ಪುತ್ತೂರು: ಪಡುಮಲೆಯಲ್ಲಿ 3ನೇ ವರ್ಷದ 'ಕೆಸರ್ಡ್ ಒಂದು ದಿನ' ಅದ್ದೂರಿಯಾಗಿ ಆಚರಣೆ

Puttur: ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಆಯೋಜಿಸಿದ್ದ 3ನೇ ವರ್ಷದ 'ಕೆಸರ್ಡ್ ಒಂದು ದಿನ' ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು.

Jul 27, 2026 - 17:05
Jul 27, 2026 - 17:12
ಪುತ್ತೂರು: ಪಡುಮಲೆಯಲ್ಲಿ 3ನೇ ವರ್ಷದ 'ಕೆಸರ್ಡ್ ಒಂದು ದಿನ' ಅದ್ದೂರಿಯಾಗಿ ಆಚರಣೆ

ಪುತ್ತೂರು (ಬಡಗನ್ನೂರು): ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಆಯೋಜಿಸಿದ್ದ 3ನೇ ವರ್ಷದ 'ಕೆಸರ್ಡ್ ಒಂದು ದಿನ' ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕೃಷಿ ಸಂಸ್ಕೃತಿಯ ಪ್ರತೀಕವಾದ ಗದ್ದೆ ಬೇಸಾಯದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇಗುಲದ ಆವರಣದಲ್ಲಿ ಭಾನುವಾರ ಡಾ.ರಮಾ ಕೆ.ಟಿ ಭಂಡಾರಿ ಪೇರಾಲು ವೇದಿಕೆ ಮುಂಭಾಗದ ಗದ್ದೆಯಲ್ಲಿ ಕುಂಬ್ರ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲೀಕ ಮೋಹನ್ ದಾಸ್ ರೈ ಕುಂಬ್ರ ದೀಪ ಬೆಳಗಿಸಿ, ತೆಂಗಿನ ಹಿಂಗಾರ ಹರಳಿಸುವ ಮೂಲಕ ಉದ್ಘಾಟಿಸಿದರು.

ಆ ನಂತರದ ಅವರು ಮಾತನಾಡಿದರು. 'ಹಿಂದಿನ ಕಾಲದಲ್ಲಿ ಹಿರಿಯರಿಗೆ ಗದ್ದೆ ಬೇಸಾಯವೇ ಪ್ರಧಾನ ಜೀವನಾಧಾರವಾಗಿತ್ತು. ಆದರೆ ಕಾಲ ಬದಲಾದಂತೆ ಅದು ಕಡಿಮೆಯಾಗುತ್ತಾ ಬಂತು. ಈಗ ಕೆಲವೇ ಭಾಗಗಳಲ್ಲಿ ಮಾತ್ರ ಉಳಿದುಕೊಂಡಿದ್ದು, ಇಂದಿನ ಮಕ್ಕಳಿಗೆ ಗದ್ದೆ ಬೇಸಾಯದ ಅರಿವೇ ಇಲ್ಲದಂತಾಗಿದೆ. ಮಣ್ಣಿಗೆ ವಿಶೇಷ ಔಷಧೀಯ ಗುಣವಿದ್ದು, ಚರ್ಮ ರೋಗ ನಿವಾರಣೆಯ ಶಕ್ತಿ ಹೊಂದಿದೆ. ಇಂತಹ ಕೆಸರ್ಡ್ ಒಂದು ದಿನ ಕಾರ್ಯಕ್ರಮವು ನಮ್ಮ ಕೃಷಿ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿದೆ' ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಕಳೆದ 2 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆದು ಬಂದಿರುವ 'ಕೆಸರ್ಡ್ ಕಾರ್ಯಕ್ರಮ' ಮೂರನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯ. ಇದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.

ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಗಂಗಾಧರ ರೈ ಮೇಗಿನಮನೆ, ದೇವಸ್ಥಾನದ ಪ್ರಧಾನ ಅರ್ಚಕ ಬಿ.ಮಹಾಲಿಂಗ ಭಟ್, ಕರ್ನಪ್ಪಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಪ್ರಗತಿಪರ ಕೃಷಿಕ ಕೃಷ್ಣ ರೈ ಕುದ್ದಾಡಿ, ಸಿವಿಲ್ ಎಂಜಿನಿಯರ್ ಕೃಷ್ಣಪ್ರಸಾದ್ ರೈ ಪಡುಮಲೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ರೈ ಮೇಗಿನಮನೆ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಂಕರಿ ನಾರಾಯಣ ಪಟ್ಟೆ, ಪ್ರಗತಿಪರ ಕೃಷಿಕ ಅಜಿತ್ ರೈ ಮುಳಿಪಡ್ಡು, ರಾಧಾಕೃಷ್ಣ ರೈ ಪಟ್ಟೆ, ಉಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಹರಿಪ್ರಸಾದ್ ರೈ ಹಾಗೂ ಉದ್ಯಮಿ ರವಿಪ್ರಸಾದ್ ಕಾವು ಸೇರಿದಂತೆ ಇತರರು ಇದ್ದರು.

ಇದೇ ವೇಳೆ ದೇಗುಲದಲ್ಲಿ 24 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಮಹಾಲಿಂಗ ಭಟ್ ಬಿ, ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಕೆಸರ್ಡ್ ಕಾರ್ಯಕ್ರಮದ ರೂವಾರಿ ಜನಾರ್ದನ ಪೂಜಾರಿ ಪದಡ್ಕ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 602 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯಪದವು ನವೋದಯ ಪ್ರೌಢಶಾಲಾ ವಿದ್ಯಾರ್ಥಿ ತೇಜಸ್ ಕನ್ನಡ್ಕ ಅವರನ್ನು ಪೇಟ, ಶಾಲು, ಹಾರ, ಫಲಪುಷ್ಪ & ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಿತಿ ಉಪಾಧ್ಯಕ್ಷ ಡಾ.ರವೀಶ್ ಪಡುಮಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ರೈ ಪಳ್ಳತ್ತಾರು ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಅತ್ತಾಜೆ ಕ್ರೀಡಾಕೂಟದ ನಿರೂಪಣೆ ಮಾಡಿದರು.