ಸದಾಶಿವ ಭಟ್ಟ ಪಳ್ಳುರ ಋಣಮುಕ್ತಿ & ಅಮೃತತ್ವದೆಡೆಗೆ ಕೃತಿ ಬಿಡುಗಡೆ
Puttur: ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ, ಡಾ.ಡಿ.ಸದಾಶಿವ ಭಟ್ಟ ಪಳ್ಳುಮನೆ ಅವರ 'ಋಣಮುಕ್ತಿ ಮತ್ತು ಅಮೃತತ್ವದೆಡೆಗೆ' ಗೀತರೂಪಕಗಳು ಕೃತಿ ಬಿಡುಗಡೆಗೊಳಿಸಲಾಯಿತು.
ಪುತ್ತೂರು: ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದಾಶಿವ ಭಟ್ಟ ಪಳ್ಳುರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿ, ತಮ್ಮ ಸುಧೀರ್ಘ ಬದುಕಿನಲ್ಲಿ ಯಕ್ಷಗಾನ ಪ್ರಸಂಗವನ್ನು 12 ಭಾಷೆಗಳಲ್ಲಿ ರಚಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ಡಾ.ವರದರಾಜ್ ಚಂದ್ರಗಿರಿ ಹೇಳಿದರು.
ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ, ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮಕಾರಂತ ಅಧ್ಯಯನ ಕೇಂದ್ರ, ಸೌರಭ ಪ್ರಸಾರಂಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಡಾ.ಡಿ.ಸದಾಶಿವ ಭಟ್ಟ ಪಳ್ಳುಮನೆ ಅವರ 'ಋಣಮುಕ್ತಿ ಮತ್ತು ಅಮೃತತ್ವದೆಡೆಗೆ' ಗೀತರೂಪಕಗಳು ಕೃತಿ ಬಿಡುಗಡೆ ಮಾಡಿ, ಅವರು ಮಾತನಾಡಿದರು.

ಲೇಖಕ ಸದಾಶಿವ ಭಟ್ಟ ಪಳ್ಳು ಮಾತನಾಡಿ, 'ಡಾ.ವರದರಾಜ್ ಚಂದ್ರಗಿರಿ ನನ್ನ ಗುರುಗಳಿದ್ದಂತೆ. ಅವರಿಂದ ನನ್ನ ಕೃತಿ ಲೋಕಾರ್ಪಣೆ ಹೊಂದಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಈ ಕೃತಿ ಲೋಕಾರ್ಪಣೆಯಲ್ಲಿ ಸಹಕರಿಸಿದ ವಿವೇಕಾನಂದ ವಿದ್ಯಾಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ. ಯಾವುದೇ ಕೆಲಸ ಮಾಡಲು ಕಾಲ ಕೂಡಿ ಬರಬೇಕು ಎಂಬ ಮಾತಿನಂತೆ ಋಣಮುಕ್ತಿ ಮತ್ತು ಅಮೃತತ್ವದೆಡೆಗೆ ಗೀತ ರೂಪಕಗಳು ಪುಸ್ತಕ ರೂಪಕ್ಕೆ ಮೂಡಿ ಬಂದಿದೆ' ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಡಿ.ಸದಾಶಿವ ಭಟ್ಟ ಪಳ್ಳು, ತಮ್ಮ ಜೀವನದಲ್ಲಿ ಅಳಡಿಸಿಕೊಂಡ ಶಿಸ್ತು ಅವರ ಬರವಣಿಗೆಯಲ್ಲಿ ಪ್ರತಿಬಿಂಬಿಸುತ್ತದೆ. ಅಂತಹ ಶಿಸ್ತುಬದ್ಧ ಜೀವನ ರೂಡಿಸಿಕೊಂಡವರು ಮಾತ್ರ ಸಾಹಿತ್ಯದ ಪಾಂಡಿತ್ಯ ಹೊಂದಲು ಸಾಧ್ಯ. ವಿವೇಕಾನಂದ ವಿದ್ಯಾಸಂಸ್ಥೆಯ ಸೌರಭ ಪ್ರಸಾರಾಂಗ ಸದಾ ಬರಹಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ಮುಂಚೂನಿಯಲ್ಲಿರುತ್ತದೆ ಎಂದು ತಿಳಿಸಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ದೇವಸ್ಥಾನದ ಅನುವಂಶಿಕ ಮುಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಹಾಗೂ ಮುಕ್ತೇಸರ ವಿನೋದ್ ಕುಮಾರ್ ರೈ, ಶ್ರೀ ಮಹಾಲಿಂಗೇಶ್ವ ಯಕ್ಷಗಾನ ಕಲಾ ಸಂಘ ಗೌರವಾಧ್ಯಕ್ಷ ಸಂಜೀವ ರೈ ಉಪಸ್ಥಿತರಿದ್ದರು.