ರಾಜೀನಾಮೆ ನೀಡಿದ ಸಿದ್ದರಾಮಯ್ಯ: 'ನನ್ನ ಪಾಲಿಗೆ ಮತದಾರರೇ ದೇವರು, ಅಧಿಕಾರ ಇರಲಿ ಇಲ್ಲದಿರಲಿ ಹೋರಾಟ ನಿಲ್ಲದು'

ನೂತನ ಮುಖ್ಯಮಂತ್ರಿಯನ್ನು ಶಾಸಕರು ಹಾಗೂ ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಪಕ್ಕದಲ್ಲೇ ಡಿ.ಕೆ.ಶಿವಕುಮಾರ್ ಇದ್ದರು

May 28, 2026 - 16:21
ರಾಜೀನಾಮೆ ನೀಡಿದ ಸಿದ್ದರಾಮಯ್ಯ: 'ನನ್ನ ಪಾಲಿಗೆ ಮತದಾರರೇ ದೇವರು, ಅಧಿಕಾರ ಇರಲಿ ಇಲ್ಲದಿರಲಿ ಹೋರಾಟ ನಿಲ್ಲದು'

ಬೆಂಗಳೂರು, ಮೇ 28: ರಾಜ್ಯದ ರಾಜಕೀಯ ವಿದ್ಯಮಾನಗಳಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಗುರುವಾರ  ಇಲ್ಲಿ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಲೋಕಭವನಕ್ಕೆ ತೆರಳಿ ವಿಶೇಷ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿಸಿದರು.

ಇದಕ್ಕೆ ಮೊದಲು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಉಪಾಹಾರ ಸಭೆ ನಡೆಸಿ, ತಾವು ರಾಜೀನಾಮೆ ನೀಡುತ್ತಿರುವ ವಿಷಯವನ್ನು ಸಂಪುಟದ ಸದಸ್ಯರಿಗೆ ತಿಳಿಸಿದರು. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದನ್ನೂ ತಿಳಿಸಿದರು. ಉಪಾಹಾರ ಸಭೆಗೆ ಮೊದಲು ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಎರಗಿ ಆಶೀರ್ವಾದ ಬೇಡಿದರು, ಇಬ್ಬರೂ ನಾಯಕರು ಪರಸ್ಪರ ಆಲಿಂಗಿಸಿಕೊಂಡರು. ಇದು ಬಹಳ ಅರ್ಥಗರ್ಭಿತವಾಗಿತ್ತು.

ರಾಜೀನಾಮೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ತಮ್ಮ 4.5 ದಶಕಗಳ ಸುದೀರ್ಘ ರಾಜಕೀಯ ಪಯಣ, ಏಳು-ಬೀಳುಗಳು ಮತ್ತು ಸಾಧನೆಗಳ ನೆನಪನ್ನು ಹಂಚಿಕೊಂಡರು. ಸಂವಿಧಾನವೇ ನನ್ನ ಧರ್ಮ, ಮತದಾರರೇ ದೇವರು "ಮೇರು ನಟ ಡಾ. ರಾಜ್‌ಕುಮಾರ್ ಅವರು ತಮ್ಮ ಅಭಿಮಾನಿಗಳನ್ನು 'ಅಭಿಮಾನಿ ದೇವರು' ಎಂದು ಕರೆಯುತ್ತಿದ್ದರು. ಅದೇ ರೀತಿ ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ನಂಬಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರೇ ದೇವರು. ಈ ರಾಜೀನಾಮೆ ಪತ್ರವನ್ನು ನಾನು ಯಾವುದೇ ಒತ್ತಡಕ್ಕೆ ಒಳಗಾಗದೆ ಅತ್ಯಂತ ಸಂತೋಷದಿಂದ, ಮನಃಪೂರ್ವಕವಾಗಿ ನೀಡಿದ್ದೇನೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸಂವಿಧಾನ ಇಲ್ಲದಿದ್ದರೆ ಕುರಿ ಮೇಯಿಸಿಕೊಂಡಿರುತ್ತಿದ್ದೆ!
ತಮ್ಮ ಹಳ್ಳಿಗಾಡಿನ ಹಿನ್ನೆಲೆಯನ್ನು ನೆನಸಿಕೊಂಡ ಅವರು, "ಹಳ್ಳಿಯ ರೈತಾಪಿ ಕುಟುಂಬದಿಂದ ಬಂದ ನಾನು ಶಾಸಕ, ಸಚಿವ ಅಥವಾ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸಲ್ಲೂ ಅಂದುಕೊಂಡವನಲ್ಲ. ಇಂತಹ ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡು ಇರುತ್ತಿದ್ದೆ" ಎಂದು ಸಂವಿಧಾನ ಶಿಲ್ಪಿಗೆ ತಲೆಬಾಗಿ ನಮಿಸಿದ್ದಾರೆ.

ತಮಗೆ ರಾಜಕೀಯ ಅಕ್ಷರಾಭ್ಯಾಸ ಮಾಡಿಸಿದ ರಾಜಪ್ಪ ಮಾಸ್ತರ್, ಸಮಾಜವಾದದ ಪಾಠ ಹೇಳಿಕೊಟ್ಟ ರೈತ ನಾಯಕ ಎಂ.ಡಿ. ನಂಜುಂಡಸ್ವಾಮಿ ಹಾಗೂ ರಾಜಕೀಯವಾಗಿ ಮುನ್ನಡೆಸಿದ ದಿವಂಗತ ರಾಮಕೃಷ್ಣ ಹೆಗಡೆ ಅವರನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದ್ದಾರೆ. ತಮಗೆ ಎರಡು ಬಾರಿ ಸಿಎಂ ಸ್ಥಾನದ ಅವಕಾಶ ನೀಡಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೂ ಧನ್ಯವಾದ ತಿಳಿಸಿದ್ದಾರೆ.

ಕುಟುಂಬದ ಮೇಲಿನ ಸುಳ್ಳು ಆರೋಪಕ್ಕೆ ಮನನೊಂದಿದ್ದೆ
ತಮ್ಮ ರಾಜಕೀಯ ಹಾದಿಯಲ್ಲಿ ಎದುರಾದ ಪಿತೂರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ನನ್ನ ಹಾದಿಯಲ್ಲಿ ಹೆಜ್ಜೆಹೆಜ್ಜೆಯೂ ಪಟ್ಟಭದ್ರ ಹಿತಾಸಕ್ತಿಗಳ ದ್ವೇಷಕ್ಕೆ ಈಡಾಗಿದ್ದೇನೆ. ನನ್ನ ಪತ್ನಿ ರಾಜಕಾರಣದಿಂದ ದೂರವಿದ್ದರೂ ಅವರ ವಿರುದ್ಧ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಲಾಯಿತು. ಇವೆಲ್ಲವನ್ನೂ ಅನುಭವಿಸಿದಾಗ ರಾಜಕೀಯ ಸನ್ಯಾಸತ್ವ ಪಡೆಯೋಣ ಅನಿಸಿತ್ತು. ಆದರೆ, ಶತ್ರುಗಳ ದಾಳಿಗೆ ಹೆದರಿ ಓಡಿಹೋಗಬೇಡ ಎಂದು ನನ್ನ ಅಂತರಾತ್ಮ ಎಚ್ಚರಿಸಿತು. ಹೀಗಾಗಿ ನ್ಯಾಯದ ಹೋರಾಟ ನಡೆಸಿ ಕಳಂಕ ಮುಕ್ತನಾಗಿದ್ದೇನೆ" ಎಂದಿದ್ದಾರೆ.

"ವರ್ತಮಾನವು ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತದೆ, ಆದರೆ ಇತಿಹಾಸ ಸದಾ ನೆನಪಿನಲ್ಲಿಡುತ್ತದೆ. 12ನೇ ಶತಮಾನದ ಬಸವಣ್ಣನವರಿಂದ ಹಿಡಿದು ಅಂಬೇಡ್ಕರ್‌ವರೆಗೆ ಎಲ್ಲರ ಪಾಲಿನ ಸತ್ಯ ಇದೇ ಆಗಿದೆ." ಎಂದರು.

ಸಾಧನೆಯ ತೃಪ್ತಿ ಇದೆ:

ತಮ್ಮ ಆಡಳಿತಾವಧಿಯ ಸಾಧನೆಗಳನ್ನು ಜನತೆಯ ಮುಂದಿಟ್ಟಿರುವ ಅವರು,  ಕರ್ನಾಟಕವು ದೇಶದಲ್ಲೇ ತಲಾದಾಯದಲ್ಲಿ ಮೊದಲ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಸಾಮಾಜಿಕ ಭದ್ರತೆ ನೀಡಲಾಗಿದೆ. ನಾಡಿನ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 17 ಬಜೆಟ್‌ಗಳನ್ನು ಮಂಡಿಸಿದ ತೃಪ್ತಿ ನನಗಿದೆ.
ಹಸಿವು ಮುಕ್ತ ಕರ್ನಾಟಕ, ಕೃಷಿ ಮತ್ತು ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಶ್ರಮಿಸಲಾಗಿದೆ ಎಂದರು.

ಚುನಾವಣಾ ರಾಜಕಾರಣದಿಂದ ದೂರ, ಸಕ್ರಿಯ ರಾಜಕೀಯದಲ್ಲಿ ಮುಂದುವರಿಕೆ

"ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ. ನಾನು ಮುಂಬರುವ ದಿನಗಳಲ್ಲಿ ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯನಾಗಿರುತ್ತೇನೆ. ಅಧಿಕಾರ ಇರಲಿ, ಇಲ್ಲದಿರಲಿ ಬಡವರ ಪರವಾದ ನನ್ನ ಹೋರಾಟ ಮುಂದುವರಿಯುತ್ತದೆ" ಎಂದು ಸಿದ್ದರಾಮಯ್ಯ ಅವರು ತಮ್ಮ ಮುಂದಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಶೀಘ್ರದಲ್ಲೇ ರಾಜ್ಯದ ಜನತೆ ನೂತನ ಮುಖ್ಯಮಂತ್ರಿಯನ್ನು ಕಾಣಲಿದ್ದಾರೆ ಎಂದು ಅವರು ತಿಳಿಸಿದರು.