೆ ಅತ್ಯಂತ ಪ್ರಿಯವಾಗಿದೆ. 

ಔಷಧೀಯ ಗುಣಗಳು:

ಆಯುರ್ವೇದದಲ್ಲಿ ಶಮಿ ಮರದ ಪ್ರತಿಯೊಂದು ಭಾಗವು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆ, ತೊಗಟೆ, ಹೂವು, ಕಾಯಿ (ಸಾಂಗ್ರಿ) ಮತ್ತು ಬೇರುಗಳನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.

ಜೀರ್ಣಕ್ರಿಯೆ ವೃದ್ಧಿಸುತ್ತದೆ: ಇದರ ತೊಗಟೆಯ ಚೂರ್ಣವು ಅಜೀರ್ಣ, ಹೊಟ್ಟೆನೋವು ಮತ್ತು ಭೇದಿಯನ್ನು ಗುಣಪಡಿಸುತ್ತದೆ.

ಚರ್ಮರೋಗಗಳಿಗೆ ರಾಮಬಾಣ: ಎಲೆಗಳ ಲೇಪನವು ಗಾಯ, ಹುಣ್ಣು ಮತ್ತು ಚರ್ಮದ ತುರಿಕೆಗೆ ಉತ್ತಮ ಮದ್ದಾಗಿದೆ. 

ಉಸಿರಾಟದ ತೊಂದರೆ ದೂರವಾಗುತ್ತದೆ: ಇದರ ಹೂವು - ತೊಗಟೆಯು ಕೆಮ್ಮು, ಉಬ್ಬಸ ಮತ್ತು ಶೀತಕ್ಕೆ ಪರಿಹಾರವಾಗಿದೆ.

ಮಧುಮೇಹ ನಿಯಂತ್ರಿಸುತ್ತದೆ: ಶಮಿ ಕಾಯಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು: ಇದರ ಎಲೆಗಳು ಮನಸ್ಸನ್ನು ಶಾಂತಗೊಳಿಸಿ, ಆತಂಕವನ್ನು ಕಡಿಮೆ ಮಾಡುತ್ತವೆ.
 
ಪರಿಸರ & ಇತರೆ ಉಪಯೋಗಗಳು:

ಶಮಿ ಮರವು ಪರಿಸರಕ್ಕೆ ವರದಾನವಾಗಿದೆ. ಇದು ಗಾಳಿಯಲ್ಲಿರುವ ಸಾರಜನಕವನ್ನು ಹಿಡಿದಿಟ್ಟು ಭೂಮಿಯನ್ನು ಫಲವತ್ತಾಗಿಸುತ್ತದೆ. ದಟ್ಟವಾದ ಎಲೆಗಳು, ಉತ್ತಮ ನೆರಳು ನೀಡುತ್ತವೆ. ಜೊತೆಗೆ ಎಲೆಗಳು ಮತ್ತು ಸಾಂಗ್ರಿ ಕಾಯಿಗಳು ಹಸು, ಮೇಕೆ, ಒಂಟೆಗಳಿಗೆ ಅತ್ಯಂತ ಪೌಷ್ಟಿಕ ಮೇವಾಗಿದೆ.  

ಈ ಮರದ ಕಾಯಿಗಳಿಂದ ರಾಜಸ್ಥಾನದಲ್ಲಿ ರುಚಿಕರವಾದ ತರಕಾರಿ ಹಾಗೂ ಉಪ್ಪಿನಕಾಯಿ ಮಾಡುತ್ತಾರೆ. ಇದರ ಮರವು ಗಟ್ಟಿಯಾಗಿದ್ದು ಗೆದ್ದಲು ಹಿಡಿಯುವುದಿಲ್ಲ, ಆದ್ದರಿಂದ ಕೃಷಿ ಉಪಕರಣಗಳನ್ನು ಮಾಡಲು ಬಳಸುತ್ತಾರೆ.

ರಾಜಸ್ಥಾನ ಸರ್ಕಾರ 'ಶಮಿ'ಯನ್ನು ರಾಜ್ಯ ವೃಕ್ಷ ಎಂದು ಘೋಷಿಸಿದೆ. ಬರಗಾಲದಲ್ಲೂ ಹಸಿರಾಗಿ ನಿಂತು ಮನುಷ್ಯ, ಪ್ರಾಣಿ ಮತ್ತು ಪ್ರಕೃತಿ ಎಲ್ಲರಿಗೂ ಆಸರೆಯಾಗಿರುವುದರಿಂದ ಶಮಿ ಮರವನ್ನು ನಿಜವಾಗಿಯೂ ಕಲ್ಪವೃಕ್ಷ ಎಂದು ಕರೆಯಬಹುದು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.