Maruti Brezza: ಹೊಸ ಮಾರುತಿ ಬ್ರೆಝಾ ಫೇಸ್‌ಲಿಫ್ಟ್ ಬಿಡುಗಡೆ.. 26.90 Km ಮೈಲೇಜ್, 5-ಸ್ಟಾರ್ ಸೇಫ್ಟಿ.. ಬೆಲೆ ಇಷ್ಟೇನಾ?
Maruti Suzuki Brezza Facelift: ಬಹುನಿರೀಕ್ಷಿತ 2026ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಕಾರು ಶುಕ್ರವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ಬಹುನಿರೀಕ್ಷಿತ 2026ರ ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ (Maruti Suzuki Brezza Facelift) ಕಾರು ಶುಕ್ರವಾರ ಅದ್ದೂರಿಯಾಗಿ ಮಾರಾಟಕ್ಕೆ ಬಂದಿದೆ. ಇದೊಂದು ಎಸ್‌ಯುವಿಯಾಗಿದೆ. 'ಅರೆನಾ' ಡೀಲರ್‌ಶಿಪ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ಈ ಕಾರು, ರೂ.7.40 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ದರವನ್ನು ಪಡೆದಿದೆ. ಎಲ್ಎಕ್ಸ್ಐ (LXI), ವಿಎಕ್ಸ್ಐ (VXI), ಝಡ್ಎಕ್ಸ್ಐ (ZXI) ಹಾಗೂ ಝಡ್ಎಕ್ಸ್ಐ ಪ್ಲಸ್ (ZXI Plus) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗುತ್ತದೆ.
ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ನವೀನವಾದ ಗ್ರಿಲ್ ಹಾಗೂ ಬಂಪರ್‌ನ್ನು ಪಡೆದಿದೆ. ಉತ್ತಮ ಗುಣಮಟ್ಟದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ತ್ರೈಅಂಗುಲರ್ ಎಲ್ಇಡಿ ಫಾಗ್ ಲ್ಯಾಂಪ್‌ಗಳು ಮತ್ತು ಸಿಲ್ವರ್ ರೂಫ್ ರೈಲ್ ಗಳನ್ನು ಒಳಗೊಂಡಿದೆ. 16-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ನೂತನ 'ಬ್ರೆಝಾ ಫೇಸ್‌ಲಿಫ್ಟ್' ಪರ್ಲ್ ಆರ್ಕ್ಟಿಕ್ ವೈಟ್, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಹಾಗೂ ಸ್ಪ್ಲೆಂಡಿಡ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಒಳಭಾಗದ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 328 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. ಮೊದಲ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (ಮೈಲ್ಡ್ ಹೈಬ್ರಿಡ್) ಎಂಜಿನ್, 103 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 139 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 20 ರಿಂದ 21.09 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಮತ್ತೊಂದು 1.5- ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ + ಸಿಎನ್‌ಜಿ ಎಂಜಿನ್, 88 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 121.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 26.90 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.
ಇನ್ನೊಂದು ನೂತನ 1-ಲೀಟರ್ ಟರ್ಬೊ ಪೆಟ್ರೋಲ್ (ಮೈಲ್ಡ್ ಹೈಬ್ರಿಡ್) ಎಂಜಿನ್, 110 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 170 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 19.96 ರಿಂದ 20.47 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಹೊಸ 'ಮಾರುತಿ ಬ್ರೆಝಾ ಫೇಸ್‌ಲಿಫ್ಟ್' ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬೃಹದಾಕಾರದ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು 6-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್‌ನ್ನು ಪಡೆದಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಭಾರತ್ ಎನ್‌ಸಿಎಪಿ (Bharat NCAP) 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 32ಕ್ಕೆ 30.41 ಅಂಕಗಳನ್ನು ಪಡೆದಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49ಕ್ಕೆ ಅಂಕಗಳನ್ನು ಗಳಿಸಿದೆ.
ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-1 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಫ್ರಂಟ್ - ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.