ಅಂಬಿಕಾ ವಸತಿ ಪಿಯು ಕಾಲೇಜು: 'ಸ್ಮಾರ್ಟ್ ಸ್ಟಡಿ' ಕುರಿತು ವಿಶೇಷ ಉಪನ್ಯಾಸ
Ambika Residential PU College: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿ ಪದವಿ-ಪೂರ್ವ ಕಾಲೇಜಿನಲ್ಲಿ 'ಸ್ಮಾರ್ಟ್ ಡಿ' ವಿಚಾರದ ಕುರಿತು ಡಾ.ರಾಜೇಶ್ ವಿಶೇಷ ಉಪನ್ಯಾಸ ನೀಡಿದರು.
ಪುತ್ತೂರು: ಪ್ರತಿದಿನದ ಅಭ್ಯಾಸ, ಕಲಿತ ವಿಷಯಗಳ ಮರುಪಠಣ ಹಾಗೂ ಪುನರಾವರ್ತಿತ ಅಧ್ಯಯನವು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಯ ಭಯವನ್ನು ಕಡಿಮೆ ಮಾಡುತ್ತದೆ ಎಂದು ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಜೇಶ್ ಹೇಳಿದರು.
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿ ಪದವಿ-ಪೂರ್ವ ಕಾಲೇಜಿನಲ್ಲಿ 'ಮಾನಸಿಕ ಒತ್ತಡವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಗುಟ್ಟು: ಸ್ಮಾರ್ಟ್ ಸ್ಟಡಿ' ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಡಿಮೆ ಅಥವಾ ಅತಿಯಾದ ಒತ್ತಡ ಎರಡು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಸಾಕಷ್ಟು ನಿದ್ರೆ, ವಿಷಯದ ಮೇಲೆ ಹಿಡಿತ, ನಿಯಮಿತ ಅಧ್ಯಯನ ಕ್ರಮ, ವ್ಯಾಯಾಮ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದಿರುವುದು ಹಾಗೂ ಅಗತ್ಯವಿದ್ದಾಗ ಶಿಕ್ಷಕರ ಸಹಾಯ ಪಡೆಯುವುದು ಮುಖ್ಯ. ಇಂತಹ ವ್ಯವಸ್ಥಿತ ಅಧ್ಯಯನದಿಂದ ಮಾನಸಿಕ ಒತ್ತಡವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಲು ಕಣ್ಣಿಗೆ ಕಾಣುವುದೆಲ್ಲವನ್ನೂ ಓದುವುದಕ್ಕಿಂತ, ಪರೀಕ್ಷೆಗೆ ಅಗತ್ಯವಿರುವ ವಿಷಯಗಳನ್ನು ಗುರುತಿಸಿ, ಮುಖ್ಯ & ಅತಿಮುಖ್ಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿ, ಆಳವಾದ ಮತ್ತು ನಿರ್ದಿಷ್ಟ ಅಧ್ಯಯನ ಮಾಡುವುದು ಅಗತ್ಯ. ಪರೀಕ್ಷೆಗೆ ಉಳಿದಿರುವ ಸಮಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಅಧ್ಯಯನದ ಯೋಜನೆ ರೂಪಿಸುವುದು ಮುಖ್ಯ. ಎಲ್ಲವನ್ನು ಓದುವುದಕ್ಕಿಂತ ಅಗತ್ಯವಿರುವುದನ್ನು ಪರಿಣಾಮಕಾರಿಯಾಗಿ ಓದುವುದೇ ಸ್ಮಾರ್ಟ್ ಸ್ಟಡಿಯ ಉದ್ದೇಶ. ನಿದ್ದೆ ಕಳೆದುಕೊಂಡು ಓದಿದಲ್ಲಿ, ಅತಿ ಕಡಿಮೆ ನಿದ್ರೆ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುವುದರೊಂದಿಗೆ ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದರು.
ಜೀವನಶೈಲಿ, ಶೈಕ್ಷಣಿಕ ಒತ್ತಡ, ವೈಯಕ್ತಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಯುವಜನರಲ್ಲಿ ವಿವಿಧ ರೀತಿಯ ಮಾನಸಿಕ ಹಾಗೂ ವರ್ತನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ತೊಂದರೆಗಳನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ನೆರವು ಪಡೆಯುವುದು ಅಗತ್ಯ ಎಂದು ತಿಳಿಸಿದರು.
ಮಾನಸಿಕ ಸಮಸ್ಯೆಗಳು ದೌರ್ಬಲ್ಯದ ಸಂಕೇತವಲ್ಲ. ಇತರ ಆರೋಗ್ಯ ಸಮಸ್ಯೆಗಳಂತೆ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತಚಿಕಿತ್ಸೆ ಮತ್ತು ಸಮಾಲೋಚನೆಯ ಮೂಲಕಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್, ಉಪ ಪ್ರಾಂಶುಪಾಲ ಪ್ರದೀಪ್ ಕೆ.ವೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಾಯನಾ ನಿರೂಪಿಸಿ, ವಂದಿಸಿದರು.