ಪಾದಯಾತ್ರೆ ವಿಷಯದಲ್ಲಿ ಗೊಂದಲ ಇಲ್ಲ: ಬಿ.ವೈ.ವಿಜಯೇಂದ್ರ
B.Y. Vijayendra: ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಬಿ.ವೈ.ವಿಜಯೇಂದ್ರ ಅವರು ಮಾತನಾಡಿದರು.
ಬೆಂಗಳೂರು: ಪಾದಯಾತ್ರೆ ಸಂಬಂಧ ನಾನೇ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ವಿಪಕ್ಷ ನಾಯಕ ಆರ್.ಅಶೋಕ್ ಅವರು ಇದ್ದಾಗ ಒಟ್ಟಾಗಿ ಮಾತನಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದು, ಮತ್ಯಾಕೆ ಪಾದಯಾತ್ರೆ ಎಂದು ನಮ್ಮ ಹಲವು ಮುಖಂಡರು ಸೇರಿ, ಕೆಲವರಲ್ಲಿ ಗೊಂದಲವಿತ್ತು. ನಾನು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ಅವರ ಅನುಮತಿಯನ್ನು ಪಡೆದುಕೊಂಡಿದ್ದೇನೆ ಎಂದರು.
ಹತ್ತು ಹಲವು ವಿಷಯಗಳೊಂದಿಗೆ ಪಾದಯಾತ್ರೆ:
ನಮ್ಮ ಪಾದಯಾತ್ರೆಗೆ ನಾಗೇಂದ್ರರ ರಾಜೀನಾಮೆ, ಹಲವು ವಿಷಯಗಳಲ್ಲಿ ಒಂದಾಗಿದೆ. 8-10 ವಿಷಯಗಳೊಂದಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಗೊಂದಲಕ್ಕೆ ಅವಕಾಶವೇ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮತ್ತೆ ಮಾತನಾಡುವೆ. ಅವರಲ್ಲಿ ತಪ್ಪು ಕಲ್ಪನೆ ಆಗಿರಬಹುದು. ನಾನಾ ವಿಚಾರ ಇಟ್ಟುಕೊಂಡು ಪಾದಯಾತ್ರೆ ನಡೆಯಲಿದೆ ಎಂದು ಹೇಳಿದರು.
ಈಗ ತನಿಖೆಗೆ ಹಾಜರಾಗಿದ್ದಾರೆ:
ಕೆಪಿಎಸ್‌ಸಿಯ ಐಎಎಸ್ ಅಧಿಕಾರಿ ಬಂಧನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಒಂದು ವಾರದ ಹಿಂದೆ ಉತ್ತರ ಪ್ರದೇಶದ ಅವರ ಗ್ರಾಮಕ್ಕೆ ತೆರಳಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಅಲ್ಲಿಗೆ ಪೊಲೀಸರು ತೆರಳಿದ್ದು, ಅಲ್ಲಿಯೂ ಇರಲಿಲ್ಲ. ಈಗ ತನಿಖೆಗೆ ಹಾಜರಾಗಿದ್ದಾರೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಕ್ಕೆ ಬರಲಿ. ಯಾರೇ ದೊಡ್ಡ ವ್ಯಕ್ತಿಗಳಿದ್ದರೂ ಸತ್ಯ ಬಹಿರಂಗ ಆಗಬೇಕು ಎಂದು ತಿಳಿಸಿದರು.
ರಾಜಣ್ಣ ರಾಜೀನಾಮೆ ಪಡೆದಾಗ ದಲಿತರೆಂದು ಅನಿಸಲಿಲ್ಲವೇ?
ದಲಿತರನ್ನು ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಮಾತನಾಡುತ್ತಿದ್ದರು. ಮಾನ್ಯ ಮುಖ್ಯಮಂತ್ರಿಗಳೇ, ಈ ಹಿಂದೆ ಕೆ.ಎನ್.ರಾಜಣ್ಣ ರಾಹುಲ್ ಗಾಂಧಿಯವರ ಮತಗಳ್ಳತನ ಸಂಬಂಧ ಪ್ರಶ್ನೆ ಎತ್ತಿದ್ದಕ್ಕಾಗಿ 24 ಗಂಟೆಯೊಳಗೆ ಅವರ ರಾಜೀನಾಮೆ ಪಡೆದಿರಲ್ಲವೇ? ಅವತ್ತು ರಾಜಣ್ಣ ಅವರು ದಲಿತರು, ಪರಿಶಿಷ್ಟ ಪಂಗಡದವರೆಂದು ಕಾಂಗ್ರೆಸ್ಸಿನವರಿಗೆ ಅನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ದಲಿತರ ಹಣ ಕೊಳ್ಳೆ ಹೊಡೆಯುವಾಗ ಡಿ.ಕೆ.ಶಿವಕುಮಾರರಿಗೆ ಏನೂ ಅನಿಸಲಿಲ್ಲವೇ? ಎಸ್‍ಇಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಾಗ, ಆ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಅನಿಸಲಿಲ್ಲವೇ ಎಂದು ಕೇಳಿದರು.
ಆಗ ನಿಮಗೆ ದಲಿತರ ಕಾಳಜಿ ನೆನಪಾಗಲಿಲ್ಲವೇ?
ಈ ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದರು. ನಿಮ್ಮ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಅದಕ್ಕೂ ಮಣ್ಣು ಹಾಕುವ ಕೆಲಸ ಮಾಡಿದ್ದೀರಲ್ಲವೇ? ಅವತ್ತು ನಿಮಗೆ ದಲಿತರ ಕಾಳಜಿ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು. ಸತ್ಯ ಏನೆಂದು ರಾಜ್ಯದ ಜನರಿಗೆ ಗೊತ್ತಿದೆ. ಶೋಷಿತ- ಪೀಡಿತ ಸಮುದಾಯಗಳಿಗೂ ಗೊತ್ತಿದೆ. ಸೆ.1 ರಿಂದ ನಮ್ಮ ಪಾದಯಾತ್ರೆ ಲಿಂಗಸುಗೂರಿನಿಂದ ಪ್ರಾರಂಭವಾಗಲಿದೆ ಎಂದು ಹೇಳಿದರು.