ಮಂತ್ರಾಲಯ: ರಾಯರ 355ನೇ ಆರಾಧನೆ ಸಂಭ್ರಮ

Mantralaya: ಮಂತ್ರಾಲಯದಲ್ಲಿ ರಾಘವೇಂದ್ರ ತೀರ್ಥರ 355ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ.

Aug 30, 2026 - 11:15
ಮಂತ್ರಾಲಯ: ರಾಯರ 355ನೇ ಆರಾಧನೆ ಸಂಭ್ರಮ

ರಾಯಚೂರು: ಗುರು ಸಾರ್ವಭೌಮ ಶ್ರೀ ರಾಘವೇಂದ್ರ ತೀರ್ಥರ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಹಿನ್ನೆಲೆ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಧಾರ್ಮಿಕ ಸಂಭ್ರಮ ಮನೆ ಮಾಡಿತ್ತು.

ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳಗ್ಗಿನಿಂದಲೇ, ಪೂರ್ವಾರಾಧನೆಯ ವಿಧಿ ವಿಧಾನಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿದವು. ಮುಂಜಾನೆ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರಿಗೆ ಪಾದಪೂಜೆ, ಪಂಚಾಮೃತ ಅಭಿಷೇಕ, ಫಲ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ, ವೇದ ಪಂಡಿತರಿಂದ ವೇದ-ಮಂತ್ರ ಪಾರಾಯಣ, ವಿದ್ವಾನ್ ಆನಂತಾಚಾರ್ಯ ಅವರಿಂದ ಜ್ಞಾನಯಜ್ಞ ಪ್ರವಚನ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿ ನೀಡಿದವು.

ತಮಿಳುನಾಡಿನ ತಿರುಚಿಯ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ ಪವಿತ್ರ ಶೇಷವಸ್ತ್ರ ಸಮರ್ಪಣಾ ಕಾರ್ಯಕ್ರಮವು ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಭಾರತದ 108 ದಿವ್ಯ ದೇಶಗಳಲ್ಲಿ ಅಗ್ರಗಣ್ಯವಾದ ಮತ್ತು ಎಂಟು ಸ್ವಯಂ ವ್ಯಕ್ತ ಕ್ಷೇತ್ರಗಳಲ್ಲಿ ಮೊದಲನೆಯದಾದ ಶ್ರೀರಂಗಂ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ಪ್ರತಿವರ್ಷದಂತೆ ಈ ವರ್ಷವು ರಾಯರಿಗೆ ಶೇಷವಸ್ತ್ರವನ್ನು ಕಳುಹಿಸಿ ಕೊಡಲಾಗಿತ್ತು. ವಸ್ತ್ರ ರೂಪದಲ್ಲಿರುವ ಈ ಪ್ರಸಾದವನ್ನು ಮಠದ ಪೀಠಾಧಿಪತಿಗಳು ಹಾಗೂ ಸಿಬ್ಬಂದಿ ವರ್ಗ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಿದರು. ತಲೆಯ ಮೇಲೆ ಹೊತ್ತು ತಂದ ಶೇಷವಸ್ತ್ರವನ್ನು ಮೂಲ ಬೃಂದಾವನದ ಮುಂದೆ ಇರಿಸಿ, ಮಂಗಳಾರತಿ ಬೆಳಗಿ ಗುರುರಾಯರಿಗೆ ಅತ್ಯಂತ ಭಕ್ತಿಯಿಂದ ಸಮರ್ಪಿಸಲಾಯಿತು.

ಆ ಬಳಿಕ ಪ್ರಾಕಾರದ ವೇದಿಕೆಯಲ್ಲಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸುಬುಧೇಂದ್ರ ತೀರ್ಥರು, 'ಶ್ರೀರಂಗನಾಥ ಸ್ವಾಮಿಯೇ ಸ್ವತಃ ವಸ್ತ್ರರೂಪದಲ್ಲಿ ಮಂತ್ರಾಲಯದಂತಹ ಸುಕ್ಷೇತ್ರಕ್ಕೆ ಆಗಮಿಸಿ, ಗುರುರಾಯರನ್ನು ಅಲಂಕರಿಸಿ, ನಮ್ಮೆಲ್ಲರನ್ನು ಅನುಗ್ರಹಿಸಿದ್ದಾರೆ. ಇದು ಎರಡು ಮಹಾನ್ ಕ್ಷೇತ್ರಗಳ ನಡುವಿನ ದೈವಿಕ ಬಂಧ' ಎಂದು ಬಣ್ಣಿಸಿದರು.

ಈ ಪವಿತ್ರ ಸಂದರ್ಭದಲ್ಲಿ ಶ್ರೀರಂಗಂ ಕ್ಷೇತ್ರದಿಂದ ಆಗಮಿಸಿದ್ದ ಪ್ರಧಾನ ಅರ್ಚಕ ಸುಂದರ ಭಟ್ಟಾಚಾರ್ಯ, ವೇದ ಪಂಡಿತರು ಮತ್ತು ಅಧಿಕಾರಿ ವರ್ಗದವರನ್ನು ಶ್ರೀಮಠದ ವತಿಯಿಂದ ಶಾಲು, ಫಲಮಂತ್ರಾಕ್ಷತೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.