Iskcon Mangaluru: ಸೆ.3 & 4ಕ್ಕೆ ಇಸ್ಕಾನ್ ಮಂಗಳೂರಿನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
Iskcon Mangaluru: ಸೆ.3 ಮತ್ತು 4 ರಂದು ಪಿಲಿಕುಳ ಸ್ಕೌಟ್ಸ್ ಭವನದಲ್ಲಿ ಇಸ್ಕಾನ್ ಮಂಗಳೂರು ವತಿಯಿಂದ, 'ಶ್ರೀಕೃಷ್ಣ ಜನ್ಮಾಷ್ಟಮಿ-2026'ನ್ನು ಆಚರಿಸಲಾಗುತ್ತದೆ.
ಮಂಗಳೂರು: ಇಸ್ಕಾನ್ ಮಂಗಳೂರು (Iskcon Mangaluru) ವತಿಯಿಂದ ಈ ಬಾರಿ ಸೆ.3 ಮತ್ತು 4 ರಂದು ಪಿಲಿಕುಳ ಸ್ಕೌಟ್ಸ್ ಭವನದಲ್ಲಿ 'ಶ್ರೀಕೃಷ್ಣ ಜನ್ಮಾಷ್ಟಮಿ-2026'ನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರಿನ ಅಧ್ಯಕ್ಷರಾದ ಗುಣಕರ ರಾಮದಾಸ ಪ್ರಭು ಅವರು ಹೇಳಿದ್ದಾರೆ.
ಕೊಡಿಯಾಲ್ ಬೈಲ್‌ನಲ್ಲಿರುವ ಇಸ್ಕಾನ್ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಸಲದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸಾಂಪ್ರದಾಯಿಕ ಪೂಜೆ & ಶ್ರೀಕೃಷ್ಣ-ಬಲರಾಮ ಮಂಗಲಾರತಿ, ಶೃಂಗಾರ ಆರತಿ, ಪುಷ್ಪಾಂಜಲಿ ಸೇವೆ ಹಾಗೂ ಜೂಲನ್ ಸೇವೆಗಳೊಂದಿಗೆ ಪ್ರಾರಂಭವಾಗಲಿದೆ. ಶ್ರೀಕೃಷ್ಣನ ಶುಭ ಅವತರಣ ದಿನದ ಅಂಗವಾಗಿ, ವಿಶೇಷ ಕಾರ್ಯಕ್ರಮಗಳು ಕೂಡ ಜರುಗಲಿವೆ ಎಂದು ತಿಳಿಸಿದ್ದಾರೆ.

ಸೆ.4 ರಂದು ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯುವ ಶ್ರೀಕೃಷ್ಣ-ಬಲರಾಮ ಮಹಾ ಅಭಿಷೇಕದೊಂದಿಗೆ, ಈ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ ಎಂದರು.
ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಇಸ್ಕಾನ್ ಪಿವಿಎಸ್ ಕಲಾಕುಂಜದಿಂದ ಪಿಲಿಕುಳದಲ್ಲಿರುವ ಸ್ಕೌಟ್ಸ್ ಭವನಕ್ಕೆ ಸಾರ್ವಜನಿಕರು ಹಾಗೂ ಭಕ್ತರಿಗೆ ತೆರಳುವುದಕ್ಕೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಂದನಾಚಾರ್ಯ ದಾಸ ಹಾಗೂ ಸುಂದರ ದಾಸ ಉಪಸ್ಥಿತರಿದ್ದರು.
ಪ್ರಮುಖ ಆಕರ್ಷಣೆಗಳೇನು:
* ಶ್ರೀಕೃಷ್ಣ ವೈಭವಂ: ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಭಾರತದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
* ಇಂಟರ್‌ನ್ಯಾಷನಲ್ ಭಜನ್ ಕ್ಲಬ್ಬಿಂಗ್: ಭಕ್ತಿಮಯ ಗೀತಾ ಗಾಯನವನ್ನು ಆಯೋಜಿಸಲಾಗಿದೆ.
* ಕೃಷ್ಣ ರಸ ಬಜಾರ್: ಮಂಗಳೂರಿನ ಸುಪ್ರಸಿದ್ದ ಬ್ರ್ಯಾಂಡ್‌ಗಳಿಂದ ಆಹಾರ ಉತ್ಸವವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ 8296207108 ಅಥವಾ iskconmangalore.org ವೆಬ್‍ಸೈಟ್‍ನ್ನು ಸಂಪರ್ಕಿಸಬಹುದು.