ಗೋಕರ್ಣ: ಮಹಾಗಣಪತಿ ವಿಗ್ರಹ ಸ್ಪರ್ಶಿಸಿ ಪೂಜೆಗೆ ನಿಷೇಧ

Gokarna: ಇಲ್ಲಿನ ಮಹಾಗಣಪತಿ ದೇಗುಲದ ಪುರಾತನ ಕಪ್ಪು ಕಲ್ಲಿನ 'ಗಣಪತಿ' ವಿಗ್ರಹವು ಭಕ್ತರ ನಿರಂತರ ಸ್ಪರ್ಶದಿಂದ ಸವೆದು ಹೋಗುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Jul 24, 2026 - 13:22
ಗೋಕರ್ಣ: ಮಹಾಗಣಪತಿ ವಿಗ್ರಹ ಸ್ಪರ್ಶಿಸಿ ಪೂಜೆಗೆ ನಿಷೇಧ

ಗೋಕರ್ಣ: ಉ.ಕನ್ನಡ ಜಿಲ್ಲೆಯ ಗೋಕರ್ಣ (Gokarna) ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಇಲ್ಲಿನ ಮಹಾಗಣಪತಿ (Maha Ganapati) ದೇಗುಲದ ಪುರಾತನ ಕಪ್ಪು ಕಲ್ಲಿನ 'ಗಣಪತಿ' ವಿಗ್ರಹವು ಭಕ್ತರ ನಿರಂತರ ಸ್ಪರ್ಶದಿಂದ ಸವೆದು ಹೋಗುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಇನ್ಮುಂದೆ ಭಕ್ತರು ವಿಗ್ರಹ ಮುಟ್ಟಿ ಪೂಜೆ ಸಲ್ಲಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಲವಾರ್ ಅವರು ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದ ಅರ್ಚಕರು & ಸ್ಥಳೀಯರೊಂದಿಗಿನ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು. 'ಪ್ರಾಚೀನ ಶಿಲಾ ವಿಗ್ರಹದ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಹೀಗಾಗಿ, ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ' ಎಂದು ಹೇಳಿದರು.

ಹೊಸ ಆದೇಶದಲ್ಲಿ ಏನಿದೆ?

ಪ್ರಧಾನ ಅರ್ಚಕರನ್ನು ಹೊರತುಪಡಿಸಿ, ಬೇರೆ ಯಾವುದೇ ಅರ್ಚಕರು, ವಿಐಪಿಗಳು, ಗಣ್ಯ ವ್ಯಕ್ತಿಗಳು ಅಥವಾ ಸಾಮಾನ್ಯ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶವಿರುವುದಿಲ್ಲ. ಭಕ್ತರು ವಿಗ್ರಹಕ್ಕೆ ಅಭಿಷೇಕ ಮಾಡುವುದು, ಹೂವು, ಕುಂಕುಮ ಹಚ್ಚುವುದು ಹಾಗೂ ಸ್ಪರ್ಶಿಸಿ ನಮಸ್ಕರಿಸುವುದನ್ನು ನಿರ್ಬಂಧಿಸಲಾಗಿದೆ.

ದೇವರ ದರ್ಶನಕ್ಕೆ ಆಗಮಿಸುವ ಭಕ್ತರು, ಗರ್ಭಗುಡಿಯ ಹೊರಗಿನಿಂದಲೇ ದರ್ಶಿಸಬೇಕು. ಆರತಿ ಹಾಗೂ ಇತರೆ ಪೂಜಾ ಕೈಂಕರ್ಯಗಳನ್ನು ಗರ್ಭಗುಡಿಯ ಹೊರಭಾಗದಿಂದಲೇ ನೆರವೇರಿಸಲು ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.