Kia Syros EV: ಹೊಸ ಕಿಯಾ ಸೈರಸ್ ಇವಿ ಬಿಡುಗಡೆ.. 526 Km ರೇಂಜ್, ಬೆಲೆ ಎಷ್ಟು?
Kia Syros EV: ಹೊಚ್ಚ ಹೊಸ 'ಕಿಯಾ ಸೈರಸ್ ಇವಿ' ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ದೇಶೀಯ ಗ್ರಾಹಕರ ಕಾಯುವಿಕೆಗೆ ಕಡೆಗೂ ತೆರೆ ಬಿದ್ದಿದೆ. ಹೊಚ್ಚ ಹೊಸ ಕಿಯಾ ಸೈರಸ್ ಇವಿ (Kia Syros EV) ಇಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ರೂ.13.50 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಎಕ್ಸ್-ಲೈನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ.
ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಬಹುತೇಕ ಪೆಟ್ರೋಲ್ ಚಾಲಿತ ಮಾಡೆಲ್‌ಗೆ ಹೋಲಿಕೆಯಾಗುತ್ತದೆ. ಬಾಕ್ಸಿ ಸ್ಟೈಲ್‌ನಲ್ಲಿ ಇದ್ದು, ನವೀನವಾದ ಬಂಪರ್ ಹಾಗೂ ಗ್ರಿಲ್‌ನ್ನು ಒಳಗೊಂಡಿದೆ. 3-ಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು 17-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ.
ನೂತನ 'ಕಿಯಾ ಸೈರಸ್ ಇವಿ' ಐವರಿ ಸಿಲ್ವರ್ ಮ್ಯಾಟ್, ಫ್ರಾಸ್ಟ್ ಬ್ಲೂ, ಗ್ರಾವಿಟಿ ಗ್ರೇ, ಪ್ಯೂಟರ್ ಆಲಿವ್, ಮ್ಯಾಗ್ಮಾ ರೆಡ್, ಐವರಿ ಸಿಲ್ವರ್ ಗ್ಲೋಸ್, ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ ಹಾಗೂ ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್ ಎಂಬ ಬಣ್ಣಗಳೊಂದಿಗೆ ದೊರೆಯುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 465 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಹೊಂದಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 443 ರಿಂದ 526 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.
ಈ ಕಾರಿನ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಟ್ರಿಪಲ್-ಸ್ಕ್ರೀನ್ ಸೆಟಪ್ (12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 5-ಇಂಚಿನ ಟಚ್‌ಸ್ಕ್ರೀನ್ ಕ್ಲೇಮೇಟ್ ಕಂಟ್ರೋಲ್ ಪ್ಯಾನಲ್ & 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ಪುಶ್-ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಕಾಲಮ್-ಮೌಂಟೆಡ್ ಡ್ರೈವ್ ಸೆಲೆಕ್ಟರ್, ಕನೆಕ್ಟೆಡ್ ಕಾರ್ ಟೆಕ್ ಹಾಗೂ 64-ಕಲರ್ ಇಂಟೀರಿಯರ್ ಲೈಟಿಂಗ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ 'ಕಿಯಾ ಸೈರಸ್ ಇವಿ' ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹೆಚ್‌ಹೆಚ್‌ಸಿ (ಹಿಲ್-ಹೋಲ್ಡ್ ಕಂಟ್ರೋಲ್), ಇಪಿಬಿ (ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಪಡೆದಿದೆ.