‘ಸೈನಿಕರ ಕೆಚ್ಚೆದೆಯ ಹೋರಾಟದಿಂದ ಪಾಕಿಸ್ತಾನಕ್ಕೆ ಸೋಲು’

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘದ ಪದಗ್ರಹಣ: ಸಶಸ್ತ್ರ ಪಡೆಗಳ ವರ್ಣದ ಸಮವಸ್ತ್ರ ಅನಾವರಣ

Jun 13, 2026 - 17:24
‘ಸೈನಿಕರ ಕೆಚ್ಚೆದೆಯ ಹೋರಾಟದಿಂದ ಪಾಕಿಸ್ತಾನಕ್ಕೆ ಸೋಲು’

ಪುತ್ತೂರು, ಜೂನ್ 13: ಇಲ್ಲಿನ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ನಟ್ಟೋಜ ಫೌಂಡೇಶನ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘದ ಪದಗ್ರಹಣ ಮತ್ತು ಸಶಸ್ತ್ರ ಪಡೆಗಳ ವರ್ಣದ ಸಮವಸ್ತ್ರ ಅನಾವರಣ ಸಮಾರಂಭವು ಶನಿವಾರ ಅತ್ಯಂತ ಸಡಗರದಿಂದ ಜರುಗಿತು. ಸೈನಿಕರ ಕೆಚ್ಚೆದೆಯ ಹೋರಾಟದಿಂದ ಕಾರ್ಗಿಲ್‌ನಲ್ಲಿ ಪಾಕಿಸ್ತಾನಕ್ಕೆ ಸೋಲಾದ ಸಂಗತಿಯನ್ನು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಗಿಲ್ ಯುದ್ಧದ ವೀರಯೋಧ ಹಾಗೂ ಸೇನಾಪದಕ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಬ್ಯಾಡ್ಜ್ ಮತ್ತು ಧ್ವಜವನ್ನು ವಿತರಿಸಿ ಶುಭ ಹಾರೈಸಿದರು. ಇದೇ ವೇಳೆ ಅವರು ಭಾರತೀಯ ಸೇನೆಯ ಹೆಮ್ಮೆಯ ರಜಪೂತ್, ಮರಾಠ, ನಾಗಾ ಹಾಗೂ ಗೂರ್ಖಾ ರೆಜಿಮೆಂಟ್‌ಗಳ ವರ್ಣವನ್ನು ಹೋಲುವ ನೂತನ ಸಮವಸ್ತ್ರವನ್ನು ಅನಾವರಣಗೊಳಿಸಿದರು.

ದೇಶದ ಋಣ ತೀರಿಸಿದ್ದಕ್ಕೆ ಪಶ್ಚಾತ್ತಾಪವಿಲ್ಲ

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದ ಕಠಿಣ ಪರಿಸ್ಥಿತಿಯನ್ನು ಸ್ಮರಿಸಿದ ಕ್ಯಾಪ್ಟನ್ ನವೀನ್ ನಾಗಪ್ಪ, "ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟದಿಂದ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿ ಜಯಗಳಿಸಲು ಸಾಧ್ಯವಾಯಿತು" ಎಂದರು. ಅಲ್ಲದೆ, ಯುದ್ಧದ ಸಮಯದಲ್ಲಿ ಪರಮವೀರ ಚಕ್ರ ವಿಜೇತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

"ಯುದ್ಧದ ಸಮಯದಲ್ಲಿ ತೀವ್ರವಾಗಿ ಗಾಯಗೊಂಡು ನನ್ನ ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ, ದೇಶದ ಋಣ ತೀರಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ದೇಶಸೇವೆ ಎಂದರೆ ಕೇವಲ ಸೇನೆಗೆ ಸೇರುವುದು ಮಾತ್ರವಲ್ಲ; ವಿನೂತನ ತಂತ್ರಜ್ಞಾನಗಳನ್ನು ರೂಪಿಸುವ ಮೂಲಕ ಮತ್ತು ದೇಶಕ್ಕೆ ಪೂರಕವಾದ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕವೂ ಪ್ರತಿಯೊಬ್ಬರೂ ದೇಶಸೇವೆ ಮಾಡಬಹುದು." ಎಂದು ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು.

ದೇಶದ ಅಭಿವೃದ್ಧಿಗೆ ಮುಂದಿನ ಪೀಳಿಗೆ ಶ್ರಮಿಸಲಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ  ಮಾತನಾಡಿ, ಮುಂದಿನ ಪೀಳಿಗೆಯು ದೇಶದ ಅಭಿವೃದ್ಧಿಗಾಗಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಿವೃತ್ತ ಯೋಧರಿಗೆ ಸನ್ಮಾನ: ಇದೇ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹವಾಲ್ದಾರ್ ಚಂದ್ರಶೇಖರ್ ಹಾಗೂ ಭವ್ಯಾ ದಂಪತಿಯನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.