C.Veeranna: ಮಾಜಿ ಸಚಿವ ಸಿ.ವೀರಣ್ಣ ನಿಧನ
C.Veeranna: ಮಾಜಿ ಸಚಿವ ಸಿ.ವೀರಣ್ಣ ಶುಕ್ರವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣದ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ತುಮಕೂರು: ಮಾಜಿ ಸಚಿವ ಸಿ.ವೀರಣ್ಣ (C.Veeranna) ಶುಕ್ರವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವಯಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ, ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣದ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅವರು, ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಜೊತೆಗೆ ಉಪಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ವೀರಪ್ಪ ಅವರು, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರಿ ಕೆ.ವಿ.ಮಂಜುಳಾ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ವಿವಾಹವಾಗಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸಂತಾಪ:
ತುಮಕೂರಿನ ಹಿರಿಯ ನಾಯಕ ವೀರಪ್ಪ ವಿಧಿವಶರಾಗಿರುವುದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಸಚಿವರು, ಮಾಜಿ ಉಪಸಭಾಪತಿಗಳು ಮತ್ತು ಆತ್ಮೀಯರು ಆಗಿದ್ದ ಸಿ.ವೀರಣ್ಣ ಅವರ ಸಾವಿನ ಸುದ್ದಿ ಕೇಳಿ ದುಃಖವಾಯಿತು. ರಾಜ್ಯದ ಹಾಗೂ ಶೋಷಿತ ಜನರ ಬಗ್ಗೆ ಸದಾಕಾಲ ಒಳಿತನ್ನೇ ಬಯಸುತ್ತಿದ್ದ ಅವರ ನಿಧನವು ವೈಯಕ್ತಿಕವಾಗಿ ನನಗೆ ಅಪಾರ ನೋವುಂಟುಮಾಡಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಸಮರ್ಥವಾಗಿ ಅವುಗಳನ್ನು ಮುನ್ನಡೆಸಿದವರು. ವೀರಣ್ಣ ಅವರ ಅಗಲಿಕೆಯಿಂದ ಹಳೆಯ ತಲೆಮಾರಿನ ರಾಜಕೀಯ ಕೊಂಡಿಯೊಂದು ಕಳಚಿದೆ.
ವೀರಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ, ಇನ್ನಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ತಮ್ಮ ಹೋರಾಟದ ಬದುಕು, ತಳ ಸಮುದಾಯಗಳ ಬಗೆಗಿನ ಕಾಳಜಿ ಮತ್ತು ಸಾಧನೆಗಳ ಮೂಲಕ ನಮ್ಮ ನಡುವೆ ಅವರ ನೆನಪು ಚಿರಸ್ಥಾಯಿ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.