ಸಂತ ಫಿಲೋಮಿನಾ ಕಾಲೇಜು: ಸೆ.11ರಂದು ಪ್ರಥಮ ಪದವೀಧರರ ಸಮಾರಂಭ
St. Philomena College: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸೆ.11ರಂದು ಪ್ರಥಮ ಪದವೀಧರರ ಸಮಾರಂಭವನ್ನು ಆಯೋಜಿಸಲಾಗಿದೆ.
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (St Philomena College), ತನ್ನ ಶೈಕ್ಷಣಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಆಚರಿಸಲು ಸಿದ್ಧವಾಗಿದೆ. ಸೆ.11 ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ 'ಪ್ರಥಮ ಪದವೀಧರರ ಸಮಾರಂಭ-2026'ನ್ನು ಕಾಲೇಜಿನ ಎಸ್ಜೆಎಂ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕ ವಂ.ಡಾ.ಜೆ.ಬಿ.ಸಲ್ದಾನ್ಹಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಲೇಜಿನ 'ಪ್ರಥಮ ಪದವೀಧರರ ಸಮಾರಂಭ'ವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಸ್ವಾಯತ್ತ ಸಂಸ್ಥೆಯಾಗಿ ಕಾಲೇಜಿನ ನಿರಂತರ ಪ್ರಗತಿ ಹಾಗೂ ಬೆಳವಣಿಗೆಯಲ್ಲಿ ಇದು ಒಂದು ಪ್ರಮುಖ ಮೈಲಿಗಲ್ಲಾಗುವುದರ ಜೊತೆಗೆ ಶೈಕ್ಷಣಿಕ ಶ್ರೇಷ್ಠತೆ, ವ್ಯಕ್ತಿತ್ವ ನಿರ್ಮಾಣ ಮತ್ತು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕುರಿತಾಗಿ ಕಾಲೇಜು ಹೊಂದಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುವ ಸಂದರ್ಭವು ಆಗಿದೆ ಎಂದರು.

ಸ್ವಾಯತ್ತ ವ್ಯವಸ್ಥೆಯಡಿ ಪದವಿ ಪಡೆಯುತ್ತಿರುವ ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿಗಳ ತಂಡವನ್ನು ಅಧಿಕೃತವಾಗಿ ಗೌರವಿಸುವ ಮೂಲಕ ಈ ಕಾರ್ಯಕ್ರಮವು, ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಹೊಸ ಅಧ್ಯಾಯವೊಂದಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು.
ಈ ವೇಳೆ ಆಡಳಿತ ಮಂಡಳಿ, ಶೈಕ್ಷಣಿಕ ನಾಯಕತ್ವ, ಬೋಧಕ ವರ್ಗ, ಸಿಬ್ಬಂದಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಒಂದೆಡೆ ಸೇರಿ ಪದವೀಧರ ವಿದ್ಯಾರ್ಥಿಗಳ ಮತ್ತು ಶೈಕ್ಷಣಿಕ ಸಾಧಕರ ಸಾಧನೆಗಳನ್ನು ಸ್ಮರಿಸಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಅಧ್ಯಕ್ಷರಾದ ಡಾ.ಪೀಟರ್ ಪಾಲ್ ಸಲ್ದಾನ್ಹಾ ಅವರು ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಪ್ರೊ.ಕವಿತಾ ಕೆ.ಆರ್, ಮಂಗಳೂರಿನ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಕಾರ್ಯದರ್ಶಿ ಡಾ.ಪ್ರವೀಣ್ ಲಿಯೋ ಲಸ್ರಾದೋ ಹಾಗೂ ಕಾಲೇಜಿನ ಸಂಚಾಲಕರಾದ ತಾವು ಕೂಡ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಾಗುವುದು ಎಂದು ಹೇಳಿದರು.
ಪದವೀಧರರ ಸಮಾರಂಭವು ಕೇವಲ ಒಂದು ಔಪಚಾರಿಕ ಶೈಕ್ಷಣಿಕ ಕಾರ್ಯಕ್ರಮವಾಗಿರದೆ, ಹಲವು ವರ್ಷಗಳ ಕಲಿಕೆ, ಶಿಸ್ತು ಮತ್ತು ವೈಯಕ್ತಿಕ ಬೆಳವಣಿಗೆಯ ಪರಿಪೂರ್ಣತೆಯನ್ನು ಸಂಭ್ರಮಿಸುವ ಮಹತ್ವದ ಸಂದರ್ಭವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ ಅವರ ಶೈಕ್ಷಣಿಕ ಪಯಣದಲ್ಲಿ ಪೋಷಕರು, ಶಿಕ್ಷಕರು ಹಾಗೂ ಇಡೀ ಕಾಲೇಜು ಸಮುದಾಯ ನೀಡಿದ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸುವ ಅವಕಾಶವು ಇದಾಗಿದೆ ಎಂದರು.
ಸಮಾರಂಭದ ಕಾರ್ಯಕ್ರಮಗಳು ಕ್ರಮಬದ್ಧವಾಗಿ, ಗೌರವಯುತವಾಗಿ ಹಾಗೂ ಸ್ಮರಣೀಯವಾಗಿ ನಡೆಯುವಂತೆ ಸಂಸ್ಥೆಯು ಸಮಗ್ರ ಸಿದ್ಧತೆಗಳನ್ನು ಕೈಗೊಂಡಿದೆ. ಶೈಕ್ಷಣಿಕ ಶಿಷ್ಟಾಚಾರ, ಸಮಾರಂಭದ ಅಧಿಕೃತ ಉಡುಪು, ಶೈಕ್ಷಣಿಕ ಮೆರವಣಿಗೆ ಮತ್ತು ನಿರ್ಗಮನ ಮೆರವಣಿಗೆ, ಆಸನ ವ್ಯವಸ್ಥೆ, ಶೈಕ್ಷಣಿಕ ಶ್ರೇಣಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳ ಗೌರವ ಹಾಗೂ ಪದವಿ ಪ್ರಮಾಣಪತ್ರಗಳ ವಿತರಣೆ ಸೇರಿದಂತೆ ವಿವಿಧ ಅಂಶಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಶೈಕ್ಷಣಿಕ ಮಂಡಳಿ, ಬೋಧಕ ವರ್ಗ, ಸಿಬ್ಬಂದಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಾರ್ಡನ್‌ಗಳು, ಗಣ್ಯ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದು ಇಡೀ ಸಂಸ್ಥೆಯ ಸಮುದಾಯವನ್ನು ಒಂದೆಡೆ ಸೇರಿಸುವ ಮಹತ್ವದ ಸಮಾರಂಭವಾಗಲಿದೆ ಎಂದು ಹೇಳಿದರು.
'ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ಪ್ರಥಮ ಪದವೀಧರರ ಸಮಾರಂಭವು ಸಂಸ್ಥೆಯ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಹಾಗೂ ಸ್ಮರಣೀಯ ಸಂದರ್ಭವಾಗಿದ್ದು, ಶೈಕ್ಷಣಿಕ ಶ್ರೇಷ್ಠತೆ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕುರಿತಾದ ಸಂಸ್ಥೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸಲಿದೆ' ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೆರೊ, ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯರ್, ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ.ವಿನಯಚಂದ್ರ, ಶೈಕ್ಷಣಿಕ ವಿಭಾಗದ ರಿಜಿಸ್ಟ್ರಾರ್ ಡಾ.ನಾರ್ಬರ್ಟ್ ಮಸ್ಕರೇನ್ಹಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪಾಲನಾ ಪರಿಷತ್ತಿನ ಉಪಾಧ್ಯಕ್ಷ ರೋಶನ್ ಲಸ್ರಾದೋ ಮತ್ತು ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಭಾರತಿ ಎಸ್ ರೈ ಇದ್ದರು.