ವಂದೇ ಮಾತರಂ' ಗೀತೆಗೆ 150ರ ಸಂಭ್ರಮ: ಬೆಂಗಳೂರಿನ 'ಮಹಿಳಾ ಯಕ್ಷೋತ್ಸವ'ದಲ್ಲಿ ಆಕರ್ಷಕ ಯಕ್ಷ ನೃತ್ಯ ನಮನ

Bengaluru: ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಚನೆಯಾಗಿ 150 ವರ್ಷಗಳು ಪೂರೈಸಿದ ಹಿನ್ನೆಲೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾನುವಾರ ನಡೆದ 'ಮಹಿಳಾ ಯಕ್ಷೋತ್ಸವ - 2026' ಕಾರ್ಯಕ್ರಮದಲ್ಲಿ ಯಕ್ಷಗಾನ ನೃತ್ಯದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಯಿತು.

Sep 1, 2026 - 14:14
ವಂದೇ ಮಾತರಂ' ಗೀತೆಗೆ 150ರ ಸಂಭ್ರಮ: ಬೆಂಗಳೂರಿನ 'ಮಹಿಳಾ ಯಕ್ಷೋತ್ಸವ'ದಲ್ಲಿ ಆಕರ್ಷಕ ಯಕ್ಷ ನೃತ್ಯ ನಮನ

ಬೆಂಗಳೂರು: ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಚನೆಯಾಗಿ 150 ವರ್ಷಗಳು ಪೂರೈಸಿದ ಹಿನ್ನೆಲೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾನುವಾರ ನಡೆದ 'ಮಹಿಳಾ ಯಕ್ಷೋತ್ಸವ - 2026' ಕಾರ್ಯಕ್ರಮದಲ್ಲಿ ಯಕ್ಷಗಾನ ನೃತ್ಯದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಯಿತು.
 
'ಕರ್ನಾಟಕ ಮಹಿಳಾ ಯಕ್ಷಗಾನ' ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಈ ಸಮಾರಂಭದಲ್ಲಿ 'ವಂದೇ ಮಾತರಂ' ಗೀತೆಗೆ ಹೆಜ್ಜೆ ಹಾಕಲಾಯಿತು. ಆ ಬಳಿಕ ಯಕ್ಷ ಕಲಾವಿದೆಯರು ಜೈ ಹಿಂದ್‌ ಹಾಗೂ ಭಾರತ್‌ ಮಾತಾಕೀ ಜೈ ಎಂಬ ಜಯಘೋಷ ಮಾಡಿ, ಯಕ್ಷನಮನ ಸಲ್ಲಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಮಾತನಾಡಿ, 'ಯಕ್ಷಗಾನವನ್ನು ಸಾಮಾನ್ಯವಾಗಿ ಗಂಡುಕಲೆ ಎಂದೇ ಕರೆಯಲಾಗುತ್ತಿತ್ತು. ಆದರೆ, ಅಂತಹ ಕ್ಷೇತ್ರದಲ್ಲಿ ಮಹಿಳೆಯರೂ ಕೂಡ ಯಕ್ಷಗಾನದ ಎಲ್ಲ ಪ್ರಾಕಾರಗಳಲ್ಲಿ ಗಣನೀಯ ಸಾಧನೆ ಮಾಡಿ, ಹೆಸರುಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ಯಾವುದೇ ಇತಿಹಾಸವನ್ನು ನೋಡಿದಾಗ ಅಲ್ಲಿ ಅವನ ಕಥೆಯನ್ನಷ್ಟೇ ಹುಡುಕಲಾಗುತ್ತಿತ್ತು. ಆದರೆ ಇಂದು ಅವಳ ಕಥೆಯೂ ದಾಖಲಾಗುವ ಸುಸಂದರ್ಭ ಒದಗಿಬಂದಿದೆ' ಹೇಳಿದರು.

26 ವರ್ಷಗಳ ಯಕ್ಷಗಾನ ಸೇವೆಗೆ ಮೆಚ್ಚುಗೆ:

ಕಳೆದ 26 ವರ್ಷಗಳಿಂದ ಸತತವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸಂಸ್ಥೆಯ ರೂವಾರಿ ಕೆ.ಗೌರಿ ಅವರ ಕೊಡುಗೆಯನ್ನು ಡಾ.ಪೂರ್ಣಿಮಾ, ಮುಕ್ತಕಂಠದಿಂದ ಶ್ಲಾಘಿಸಿದರು. 'ಮಹಿಳೆಯರು, ಯುವತಿಯರು ಮತ್ತು ಬಾಲಕಿಯರಿಗೆ ಯಕ್ಷಗಾನ ಕಲೆಯ ಸೂಕ್ಷ್ಮತೆಗಳನ್ನು ಧಾರೆವೆರೆದು, ಪ್ರಸಂಗ ರೂಪದಲ್ಲಿ ವೇದಿಕೆಗೆ ತಂದು ಯಕ್ಷೋತ್ಸವ ನಡೆಸುತ್ತಿರುವುದು ಅತ್ಯಂತ ಗಣನೀಯ ಕೆಲಸ' ಎಂದರು.

ಕುಂಬಳೆ ಸುಂದರ ರಾಯರ ಕೃತಿ ಪ್ರಕಟಣೆ:

ವೀಣೆ ರಾಜಾರಾಯರ ಪುತ್ರಿಯಾದ ತಾವು 'ಉದಯವಾಣಿ' ಪತ್ರಿಕೆಯ ಸಂಪಾದಕರಾಗಿದ್ದಾಗ ಮತ್ತು ಮಂಗಳೂರಿನಲ್ಲಿ 'ಪ್ರಜಾವಾಣಿ' ಬ್ಯೂರೋ ಮುಖ್ಯಸ್ಥರಾಗಿದ್ದ ದಿನಗಳಲ್ಲಿ ಯಕ್ಷಗಾನದೊಂದಿಗೆ ಬೆಳೆದ ಬಾಂಧವ್ಯವನ್ನು ಡಾ.ಪೂರ್ಣಿಮಾ ಸ್ಮರಿಸಿದರು. ಪ್ರಕಾಶಕಿಯಾಗಿ ತಾವು ಯಕ್ಷಗಾನದ ಅಪ್ರತಿಮ ಕಲಾವಿದ ದಿ.ಕುಂಬಳೆ ಸುಂದರ ರಾಯರ ಕುರಿತ ಕೃತಿಯನ್ನು, ಖ್ಯಾತ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಸಂಪಾದಕತ್ವದಲ್ಲಿ ಹೊರತಂದಿರುವುದಾಗಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಗಣ್ಯರ ಉಪಸ್ಥಿತಿ ಹಾಗೂ ಪ್ರಸಂಗ ಪ್ರದರ್ಶನ:

ಈ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಡಾ.ಆನಂದರಾಮ ಉಪಾಧ್ಯ, ಸರಳ ಯೋಗ ವೇದಿಕೆ ಟ್ರಸ್ಟ್ ಕಾರ್ಯಾಧ್ಯಕ್ಷ ಜಯಪ್ರಕಾಶ್ ಎ.ಜಿ.ಕೆ, ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯ ನಿರ್ದೇಶಕಿ ಗೌರಿ ಕೆ ಸಾಸ್ತಾನ ಮತ್ತು ಯಕ್ಷಗುರು ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು.

ಉತ್ಸವದ ಭಾಗವಾಗಿ ಯಕ್ಷಗಾನ ಪೂರ್ವರಂಗ, 'ಕನಕಾಂಗಿ ಕಲ್ಯಾಣ' ಮತ್ತು 'ಸುದರ್ಶನ ವಿಜಯ' ಪೌರಾಣಿಕ ಪ್ರಸಂಗಗಳನ್ನು ಮಹಿಳಾ ಮತ್ತು ಬಾಲ ಕಲಾವಿದೆಯರು ಯಶಸ್ವಿಯಾಗಿ ಪ್ರಸ್ತುತಪಡಿಸಿದರು.

ಸಂಯೋಜನೆ ಮತ್ತು ನಿರೂಪಣೆ: ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಮತ್ತು ಗೌತಮ್ ಸಾಸ್ತಾನ ಕಾರ್ಯಕ್ರಮವನ್ನು ಸಂಯೋಜಿಸಿದ್ದು, ಅಂಬಿಕಾ ವಿಜಯಕುಮಾರ್ ಹಾಗೂ ಭಾರ್ಗವಿ ಶ್ರೀ ಹರ್ಷ ನಿರೂಪಣೆ ಮಾಡಿದರು.

ಹಿಮ್ಮೇಳ: ಭಾಗವತರಾಗಿ ಸುಬ್ರಹ್ಮಣ್ಯ ನಾವುಡ, ವಿಶ್ವನಾಥ ಶೆಟ್ಟಿ; ಮೃದಂಗದಲ್ಲಿ ನರಸಿಂಹ ಆಚಾರ್, ರಘು ಶರ್ಮ ಹಾಗೂ ಚೆಂಡೆಯಲ್ಲಿ ಸುಬ್ರಹ್ಮಣ್ಯ ಗಾಣಿಗ ಸಾಥ್ ನೀಡಿದರು.

ಮುಮ್ಮೇಳ: ಗೌರಿ ಕೆ. ಸಾಸ್ತಾನ, ಅನ್ನಪೂರ್ಣೇಶ್ವರಿ, ಸುಮ ಅನಿಲ್ ಕುಮಾರ್, ಆಶಾ ಆರ್, ಚೈತ್ರ ಹೊನ್ನಾವರ, ವೀಣಾ ಕಠಾರೆ, ಲಕ್ಷ್ಮೀ ರಾವ್, ಕವಿತ, ಶಶಿಕಲ, ಸರಿತ, ಸೌಗಂಧಿ ನಾಯಕ್, ಶ್ವೇತ, ಗಗನ, ರಕ್ಷಾ ಆರ್, ದೃಷ್ಟಿ, ಚೈತನ್ಯ, ಶ್ರೇಯಾ, ಅನುಷ, ಸಹನ, ಯಾದ್ವಿಯುತಿ, ಕೃತಿ ಅಮ್ಮೆಂಬಳ, ಧೃತಿ ಅಮ್ಮೆಂಬಳ, ಅಭಿಶ್ರೀ, ಸಮೃದ್ಧಿ, ಸೌಜನ್ಯ ನಾವಡ, ಮಾನಸ ನಾವಡ, ಚಿನ್ಮಯಿ, ಮಾನ್ಯ, ರಕ್ಷಾ ಮತ್ತು ಅಮಿತ ಮೊದಲಾದವರು ವಿವಿಧ ವೇಷಗಳಲ್ಲಿ ಮಿಂಚಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.