ಸಂತ ಫಿಲೋಮಿನಾ ಕಾಲೇಜು: ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
St Philomena College: ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ, ಈಚೆಗೆ 'ಹಾಕಿ ಮಾಂತ್ರಿಕ' ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಸ್ಮರಣಾರ್ಥ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ' ಆಯೋಜಿಸಲಾಗಿತ್ತು.
ಪುತ್ತೂರು: 'ಮೇಜರ್ ಧ್ಯಾನ್‌ಚಂದ್ ಅವರ ಜೀವನ ಹಾಗೂ ಸಾಧನೆಗಳು ಯುವಜನರಿಗೆ ಸ್ಫೂರ್ತಿಯಾಗಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ನೌಕಾ ಘಟಕದ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಹೇಳಿದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ, ಈಚೆಗೆ 'ಹಾಕಿ ಮಾಂತ್ರಿಕ' ಮೇಜರ್ ಧ್ಯಾನ್‌ಚಂದ್ ಜನ್ಮದಿನದ ಸ್ಮರಣಾರ್ಥ ಆಯೋಜಿಸಿದ್ದ 'ರಾಷ್ಟ್ರೀಯ ಕ್ರೀಡಾ ದಿನಾಚರಣೆ'ಯಲ್ಲಿ ಅವರು ಮಾತನಾಡಿದರು.

ಕ್ರೀಡಾಪಟುಗಳು ಆರೋಗ್ಯಕರ ಆಹಾರ ಪದ್ಧತಿ ರೂಢಿಸಿಕೊಳ್ಳುವ ಅಗತ್ಯ, ಕ್ರೀಡೆಯಲ್ಲಿ ಉಂಟಾಗಬಹುದಾದ ಗಾಯಗಳ ಕುರಿತು ಅರಿವು ಮತ್ತು ಯಶಸ್ವಿ ಕ್ರೀಡಾ ಬದುಕಿಗೆ ಸೂಕ್ತವಾದ ಪುನರ್ವಸತಿ ಚಿಕಿತ್ಸೆಯ ಮಹತ್ವವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈಯಕ್ತಿಕ ಹಾಗೂ ವೃತ್ತಿಪರ ಬದುಕನ್ನು ರೂಪಿಸುವಲ್ಲಿ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಈ ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯ್ ಕುಮಾರ್ ಮೊಳಿಯಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಭಾರತಿ ಎಸ್ ರೈ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಧನ್ಯ ಪಿ.ಟಿ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಹರ್ಷಿತಾ ಮತ್ತು ರಾಜೇಶ್ ಮೂಲ್ಯ ಕಾರ್ಯಕ್ರಮವನ್ನು ಸಂಯೋಜಿಸಿದರು.
ಕ್ರೀಡಾ ಪ್ರತಿಜ್ಞೆಯನ್ನು ಕೃತಿ ಬೋಧಿಸಿದರು. ಅರ್ಚನಾ ಸ್ವಾಗತಿಸಿದರು. ಪ್ರೇಕ್ಷಾ ವಂದಿಸಿದರು. ಪೃಥ್ವಿ ನಿರೂಪಿಸಿದರು.