CM D.K.Shivakumar: ಪೊಲೀಸರ ಸಂಕಷ್ಟ ಭತ್ಯೆ ಶೇ.50 ರಷ್ಟು ಹೆಚ್ಚಳ.. ಸಿಎಂ ಡಿ.ಕೆ.ಶಿವಕುಮಾರ್
CM D.K.Shivakumar: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸರ ಸಮಗ್ರ ಸಾಮರ್ಥ್ಯ ವೃದ್ದಿ ತರಬೇತಿಗೆ ಶುಕ್ರವಾರ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿ, ಮಾತನಾಡಿದರು.
ಬೆಂಗಳೂರು: 'ನಾಡಿನ ಜನರ ರಕ್ಷಣೆ ಮಾಡುವ ಪೊಲೀಸರು ಉತ್ತಮ ಬದುಕನ್ನು ನಡೆಸಬೇಕು. ಅದಕ್ಕಾಗಿ, ಅವರ ಸಂಕಷ್ಟ ಭತ್ಯೆ ಪ್ರಮಾಣವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಶೇಕಡ 50% ಹೆಚ್ಚಳಕ್ಕೆ ಮಾಡುವುದಕ್ಕೆ ಸರ್ಕಾರದ ಸಮ್ಮತಿಯಿದೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (CM D.K.Shivakumar) ಹೇಳಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪೊಲೀಸರ ಸಮಗ್ರ ಸಾಮರ್ಥ್ಯ ವೃದ್ದಿ ತರಬೇತಿಗೆ ಶುಕ್ರವಾರ ಚಾಲನೆ ನೀಡಿ, ಮಾತನಾಡಿದರು.
'ಪೊಲೀಸರ ಆರ್ಥಿಕ ಅಗತ್ಯಗಳಿಗೆ ಮೊದಲು ಪ್ರಾಶಸ್ತ್ಯ ನೀಡಲಾಗುವುದು. ಗೃಹ ಇಲಾಖೆಯು ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ' ಎಂದು ಭರವಸೆ ನೀಡಿದರು.
ಎನ್‌ಎಸ್‌ಜಿಯಿಂದ ಶಕ್ತಿ ಪಡೆಯಿರಿ:
'ನಮ್ಮನ್ನು ರಕ್ಷಿಸಲು ನಮ್ಮ ಆರಕ್ಷಕರನ್ನು ಸಜ್ಜುಗೊಳಿಸುವ ಎನ್‌ಎಸ್‌ಜಿಗೆ ಧನ್ಯವಾದಗಳು. ಸಜ್ಜನರನ್ನು ರಕ್ಷಿಸುವುದು, ದುರ್ಜನರನ್ನು ಶಿಕ್ಷಿಸುವುದು ಕೂಡ ಧರ್ಮ. ನೀವೆಲ್ಲರೂ ಧರ್ಮದ ಕಾರ್ಯವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದೀರಿ. ಸಮಾಜದಲ್ಲಿ ಅಶಾಂತಿ, ಕಾನೂನು ಸುವ್ಯವಸ್ಥೆ ಹದಗೆಟ್ಟಾಗ, ನೀವು ಶಿಷ್ಟರ ರಕ್ಷಣೆಗೆ ಬರುತ್ತೀರಿ. ರಾಷ್ಟ್ರೀಯ ಭದ್ರತಾ ಪಡೆ, ತಮ್ಮ ಶಕ್ತಿಯನ್ನು ರಾಜ್ಯ ಪೊಲೀಸರಿಗೆ ಧಾರೆ ಎರೆಯುತ್ತಿದೆ. ಎನ್‌ಎಸ್‌ಜಿಯಿಂದ ಪಡೆದ ತರಬೇತಿ ಸಾರ್ಥಕವಾಗಬೇಕು. ಅದನ್ನು ನಾಡಿನ, ಜನರ ರಕ್ಷಣೆಗೆ ಬಳಸಬೇಕು' ಎಂದು ತಿಳಿಸಿದರು.
'ಕರ್ನಾಟಕ ಪೊಲೀಸ್ ದೇಶದ ಹೆಮ್ಮೆ. ನಮ್ಮ ಪೊಲೀಸರು ದಕ್ಷತೆಗೆ, ಕಾರ್ಯಪರತೆ, ಕರ್ತವ್ಯ ನಿಷ್ಠೆಗೆ ಹೆಸರಾದವರು. ನಾವು ಹುಟ್ಟಿದ ಈ ಸಮಾಜಕ್ಕೆ ಋಣ ತೀರಿಸುವುದೇ ನಿಜವಾದ ಸೇವೆ. ಆ ಕೆಲಸವನ್ನು ನೀವು ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಕಷ್ಟದ ಸಂದರ್ಭದಲ್ಲಿಯೂ ನಿಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿ, ನಾಡನ್ನು ರಕ್ಷಣೆ ಮಾಡುತ್ತಿದ್ದೀರಿ. ನಮ್ಮ ಆರಕ್ಷಕರು, ಕಾನೂನಿನ ಪಾಲಕರು, ಕಾನೂನಿನ ರಕ್ಷಕರು' ಎಂದು ಶ್ಲಾಘಿಸಿದರು.
'ನಾನು 35 ವರ್ಷಗಳ ಹಿಂದೆ ಗೃಹ ಇಲಾಖೆಗೆ ಸಂಬಂಧಿಸಿದ ಬಂಧಿಖಾನೆ ಸಚಿವನಾಗಿದ್ದಾಗ, ಸಾಕಷ್ಟು ಮಾಹಿತಿ ಪಡೆದಿದ್ದೆ. ಹಗಲು ರಾತ್ರಿ ನೀವು ಶ್ರಮಿಸುತ್ತೀರಿ. ಕೆಲವು ದುರ್ಘಟನೆ ಸಂದರ್ಭದಲ್ಲಿ, ನಾವು ರಾಜಕಾರಣಿಗಳು ನಿಮ್ಮನ್ನೇ ದೂಷಿಸಿರುವ ಉದಾಹರಣೆಗಳಿವೆ. ನೀವು ನಿಷ್ಠೆ, ಪ್ರಾಮಾಣಿಕತೆಯಲ್ಲಿ ದೇಶದ ಸಮಗ್ರತೆ, ಐಕ್ಯತೆ, ಶಾಂತಿ ಕಾಪಾಡುವುದು ಮುಖ್ಯ' ಎಂದರು.
'ಗಡಿಯಲ್ಲಿ ಸೈನಿಕ. ಗಡಿಯ ಒಳಗೆ ಆರಕ್ಷಕ. ನೀವಿದ್ದರೆ ಸಮಾಜ ನೆಮ್ಮದಿ, ಸುಖವಾಗಿರುತ್ತದೆ. ನೀವು ನಿಮ್ಮ ಕರ್ತವ್ಯವನ್ನು ಪ್ರೀತಿಯಿಂದ ಒಪ್ಪಿ ಈ ಇಲಾಖೆ ಸೇರಿದ್ದೀರಿ. ಕೆಲವರು ಪೊಲೀಸ್ ಕೆಲಸವನ್ನು ಹೆಣ ಕಾಯುವ ಕೆಲಸ ಎಂದು ಟೀಕಿಸುತ್ತಾರೆ. ಆದರೆ ನೀವು ದೇಶ ಸೇವೆ ಮಾಡುತ್ತಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಹೇಳಿದರು.
'ಸೈಬರ್ ಕ್ರೈಂಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ತಂತ್ರಜ್ಞಾನ ಬಳಸುತ್ತಿದ್ದೇವೆ. ದೇಶ ರಕ್ಷಣೆಗೂ ನಾವು ಡ್ರೋನ್ ಬಳಸುತ್ತಿದ್ದೇವೆ. ಬೆಂಗಳೂರು ಜಾಗತಿಕ ನಗರ. ಇಡೀ ವಿಶ್ವ ಈ ನಗರ ನೋಡುತ್ತಿದೆ. ನಮ್ಮ ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸಲು ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮುಂದಾಗಿದ್ದಾರೆ' ಎಂದು ತಿಳಿಸಿದರು.