Priyank Kharge: ಕಾನೂನು, ಬದ್ಧತೆಯಿಂದ ಕೆಲಸ ಮಾಡುವ ಪೊಲೀಸರ ಬೆನ್ನಿಗೆ ಸರ್ಕಾರ.. ಪ್ರಿಯಾಂಕ್ ಖರ್ಗೆ
Priyank Kharge: ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ 'ಗೃಹ ಸಚಿವರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಖರ್ಗೆ ಭಾಗವಹಿಸಿದ್ದರು.
ಬೆಂಗಳೂರು: ಕಾನೂನಿನ ಚೌಕಟ್ಟಿನೊಳಗೆ, ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಬೆನ್ನಿಗೆ ಸರ್ಕಾರವು ನಿಲ್ಲುತ್ತದೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ, ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ 'ಗೃಹ ಸಚಿವರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಪ್ರಿಯಾಂಕ್ ಖರ್ಗೆ ಪಾಲ್ಗೊಂಡು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‌ಟೇಬಲ್‌ಗಳು, ಹೆಡ್ ಕಾನ್ಸ್‌ಟೇಬಲ್‌ಗಳು, ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.\

ಪೊಲೀಸ್ ಸಿಬ್ಬಂದಿಯ ಸೇವೆ, ಕರ್ತವ್ಯದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಆರೋಗ್ಯ, ಮಾನಸಿಕ ಒತ್ತಡ, ವರ್ಗಾವಣೆ, ಬಡ್ತಿ, ಕುಟುಂಬ ಮತ್ತು ಮಕ್ಕಳ ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಚಿವರು ಸಿಬ್ಬಂದಿಯೊಂದಿಗೆ ನೇರವಾಗಿ ಸಂವಾದ ನಡೆಸಿದರು.
ಮಿಷನ್ ಮೋಡ್‌ನಲ್ಲಿ'ಬೇಡ ಬ್ರೋ' ಅಭಿಯಾನ:
ಸಿಂಥೆಟಿಕ್ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿರುದ್ಧದ 'ಬೇಡ ಬ್ರೋ' ಅಭಿಯಾನವನ್ನು ಪೊಲೀಸರು ಮಿಷನ್ ಮೋಡ್‌ನಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ತಮ್ಮ ವ್ಯಾಪ್ತಿಯಲ್ಲಿ ಯಾರು ಮಾದಕ ವಸ್ತುಗಳನ್ನು ಸೇವಿಸುತ್ತಾರೆ, ಯಾರು ಮಾರಾಟ ಮಾಡುತ್ತಾರೆ, ಯಾವ ಮೆಡಿಕಲ್ ಶಾಪ್ ಅಥವಾ ಫಾರ್ಮಸಿಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಾಮಾನ್ಯವಾಗಿಯೇ ತಿಳಿದಿರುತ್ತದೆ. ನಿರ್ದಿಷ್ಟ ಗುರಿ ನೀಡಿದಾಗ ಮಾತ್ರ, ವಿವರ ನೀಡುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.

ಮಾದಕ ವಸ್ತುಗಳ ಸೇವನೆಯಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಈ ಸಮಸ್ಯೆ ಬೆಂಗಳೂರು, ಮಂಗಳೂರು ಅಥವಾ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ತಾಪುರ, ಚಿಂಚೋಳಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ, ನೆರೆ ರಾಜ್ಯಗಳ ಪೊಲೀಸರು ಬಂದು ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದರು.
ರೌಡಿಗಳೊಂದಿಗೆ ಯಾವುದೇ ರೀತಿಯ ನೆಂಟಸ್ತಿಕೆ ಬೇಡ:
ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾರು ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರ ಬಳಿ ಇರುತ್ತದೆ. ಕೆಲವೊಮ್ಮೆ ಪೊಲೀಸರೇ ಇಂತಹ ವ್ಯಕ್ತಿಗಳನ್ನು ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಅವರಿಗೆ ಮಾಹಿತಿ ನೀಡುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಯಾವುದೇ ರೀತಿಯಲ್ಲಿ ಅವರನ್ನು ಪ್ರೋತ್ಸಾಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು.
ಸೈಬರ್ ಅಪರಾಧಗಳ ವಿರುದ್ಧ ಸಂವೇದನಾಶೀಲ ಕ್ರಮ:
ಮಹಿಳೆಯ ಗೌರವಕ್ಕಿಂತ ದೊಡ್ಡದು ಯಾವುದು ಇಲ್ಲ. ತಂತ್ರಜ್ಞಾನ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಆರ್ಥಿಕ ಅಪರಾಧಗಳು, ಸೈಬರ್ ಬುಲ್ಲಿಯಿಂಗ್, ಈವ್ ಟೀಸಿಂಗ್ ಮತ್ತು ಸೆಕ್ಸ್‌ಟಾರ್ಷನ್ ಸೇರಿದಂತೆ ಹಲವು ಅಪರಾಧಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಮಹಿಳೆಯರು ತಮ್ಮ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರು ನೀಡಿದಾಗ, ಪೊಲೀಸರು ಅತ್ಯಂತ ಸಂವೇದನಾಶೀಲವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಆರೋಗ್ಯಕ್ಕೂ ಸರ್ಕಾರದ ಆದ್ಯತೆ:
ಪೊಲೀಸ್ ಸಿಬ್ಬಂದಿಯ ಕರ್ತವ್ಯದ ಸ್ವರೂಪ ಅತ್ಯಂತ ಒತ್ತಡದಿಂದ ಕೂಡಿದೆ. ಹಬ್ಬ-ಹರಿದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವುದು, ಸಂಚಾರದ ಒತ್ತಡ ಎದುರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬರುವ ದೂರುಗಳಿಗೆ ಸ್ಪಂದಿಸುವುದು ಸೇರಿದಂತೆ ನಿರಂತರ ಒತ್ತಡದ ವಾತಾವರಣದಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
ಸಿಬ್ಬಂದಿಯ ಕುಟುಂಬ, ವರ್ಗಾವಣೆ ಮತ್ತು ಬಡ್ತಿಗೂ ಗಮನ:
ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ. ವರ್ಗಾವಣೆ, ಬಡ್ತಿ, ಸೇವಾ ಮೌಲ್ಯಮಾಪನ ಸೇರಿದಂತೆ ವಿವಿಧ ವಿಚಾರಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಉತ್ತಮ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಕೇವಲ ಸೇವಾವಧಿಯ ಆಧಾರದ ಮೇಲೆ ಬಡ್ತಿಯನ್ನು ಪರಿಗಣಿಸುವುದರ ಜೊತೆಗೆ, ಕಾರ್ಯಕ್ಷಮತೆ ಮತ್ತು ಸರ್ಕಾರದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯಕ್ಕೂ ಮಹತ್ವ ನೀಡಲಾಗುವುದು ಎಂದು ತಿಳಿಸಿದರು.
ಪೊಲೀಸರ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ:
ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೂ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ. ಕೇವಲ ಪ್ರಮಾಣಪತ್ರ ಪಡೆಯುವ ಶಿಕ್ಷಣಕ್ಕಿಂತ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ, ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸುವುದು ಮುಖ್ಯ ಎಂದು ಹೇಳಿದರು.
ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಉದ್ಯೋಗದ ಖಾತರಿ ನೀಡಲು ಸಾಧ್ಯವಾಗದಿದ್ದರೂ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ನೀಡುವ ಖಾತರಿಯನ್ನು ಸರ್ಕಾರ ನೀಡಲಿದೆ ಎಂದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ 'ನಿಪುಣ ಕರ್ನಾಟಕ' ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿ, ಉತ್ತಮ ಸಂವಹನ ಕೌಶಲ್ಯ ಹಾಗೂ ಭಾಷಾ ಪ್ರಯೋಗಾಲಯಗಳಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.