ದಕ್ಷಿಣ ಕನ್ನಡದ ಮಡಿಯಾಲದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಹೊಸ ಕ್ಯಾಂಪಸ್: ಸದ್ಗುರು ಶ್ರೀ ಮಧುಸೂದನ ಸಾಯಿ

ಮಡಿಯಾಲ ನಾರಾಯಣ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನವೆಂಬರ್‌ನಲ್ಲಿ ನೂತನ ಕ್ಯಾಂಪಸ್ ಉದ್ಘಾಟನೆಯಾಗಲಿದ್ದು, ಎಐ ಹಾಗೂ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಈ ಕ್ಯಾಂಪಸ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಸದ್ಗುರುಗಳು ತಿಳಿಸಿದ್ದಾರೆ.

Jul 27, 2026 - 18:26
Jul 27, 2026 - 18:32
ದಕ್ಷಿಣ ಕನ್ನಡದ ಮಡಿಯಾಲದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಹೊಸ ಕ್ಯಾಂಪಸ್: ಸದ್ಗುರು ಶ್ರೀ ಮಧುಸೂದನ ಸಾಯಿ

ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ): ಮುದ್ದೇನಹಳ್ಳಿಯ ಶಿಕ್ಷಣ ಕ್ರಾಂತಿಯ ರೂವಾರಿ ಮಡಿಯಾಲ ನಾರಾಯಣ ಭಟ್ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಮಡಿಯಾಲದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಆರಂಭಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

 ಮಡಿಯಾಲ ನಾರಾಯಣ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನವೆಂಬರ್‌ನಲ್ಲಿ ನೂತನ ಕ್ಯಾಂಪಸ್ ಉದ್ಘಾಟನೆಯಾಗಲಿದ್ದು, ಎಐ ಹಾಗೂ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಈ ಕ್ಯಾಂಪಸ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಸದ್ಗುರುಗಳು ತಿಳಿಸಿದ್ದಾರೆ.

ತಂತ್ರಜ್ಞಾನ ಮಾನವ ಸಾಮರ್ಥ್ಯ ವಿಸ್ತರಿಸಲಿ

ತಂತ್ರಜ್ಞಾನವು ಮನುಷ್ಯನ ಸ್ಥಾನವನ್ನು ಕಸಿದುಕೊಳ್ಳುವ ಸಾಧನವಾಗದೆ, ಮಾನವನ ಸಾಮರ್ಥ್ಯವನ್ನು ವಿಸ್ತರಿಸುವ ಶಕ್ತಿಯಾಗಬೇಕು. ಮನುಷ್ಯನಿಗೆ ತನ್ನ ಕಾಲಿನ ಮೇಲೆ ನಿಂತುಕೊಳ್ಳುವ ಶಕ್ತಿ ನೀಡಬಲ್ಲ ಕೌಶಲವನ್ನು ಕಲಿಸಿಕೊಡುವುದೇ ಇನ್ನೊಬ್ಬರಿಗೆ ಮಾಡುವ ದೊಡ್ಡ ಸಹಾಯ ಎಂದರು.

 ಗ್ರಾಮೀಣ ಪ್ರತಿಭೆಗೆ ಅವಕಾಶದ ಕೊರತೆ ಎದುರಾಗಬಾರದು. ಉತ್ತಮ ಶಿಕ್ಷಣ, ತರಬೇತಿ ಹಾಗೂ ತಂತ್ರಜ್ಞಾನವನ್ನು ಗ್ರಾಮೀಣ ಯುವಕರಿಗೆ ತಲುಪಿಸಿದರೆ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ ಸಾಧನೆ ಮಾಡಬಲ್ಲರು. ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾದರೆ ನಗರಗಳಿಗೆ ಅನಿವಾರ್ಯ ವಲಸೆ ತಪ್ಪಿಸಬಹುದು ಎಂದು ಹೇಳಿದರು.

 ಸರ್ ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರಾದ ಮುದ್ದೇನಹಳ್ಳಿ ಇಂದು ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಹಾಗೂ ಸೇವಾ ಚಟುವಟಿಕೆಗಳ ಕೇಂದ್ರವಾಗಿ ಬೆಳೆದಿದೆ. ಗ್ರಾಮೀಣ ಅಭಿವೃದ್ಧಿಗೆ ಇದು ಮಾದರಿಯಾಗಿದ್ದು, ಗ್ರಾಮಗಳ ಪ್ರಗತಿಗಾಗಿ ಸರ್ಕಾರ, ಸಮಾಜ ಹಾಗೂ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬೇಕು ಎಂದು ಸದ್ಗುರು ಹೇಳಿದರು.

  ಮುದ್ದೇನಹಳ್ಳಿಯಲ್ಲಿ 'ರೈಸ್' ಎಐ ಕೌಶಲ ಮತ್ತು ಅನುಭವ ಕೇಂದ್ರಕ್ಕೆ ಚಾಲನೆ

 ಕೃತಕ ಬುದ್ಧಿಮತ್ತೆಯ(ಎಐ) ಕ್ರಾಂತಿಯ ಪ್ರಯೋಜನ ನಗರಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾರತದ ಯುವಜನರಿಗೂ ತಲುಪಬೇಕು ಎಂಬ ಆಶಯದೊಂದಿಗೆ ಇಲ್ಲಿನ ಸತ್ಯ ಸಾಯಿ ಗ್ರಾಮದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಗ್ರಾಮೀಣ ಕೃತಕ ಬುದ್ಧಿಮತ್ತೆ ಕೌಶಲ ಮತ್ತು ಅನುಭವ ಕೇಂದ್ರ (ರೈಸ್) ಸೋಮವಾರ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

 ರೂರಲ್ ಶೋರ್ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಈ ಕೇಂದ್ರವನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉದ್ಘಾಟಿಸಿದರು. 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮವು ಗ್ರಾಮೀಣ ಯುವಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಕೌಶಲಗಳನ್ನು ಅವರಿರುವಲ್ಲಿಯೇ ಒದಗಿಸುವ ಹೊಸ ಹೆಜ್ಜೆಗೆ ಸಾಕ್ಷಿಯಾಯಿತು.

 ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, "ತಂತ್ರಜ್ಞಾನವು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿ ಅವರ ಬದುಕನ್ನು ಉತ್ತಮಪಡಿಸಿದಾಗ ಮಾತ್ರ ಅದರ ನಿಜವಾದ ಉದ್ದೇಶ ಸಾಕಾರವಾಗುತ್ತದೆ. ಗ್ರಾಮೀಣ ಯುವಕರಿಗೆ ಎಐ ಕೌಶಲ ಕಲಿಸುವುದರ ಜತೆಗೆ ಅದನ್ನು ಸಮಾಜದ ಒಳಿತಿಗಾಗಿ ಬಳಸುವ ಮನೋಭಾವವನ್ನೂ ಬೆಳೆಸಬೇಕು" ಎಂದರು.

 ಶಿಕ್ಷಣ, ಕೌಶಲ ಹಾಗೂ ಉದ್ಯೋಗಾವಕಾಶಗಳನ್ನು ಗ್ರಾಮಗಳ ಬಾಗಿಲಿಗೆ ಕೊಂಡೊಯ್ಯುವ ಇಂತಹ ಪ್ರಯತ್ನಗಳು ಗ್ರಾಮೀಣ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿವೆ. ರೂರಲ್ ಶೋರ್ ಸಂಸ್ಥೆಯು ಕಳೆದ 18 ವರ್ಷಗಳಿಂದ ಗ್ರಾಮೀಣ ಯುವಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಅವರು ಇದ್ದಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

 "ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಅದಕ್ಕೆ ಕರುಣೆ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳ ಸ್ಪರ್ಶವಿರಬೇಕು. ಅದು ಮಾನವನ ಬುದ್ಧಿವಂತಿಕೆ ಮತ್ತು ಮಾನವೀಯ ಗುಣಗಳನ್ನು ಇನ್ನಷ್ಟು ವೃದ್ಧಿಸುವಂತಿರಬೇಕು. ಸತ್ಯ ಸಾಯಿ ಗ್ರಾಮದಂತಹ ಸೇವಾ ಮನೋಭಾವದ ವಾತಾವರಣದಲ್ಲಿ ಈ ಕೇಂದ್ರ ಆರಂಭವಾಗಿರುವುದು ಅತ್ಯಂತ ಸೂಕ್ತ" ಎಂದು ಅಭಿಪ್ರಾಯಪಟ್ಟರು.

 ರೂರಲ್ ಶೋರ್ ಸಂಸ್ಥೆಯ ನಿರ್ದೇಶಕ ಸಿ.ಜಿ. ಶ್ರೀನಿವಾಸನ್, ಕಾರ್ಯಾಧ್ಯಕ್ಷ ಮುರಳಿ ಉಳಗಂಟಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭು ಜಿ., ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹ ಮೂರ್ತಿ ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀಕಂಠಮೂರ್ತಿ ಉಪಸ್ಥಿತರಿದ್ದರು.

 ಏನಿದು 'ರೈಸ್' ಕೇಂದ್ರ?

 ಗ್ರಾಮೀಣ ಯುವಕರನ್ನು ಎಐ ಆಧಾರಿತ ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುವ ಕೌಶಲ ಮತ್ತು ಅನುಭವ ಕೇಂದ್ರವೇ 'ರೈಸ್'. ರೂರಲ್ ಶೋರ್ ಹಾಗೂ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸ್ಥಾಪನೆಯಾಗಿರುವ ಈ ಕೇಂದ್ರದಲ್ಲಿ ಯುವಕರಿಗೆ ಜನರೇಟಿವ್ ಎಐ ಕೌಶಲ, ಪ್ರಾಯೋಗಿಕ ಯೋಜನೆಗಳಲ್ಲಿ ಕೆಲಸ ಮಾಡುವ ಅನುಭವ ಹಾಗೂ ಉದ್ಯಮ ವಲಯದ ಪರಿಚಯ ಒದಗಿಸಲಾಗುತ್ತದೆ.

 ಗ್ರಾಮೀಣ ಪ್ರತಿಭೆಯನ್ನು ಜಾಗತಿಕ ಡಿಜಿಟಲ್ ಆರ್ಥಿಕತೆಯೊಂದಿಗೆ ಜೋಡಿಸುವುದು ಹಾಗೂ ಉದ್ಯೋಗಕ್ಕಾಗಿ ಯುವಕರು ನಗರಗಳಿಗೆ ವಲಸೆ ಹೋಗುವ ಬದಲು ಉದ್ಯೋಗಾವಕಾಶಗಳನ್ನೇ ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ರೂರಲ್ ಶೋರ್‌ನ ಮೂಲ ಪರಿಕಲ್ಪನೆ.

 2009ರಲ್ಲಿ ಬಾಗೇಪಲ್ಲಿಯಲ್ಲಿ ಆರಂಭವಾದ ರೂರಲ್ ಶೋರ್ ಈಗ ಗ್ರಾಮೀಣ ಪ್ರದೇಶಗಳಲ್ಲಿ 15 ಕೇಂದ್ರಗಳನ್ನು ಹೊಂದಿದ್ದು, ಕಾರ್ಪೊರೇಟ್ ಕಂಪನಿಗಳಿಗೆ ತಾಂತ್ರಿಕ ಸೇವೆ ಒದಗಿಸುತ್ತಿದೆ. ಈವರೆಗೆ 27 ಸಾವಿರಕ್ಕೂ ಹೆಚ್ಚು ಯುವಜನರು ಇದರ ಮೂಲಕ ತಮ್ಮ ವೃತ್ತಿಜೀವನ ರೂಪಿಸಿಕೊಂಡಿದ್ದಾರೆ.