ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ

Karnataka: ಪಿಎಂ ಇ-ಡ್ರೈವ್ ಯೋಜನೆಯಡಿ ರಾಜ್ಯದ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಆವರಣಗಳಲ್ಲಿ ಲಭ್ಯವಿರುವ ಸೂಕ್ತ ಸ್ಥಳಗಳನ್ನು ಬಳಸಿಕೊಂಡು, ಸಾರ್ವಜನಿಕ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Aug 30, 2026 - 13:28
Aug 30, 2026 - 13:29
ಸರ್ಕಾರಿ ಇಲಾಖೆಗಳ ಆವರಣದಲ್ಲಿ ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಗೌರವ್‌ ಗುಪ್ತ

ಬೆಂಗಳೂರು: ಪಿಎಂ ಇ-ಡ್ರೈವ್ ಯೋಜನೆಯಡಿ ರಾಜ್ಯದ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಆವರಣಗಳಲ್ಲಿ ಲಭ್ಯವಿರುವ ಸೂಕ್ತ ಸ್ಥಳಗಳನ್ನು ಬಳಸಿಕೊಂಡು, ಸಾರ್ವಜನಿಕ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಶನಿವಾರ ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಪ್ರಮುಖ ಸರ್ಕಾರಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಿಎಂ ಇ-ಡ್ರೈವ್ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಚರ್ಚಿಸಿದರು.

ಸರ್ಕಾರಿ ಇಲಾಖೆಗಳಿಗೆ ಸೇರಿದ ಸ್ಥಳಗಳಲ್ಲಿ ಲಭ್ಯವಿರುವ ಪಾರ್ಕಿಂಗ್ ಅಥವಾ ಖಾಲಿ ಜಾಗಗಳಲ್ಲಿ ಇವಿ ಚಾರ್ಚಿಂಗ್‌ ಕೇಂದ್ರಗಳ ಸ್ಥಾಪನೆಗೆ ಸೂಕ್ತ ಸ್ಥಳಗಳನ್ನು ಗುರುತಿಸುವುದು, ಅಗತ್ಯ ಅನುಮೋದನೆಗಳನ್ನು ತ್ವರಿತವಾಗಿ ನೀಡುವುದು ಮತ್ತು ಗುರುತಿಸಲಾದ ಸ್ಥಳಗಳನ್ನು ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂಗೆ ಹಸ್ತಾಂತರಿಸುವಂತೆ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಸಾರ್ವಜನಿಕರಿಗೆ 24x7 ಪ್ರವೇಶ ಕಲ್ಪಿಸಲು, ಅಗತ್ಯವಿದ್ದೆಡೆ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಯಿತು.

'ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆಯಾಗುವ ಜಾಗದ ಮಾಲೀಕತ್ವ ಹೊಂದಿರುವ ಸರ್ಕಾರಿ ಇಲಾಖೆಗೆ, ಚಾರ್ಜಿಂಗ್ ಮೂಲಕ ಬಳಕೆಯಾಗುವ ಪ್ರತಿ ಕಿಲೋವ್ಯಾಟ್‌ (ಕೆಡಬ್ಲ್ಯೂಹೆಚ್) ಗಂಟೆಗೆ ರೂ.1 ಆದಾಯ ಹಂಚಿಕೆಯಾಗಲಿದೆ. ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಹಾಗೂ ಕಾರ್ಯಾಚರಣೆಗಾಗಿ ಬೆಸ್ಕಾಂ - ಸಂಬಂಧಿತ ಇಲಾಖೆಯ ನಡುವೆ 10 ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲಾಗುವುದು. ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ಬೆಸ್ಕಾಂನದ್ದಾಗಿರುತ್ತದೆ' ಎಂದು ಗೌರವ್ ಗುಪ್ತ ಅವರು ತಿಳಿಸಿದರು.

'ರಾಜ್ಯಾದ್ಯಂತ ವರ್ಗ-ಎ (ರಾಜ್ಯ & ಕೇಂದ್ರ ಸರ್ಕಾರಕ್ಕೆ ಸೇರಿದ ಸ್ಥಳ ಉದಾ: ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲೆ ಕಾಲೇಜು ಆವರಣ) ಹಾಗೂ ವರ್ಗ-ಬಿ (ಸರ್ಕಾರಿ ಸ್ವಾಮ್ಯದ ಅಥವಾ ಸರ್ಕಾರದಿಂದ ನಿರ್ವಹಿಸಲಾಗುವ ಸಾರ್ವಜನಿಕ ಸ್ಥಳಗಳು ಉದಾ: ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮೆಟ್ರೋ/ಬಸ್‌ ನಿಲ್ದಾಣ ಇತ್ಯಾದಿ) ಗಳಲ್ಲಿ ಒಟ್ಟು 1,250 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಇದರಲ್ಲಿ 33 ಸರ್ಕಾರಿ ಇಲಾಖೆಗಳ ವ್ಯಾಪ್ತಿಯ ಸ್ಥಳಗಳು ಸೇರಿವೆ. ಈ ಪೈಕಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ಸಮೀಕ್ಷೆ ನಡೆಸಿದ 687 ಸ್ಥಳಗಳ ಪೈಕಿ 515 ಸ್ಥಳಗಳಿಗೆ ಮೊದಲ ಹಂತದಲ್ಲಿ ಅನುಮೋದನೆ ದೊರೆತಿದೆ' ಎಂದು ಅವರು ಹೇಳಿದರು.

'ಪಿಎಂ ಇ-ಡ್ರೈವ್ ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂ, ರಾಜ್ಯಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳ ಅನುಮೋದನೆ, ಮೇಲ್ವಿಚಾರಣೆ ಹಾಗೂ ಸಬ್ಸಿಡಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಮಗ್ರ ಡಿಜಿಟಲ್ ವೇದಿಕೆ ಮತ್ತು ಅನುಷ್ಠಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಚಾರ್ಜಿಂಗ್ ಕೇಂದ್ರಗಳನ್ನು ಇವಿ ಮಿತ್ರ ವೇದಿಕೆಗೆ ಸೇರ್ಪಡೆಗೊಳಿಸಲಾಗುವುದು. ಇದರಿಂದ ಸಾರ್ವಜನಿಕರು ಚಾರ್ಜಿಂಗ್ ಕೇಂದ್ರಗಳನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ' ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ತಿಳಿಸಿದರು.

ಸಭೆಯಲ್ಲಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ ಹಾಗೂ ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಪ್ರಭು ಇತರರು ಇದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.