ಮಂಗಳೂರಿನಲ್ಲಿ ಸೆ.18 ರಂದು ಕ್ಯಾಬಿನೆಟ್ ಸಭೆ: ತುಳುವಿಗೆ ರಾಜ್ಯಭಾಷೆ ಸ್ಥಾನಮಾನ ನೀಡಲು ಹಕ್ಕೊತ್ತಾಯ

Tulu Language: ಸೆ.18 ರಂದು ಮಂಗಳೂರಿನಲ್ಲಿ ಸಚಿವ ಸಚಿವ ಸಂಪುಟ ಸಭೆಗೆ ಮುಹೂರ್ತ ನಿಗದಿಯಾಗಿದ್ದು, ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಹಕ್ಕೊತ್ತಾಯ ಕೇಳಿಬಂದಿದೆ.

Sep 9, 2026 - 12:06
Sep 9, 2026 - 12:12
ಮಂಗಳೂರಿನಲ್ಲಿ ಸೆ.18 ರಂದು ಕ್ಯಾಬಿನೆಟ್ ಸಭೆ: ತುಳುವಿಗೆ ರಾಜ್ಯಭಾಷೆ ಸ್ಥಾನಮಾನ ನೀಡಲು ಹಕ್ಕೊತ್ತಾಯ

ಬೆಂಗಳೂರು: ಸೆ.18 ರಂದು ಮಂಗಳೂರಿನಲ್ಲಿ ಸಚಿವ ಸಚಿವ ಸಂಪುಟ ಸಭೆಗೆ ಮುಹೂರ್ತ ನಿಗದಿಯಾಗಿದ್ದು, ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ಹಕ್ಕೊತ್ತಾಯ ಕೇಳಿಬಂದಿದೆ. 

ತುಳು ಭಾಷಿಕರು ಸಹ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕವಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೂ ತುಳು ಸಂಘಟನೆಗಳು & ತುಳು ಪರ ಹೋರಾಟಗಾರರು ಮನವಿ ಮಾಡಿದ್ದಾರೆ.

ತೌಳವ ಸಂಗಮ ಸಂಘಟನೆಯು ತುಳು ಭಾಷೆಯನ್ನು ರಾಜ್ಯ ಭಾಷೆಯಾಗಿ ಪರಿಗಣಿಸುವುದಕ್ಕೆ ಮಂಗಳೂರಿನಲ್ಲಿ ಸೆ.18 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದೆ.

ಕರ್ನಾಟಕದ ಪ್ರಾಚೀನ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆ ಸ್ಥಾನಮಾನ ನೀಡಬೇಕು ಎಂದು ಎಲ್ಲ ತುಳುವರ ಪರವಾಗಿ ಮನವಿ ಮಾಡಲಾಗಿದೆ. 

ತುಳು ಭಾಷೆ ತನ್ನದೇ ಆದ ವಿಶಿಷ್ಟ ಭಾಷಾ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ, ಜಾನಪದ ಮತ್ತು ಸ್ವತಂತ್ರ ಲಿಪಿಯ ಶ್ರೀಮಂತಿಕೆಯನ್ನು ಹೊಂದಿದೆ. ದೇಶ-ವಿದೇಶಗಳಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯ ಕುರಿತು ಸಂಶೋಧನೆಗಳು ನಡೆಯುತ್ತಿದೆ. ಭಾಷಾ ಅಧ್ಯಯನ ಮತ್ತು ಡಿಜಿಟಲ್ ಕ್ಷೇತ್ರದಲ್ಲಿಯೂ ತುಳು ತನ್ನದೇ ಆದ ಸ್ಥಾನ ಪಡೆದಿದೆ ಎಂದು ಹೇಳಿದೆ.

ಕರ್ನಾಟಕದ ಏಕೀಕರಣ, ಸ್ವಾತಂತ್ರ್ಯ ಹೋರಾಟ ಸೇರಿದಂತೆ ಸಾಹಿತ್ಯ, ಸಿನಿಮಾ, ನಾಟಕ, ಯಕ್ಷಗಾನ, ಕಲೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ, ಕೃಷಿ, ಉದ್ಯಮ, ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳಿಗೆ ತುಳುವರು ಮಹತ್ವದ ಕೊಡುಗೆ ನೀಡಿದ್ದಾರೆ. ಆದರೂ ತುಳು ಭಾಷೆಗೆ ಸೂಕ್ತವಾದ ರಾಜಕೀಯ ಹಾಗೂ ಭಾಷಾ ಸ್ಥಾನಮಾನ ದೊರಕದಿರುವುದು ದೀರ್ಘಕಾಲದ ನೋವಾಗಿದೆ ಎಂದು ತೌಳವ ಸಂಗಮ ಸಂಘವು ವಿಷಾದ ವ್ಯಕ್ತಪಡಿಸಿದೆ.

ಕರ್ನಾಟಕ ಸರ್ಕಾರ ರಚಿಸಿರುವ ಅಧ್ಯಯನ ತಂಡದ ಶಿಫಾರಸುಗಳನ್ನು ಶೀಘ್ರ ಪರಿಗಣಿಸಿ, ತುಳು ಸಾಹಿತ್ಯ ಅಕಾಡೆಮಿಗೆ 'ತುಳು ಭಾಷಾ ಅಭಿವೃದ್ಧಿ ಪ್ರಾಧಿಕಾರ' ಸ್ಥಾನಮಾನ ನೀಡಬೇಕು. ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡುವುದರೊಂದಿಗೆ, ಭಾಷೆಯ ಅಭಿವೃದ್ಧಿ, ಸಂಶೋಧನೆ, ಶಿಕ್ಷಣ, ಲಿಪಿ, ಸಾಹಿತ್ಯ ಹಾಗೂ ಡಿಜಿಟಲೀಕರಣಕ್ಕಾಗಿ ವಾರ್ಷಿಕ ಕನಿಷ್ಠ ರೂ.5 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಲಾಗಿದೆ.

ಸೆ.18 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ಕುರಿತು ನಿರ್ಣಯ ಕೈಗೊಳ್ಳಬೇಕು. ಈ ಮಾನ್ಯತೆಯು ಮುಂದಿನ ದಿನಗಳಲ್ಲಿ 'ತುಳು'ವನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವ ಪ್ರಕ್ರಿಯೆಗೂ ಮತ್ತಷ್ಟು ಬಲ ನೀಡಲಿದೆ ಎಂದು ತೌಳವ ಸಂಗಮದ ಅಧ್ಯಕ್ಷ ರಾಜಾರಾಮ ಶೆಟ್ಟಿ ಉಪ್ಪಳ ಹಾಗೂ ಅದರ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.