ಬೆಳ್ಳಿಬೆಳಕಿನಲ್ಲಿ ನೃತ್ಯಗುರು ಯೋಗೀಶ್ವರಿ ಜಯಪ್ರಕಾಶ್

ಇಪ್ಪತ್ತೈದು ವರ್ಷಗಳ ಈ ಸಾಧನೆಯ ಪಯಣವನ್ನು ಸ್ಮರಣೀಯವಾಗಿಸಲು ತಮ್ಮ ಎಲ್ಲಾ ಹಳೆ ಮತ್ತು ಹಾಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ‘ರಜತ ನೃತ್ಯಾಂತರ ಯಾನ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ಕನಸನ್ನು ಹೊಂದಿದ್ದಾರೆ

May 14, 2026 - 19:30
ಬೆಳ್ಳಿಬೆಳಕಿನಲ್ಲಿ ನೃತ್ಯಗುರು ಯೋಗೀಶ್ವರಿ ಜಯಪ್ರಕಾಶ್

ಪುತ್ತೂರು, ಮೇ 14: ಕಳೆದ ಇಪ್ಪತ್ತೈದು ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ನೃತ್ಯಗುರು ಯೋಗೀಶ್ವರಿ ಜಯಪ್ರಕಾಶ್ ಅವರು ತಮ್ಮ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಪುತ್ತೂರು ತಾಲೂಕಿನ ಈಶ್ವರಮಂಗಲದವರಾದ ಇವರು, ಭರತನಾಟ್ಯದ ಮೇಲಿನ ಅಪಾರ ಆಸಕ್ತಿ ಮತ್ತು ಶ್ರದ್ಧೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ.

ಕಲಾಶ್ರೀ ಕುದ್ಕಾಡಿ ವಿಶ್ವನಾಥ ರೈ ಹಾಗೂ ಶ್ರೀಮತಿ ನಯನಾ ವಿ.ರೈ ಅವರಿಂದ ಭರತನಾಟ್ಯದಲ್ಲಿ ಪ್ರಾಥಮಿಕದಿಂದ ಉನ್ನತ ಮಟ್ಟದ ತರಬೇತಿಯನ್ನು ಪಡೆದ ಅವರು, ನೃತ್ಯಸೇವೆಯನ್ನು ಜೀವನ ಧ್ಯೇಯವನ್ನಾಗಿಸಿಕೊಂಡರು. ಪುತ್ತೂರು, ಬದಿಯಡ್ಕ, ಬೆಳ್ಳಾರೆ ಹಾಗೂ ವಿಟ್ಲ ಭಾಗಗಳಲ್ಲಿ ಭರತನಾಟ್ಯ ತರಗತಿಗಳನ್ನು ಆರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಸಂಸ್ಕಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೇವಲ ನೃತ್ಯ ಶಿಕ್ಷಕಿಯಾಗಿಯೇ ಅಲ್ಲದೆ, ಶಿಸ್ತು, ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಮಾರ್ಗದರ್ಶಕಿಯಾಗಿ ಯೋಗೀಶ್ವರಿ ಗುರುತಿಸಿಕೊಂಡಿದ್ದಾರೆ. ಅವರ ತರಬೇತಿಯಲ್ಲಿ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ಜಿಲ್ಲಾ ಮಟ್ಟದ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಂಸೆ ಗಳಿಸಿದ್ದಾರೆ.

ಇಪ್ಪತ್ತೈದು ವರ್ಷಗಳ ಈ ಸಾಧನೆಯ ಪಯಣವನ್ನು ಸ್ಮರಣೀಯವಾಗಿಸಲು ತಮ್ಮ ಎಲ್ಲಾ ಹಳೆ ಮತ್ತು ಹಾಲಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ “ರಜತ ನೃತ್ಯಾಂತರ ಯಾನ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವ ಕನಸನ್ನು ಅವರು ಹೊಂದಿದ್ದಾರೆ. ಈ ಕಾರ್ಯಕ್ರಮವು ಕೇವಲ ಒಂದು ಸಂಭ್ರಮಾಚರಣೆಯಲ್ಲ, ಗುರು-ಶಿಷ್ಯರ ಬಾಂಧವ್ಯವನ್ನು ಮತ್ತೆ ಒಂದಾಗಿಸುವ ಸಾಂಸ್ಕೃತಿಕ ಹಬ್ಬವಾಗಲಿದೆ ಎಂಬ ಆಶಯ ಅವರದು.

ಭರತನಾಟ್ಯ ಎಂಬ ಭಾರತೀಯ ಶ್ರೇಷ್ಠ ಕಲೆಯನ್ನು ಗ್ರಾಮೀಣ ಭಾಗಗಳಲ್ಲಿಯೂ ಜೀವಂತವಾಗಿಟ್ಟಿರುವ ಯೋಗೀಶ್ವರಿ ಜೇಪ್ರಕಾಶ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಅವರ ಈ ಕಲಾಯಾನ ಇನ್ನಷ್ಟು ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂಬುದು ಎಲ್ಲರ ಹಾರೈಕೆ.

 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.