ತುಳುವಿಗೆ 2ನೇ ಅಧಿಕೃತ ಭಾಷೆ: ಸೆ.18ರ ಸಂಪುಟ ಸಭೆಯಲ್ಲೇ ಘೋಷಣೆಯಾಗಲಿ.. ಸುನಿಲ್ ಕುಮಾರ್ ಒತ್ತಾಯ
Tulu Language: ಸೆ.18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ: ಸೆ.18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ಕೇವಲ ಔಪಚಾರಿಕತೆಗೆ ಸೀಮಿತವಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ (Sunil Kumar) ಒತ್ತಾಯಿಸಿದ್ದಾರೆ.
ತುಳು ಕೇವಲ ಒಂದು ಭಾಷೆಯಲ್ಲ. ಅದು ಕರಾವಳಿಯ ಆಚಾರ, ವಿಚಾರ, ದೈವಾರಾಧನೆ ಹಾಗೂ ಸಂಸ್ಕೃತಿಯ ಜೀವಾಳ. ತುಳುವಿನ ಅಸ್ಮಿತೆಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಹತ್ವದ ಹೆಜ್ಜೆ ಇರಿಸಿತ್ತು ಎಂದು ಅವರು ಸ್ಮರಿಸಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಸಾಧ್ಯಾ-ಸಾಧ್ಯತೆಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಸಮಗ್ರವಾಗಿ ಅಧ್ಯಯನ ನಡೆಸಿ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕಾನೂನಾತ್ಮಕವಾಗಿ ಮತ್ತು ಸಾಂವಿಧಾನಿಕವಾಗಿ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.
ನಮ್ಮ ಸರ್ಕಾರ ಈ ವರದಿ ಆಧರಿಸಿ, ಅಧಿಕೃತ ಘೋಷಣೆ ಮಾಡುವ ಹಂತದಲ್ಲಿದ್ದಾಗಲೇ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಯಿತು. ಹಾಗಾಗಿ, ಆ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎಂದರು.
ಪ್ರಸ್ತುತ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತಾತ್ಮಕವಾಗಿ ಎಲ್ಲಾ ಸಿದ್ಧತೆಗಳು ಈಗಾಗಲೇ ಮುಗಿದಿದೆ. ಚೆಂಡು ಈಗ ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಆದ್ದರಿಂದ ಸೆ.18 ರಂದು ಮಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಸಂಪುಟ ಸಭೆಯಲ್ಲಿ ಮೋಹನ್ ಆಳ್ವ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದು ಕೇವಲ ಭಾಷೆಯ ಪ್ರಶ್ನೆಯಲ್ಲ, ತುಳುನಾಡಿನ ಸ್ವಾಭಿಮಾನದ ಪ್ರಶ್ನೆ. ಕರಾವಳಿ ಜನರ ಭಾವನೆಗೆ ಸರ್ಕಾರ ಸ್ಪಂದಿಸಬೇಕು. ಸಭೆ ನಡೆಸುವ ಜಾಗದ ಮಹತ್ವವನ್ನು ಅರಿತು, ತುಳು ನಾಡಿನ ಜನತೆ ಕಾತರದಿಂದ ಕಾಯುತ್ತಿರುವ ಈ ಮಹತ್ವದ ಘೋಷಣೆಯನ್ನು ಮಾಡುವ ಮೂಲಕ ಈ ಸಂಪುಟ ಸಭೆಯನ್ನು ಸಾರ್ಥಕಗೊಳಿಸಬೇಕು ಎಂದು ಹೇಳಿದ್ದಾರೆ.