KPSC: ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ.. ಆಂತರಿಕ ತನಿಖಾ ಉಪಸಮಿತಿ ರಚನೆ

KPSC: ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ನೀಡಲಾಗಿದ್ದು, ಆಂತರಿಕ ತನಿಖಾ ಉಪಸಮಿತಿ ರಚಿಸಲಾಗಿದೆ.

Jul 26, 2026 - 20:22
Jul 26, 2026 - 20:25
KPSC: ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ..  ಆಂತರಿಕ ತನಿಖಾ ಉಪಸಮಿತಿ ರಚನೆ

ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ, ಜು.24 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಕರ್ನಾಟಕ ಲೋಕಸೇವಾ ಆಯೋಗ (KPSC) ಗಂಭೀರವಾಗಿ ಪರಿಗಣಿಸಿದೆ. ಇಂದು (ಜು.26) ತುರ್ತು ಸಭೆ ನಡೆಸಿದೆ.

ಸಾರ್ವಜನಿಕರ ವಿಶ್ವಾಸ ಕಾಪಾಡುವ ಉದ್ದೇಶ ಮತ್ತು ಆರೋಪಗಳ ಗಂಭೀರತೆ ಅರಿತು, ಆಯೋಗವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಕಾರ್ಯದರ್ಶಿ ಕೆ.ಜ್ಯೋತಿ ಅವರು ಮಾಹಿತಿ ನೀಡಿದ್ದಾರೆ.

ಆಂತರಿಕ ತನಿಖಾ ಉಪಸಮಿತಿ ರಚನೆ:

ಜು.24 ರಂದು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ದೂರು, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಮತ್ತು ಜು.25 ರಂದು ಪೊಲೀಸ್ ಇಲಾಖೆ ನೀಡಿರುವ ಪ್ರಾಥಮಿಕ ಮಾಹಿತಿ ವರದಿಯನ್ನು (ಎಫ್ಐಆರ್) ಆಯೋಗವು ಗಂಭೀರವಾಗಿ ತೆಗೆದುಕೊಂಡಿದೆ. ಆರೋಪಗಳ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ವಾರದಲ್ಲಿ ವರದಿ ಸಲ್ಲಿಕೆ:

ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ ಮತ್ತು ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ವಾಸ್ತವಾಂಶಗಳ ಕುರಿತ ವಿವರವಾದ ವರದಿಯನ್ನು ಒಂದು ವಾರದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ಉಪಸಮಿತಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ತನಿಖೆಗೆ ನೋಡಲ್ ಅಧಿಕಾರಿಗಳ ನೇಮಕ:

ತನಿಖಾ ಕಾರ್ಯಕ್ಕೆ ಅಗತ್ಯವಾದ ಆಡಳಿತಾತ್ಮಕ ಮಾಹಿತಿ, ದಾಖಲೆಗಳನ್ನು ಒದಗಿಸಲು ಕೆಪಿಎಸ್‌ಸಿ ಕಾರ್ಯದರ್ಶಿ ಹಾಗೂ ಅಗತ್ಯ ಕಾನೂನು ಸಲಹೆ ನೀಡಲು ಕಾನೂನು ವಿಭಾಗದ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ:

ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವವರೆಗೆ, ಜು.17 ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗವು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಕೆಪಿಎಸ್‌ಸಿಯು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಬದ್ಧವಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.