Bengaluru: ಕಾರ್ಗಿಲ್ ವಿಜಯ ದಿವಸದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ

Bengaluru Kargil Vijay Diwas: ಬೆಂಗಳೂರಿನ ನೆಹರು ತಾರಾಲಯದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಭಾನುವಾರ ನಡೆದ 'ಕಾರ್ಗಿಲ್ ವಿಜಯ ದಿವಸ' ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.

Jul 26, 2026 - 18:46
Jul 26, 2026 - 18:47
Bengaluru: ಕಾರ್ಗಿಲ್ ವಿಜಯ ದಿವಸದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ

ಬೆಂಗಳೂರು: 'ದೇಶದ ಯೋಧರ ತ್ಯಾಗವೇ ನಮ್ಮ ಧೈರ್ಯ, ಸ್ವಾತಂತ್ರ್ಯ ಹಾಗೂ ಹೆಮ್ಮೆಯಾಗಿದೆ' ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದರು.

ನೆಹರು ತಾರಾಲಯದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಭಾನುವಾರ ನಡೆದ 'ಕಾರ್ಗಿಲ್ ವಿಜಯ ದಿವಸ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'27 ವರ್ಷಗಳ ಹಿಂದೆ, ನಮ್ಮ ವೀರ ಯೋಧರು ಹಿಮಾಲಯದ ತಪ್ಪಲಿನಲ್ಲಿ ಶತ್ರುಗಳನ್ನು ಸದೆ ಬಡಿದು ಭಾರತದ ತ್ರಿವರ್ಣ ಧ್ವಜ ಹಾರಿಸಿದರು. ನಮ್ಮ ಹೀರೊಗಳು ಹುತಾತ್ಮರಾಗಿರಬಹುದು, ಆದರೆ ಅವರ ಪರಂಪರೆ ಮಾತ್ರ ಶಾಶ್ವತ. ದೇಶಕ್ಕಾಗಿ ಹುತಾತ್ಮರಾದ ನಮ್ಮ ಸೈನಿಕರಿಗೆ ಹೃತ್ಪೂರ್ವಕ ನಮನ' ಎಂದು ತಿಳಿಸಿದರು. 

'ನಮ್ಮ ತಾಯ್ನಾಡನ್ನು ರಕ್ಷಿಸಲು 527 ಯೋಧರು ಹುತಾತ್ಮರಾಗಿದ್ದಾರೆ. ಅದರಲ್ಲಿ ಕರ್ನಾಟಕದ 13 ಯೋಧರು ಸೇರಿದ್ದಾರೆ. ನಮ್ಮ ಸೈನಿಕರು ಎಲ್ಲಾ ಪರಿಸ್ಥಿತಿಯಲ್ಲೂ ದೇಶದ ರಕ್ಷಣೆಗೆ ಬದ್ಧರಾಗಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧವಾಗಿರಲಿ, ಭಾರತ-ಚೀನಾ ಯುದ್ಧವಾಗಲಿ, ಗಡಿ ಅತಿಕ್ರಮಣ ಪರಿಸ್ಥಿತಿಯೇ ಆಗಿರಲಿ, ನಮ್ಮ ಯೋಧರು ಕೆಚ್ಚೆದೆಯಿಂದ ದೇಶದ ಗಡಿ ರಕ್ಷಣೆಗೆ ಪ್ರತಿ ಕ್ಷಣ ಸಿದ್ಧರಾಗಿರುತ್ತಾರೆ' ಎಂದು ಬಣ್ಣಿಸಿದರು. 

ಕರ್ನಾಟಕ ನಮ್ಮ ರಕ್ಷಣಾ ವಲಯದ ಬೆನ್ನೆಲುಬು:

'ಯೋಧರಿಂದಾಗಿ ನಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ಮಲಗುತ್ತಿದ್ದೇವೆ. ಭಾರತದ ರಕ್ಷಣಾ ಪಡೆಗೆ ಕರ್ನಾಟಕ ಬೆನ್ನೆಲುಬಾಗಿದೆ. ಬೆಮೆಲ್, ಡಿಆರ್‌ಡಿಒ ಮತ್ತು ಇಸ್ರೋ ಸೇರಿದಂತೆ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾವು ಭಾರತದ ಮೊದಲ ಸೇನಾ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ' ಎಂದರು. 

ಯೋಧರ ಕುಟುಂಬಗಳ ಹಿತ ಕಾಯಲು ಬದ್ಧ:

ನಮ್ಮ ರಾಜ್ಯದಲ್ಲಿ ಲಕ್ಷಾಂತರ ಯೋಧರ ಕುಟುಂಬಗಳು ನೆಲೆಸಿವೆ. ನಿಮ್ಮ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಲಹೆಗಳು ಏನೇ ಇದ್ದರು ನಮಗೆ ನೀಡಿ. ನಿಮ್ಮ ಸಲಹೆ ಸ್ವೀಕರಿಸಲು ನಮ್ಮ ಸರ್ಕಾರ ಮುಕ್ತವಾಗಿದೆ' ಎಂದು ಹೇಳಿದರು.