ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಲ್ಲಿ ರಸಾಯನಶಾಸ್ತ್ರದ ಪಾತ್ರ ಪ್ರಮುಖವಾಗಿದೆ: ಡಾ.ದಿವ್ಯಾ ಶೆಟ್ಟಿ
Puttur: ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಿದ್ದ 'ಕೆಮಿಸ್ಟಿ ಬಿಯಾಂಡ್ ಕ್ಲಾಸ್ ರೂಮ್' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಡಾ.ದಿವ್ಯಾ ಎನ್ ಶೆಟ್ಟಿ ಅವರು ಮಾತನಾಡಿದರು.
ಪುತ್ತೂರು: ರಸಾಯನಶಾಸ್ತ್ರವು ಕೇವಲ ಪುಸ್ತಕಗಳಲ್ಲಿರುವ ಸೂತ್ರಗಳು, ರಾಸಾಯನಿಕ ಸಮೀಕರಣಗಳು ಹಾಗೂ ಪರೀಕ್ಷೆಗಳ ಅಂಕಗಳಿಗೆ ಮಾತ್ರ ಸೀಮಿತವಾದ ವಿಷಯವಲ್ಲ. ನಮ್ಮ ದಿನನಿತ್ಯದ ಪ್ರತಿಯೊಂದು ಚಟುವಟಿಕೆಯ ಹಂತದಲ್ಲೂ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ನಾವು ಉಸಿರಾಡುವ ಗಾಳಿಯಿಂದ ಹಿಡಿದು, ಸೇವಿಸುವ ಆಹಾರ, ಬಳಸುವ ಔಷಧಗಳು ಮತ್ತು ಧರಿಸುವ ಉಡುಪುಗಳವರೆಗೆ ಎಲ್ಲದರಲ್ಲೂ ಇದರ ಪ್ರಭಾವವಿದೆ ಎಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರದ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ದಿವ್ಯಾ ಎನ್ ಶೆಟ್ಟಿ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ & ಸಂಶೋಧನಾ ಕೇಂದ್ರ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ 'ಕೆಮಿಸ್ಟಿ ಬಿಯಾಂಡ್ ಕ್ಲಾಸ್ ರೂಮ್' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು.
ಕಾಲೇಜಿನ ಸಂಶೋಧನಾ ಕೇಂದ್ರದ ಸಂಯೋಜಕಿ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯಸರಸ್ವತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸಾಯನಶಾಸ್ತ್ರದ ಅಧ್ಯಯನವು ಕೇವಲ ಜ್ಞಾನಾರ್ಜನೆಯಲ್ಲ. ಅದೊಂದು ಅಪಾರ ಆನಂದ ನೀಡುವ ಅದ್ಭುತ ಅನುಭವ. ಈ ಉದಯೋನ್ಮುಖ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಅನಂತ ಅವಕಾಶಗಳಿವೆ. ಅತ್ಯಲ್ಪ ಪ್ರಮಾಣದ ರಾಸಾಯನಿಕವು ಬೃಹತ್ ಬದಲಾವಣೆ ತರುವಂತೆ, ನಿಮ್ಮ ನಿರಂತರವಾದ ಸಣ್ಣ ಪ್ರಯತ್ನಗಳೇ ಭವಿಷ್ಯದಲ್ಲಿ ಮಹತ್ತರವಾದ ಯಶಸ್ಸಿಗೆ ಅಡಿಪಾಯವಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಸ್ಮಿತಾ ಉಪಸ್ಥಿತರಿದ್ದರು. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ಹರ್ಷಿತಾ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅನುಶ್ರೀ ವಂದಿಸಿದರು. ಪ್ರತೀಕ್ಷಾ ನಿರೂಪಿಸಿದರು.