ಮಿತಿಮೀರಿದ ಆಹಾರ ಸೇವನೆಯೇ ಮಾನವ ಜನಾಂಗದ ಮೊದಲ ತಪ್ಪು ಹೆಜ್ಜೆ: ರಾಘವೇಶ್ವರ ಶ್ರೀ
Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ಮಾನವರ ಮೂಲದ ಕುರಿತು ಭಾರತೀಯರ ದೃಷ್ಟಿಗೂ ಹಾಗೂ ಆಧುನಿಕರ ದೃಷ್ಟಿಗೂ ತುಂಬಾ ವ್ಯತ್ಯಾಸಗಳಿವೆ. ಅಧುನಿಕರ ಪ್ರಕಾರ ಸೃಷ್ಟಿಯ ಆದಿಯಲ್ಲಿ ಮಾನವ ಸಂಸ್ಕೃತಿ ಹೀನನಾಗಿದ್ದು, ಕಾಡು ಮನುಷ್ಯನಂತಿದ್ದ ಎಂಬ ಕಲ್ಪನೆಗಳನ್ನು ನೀಡಲಾಗಿದೆ ಮತ್ತು ಮಂಗನಿಂದ ಮಾನವ ಎಂಬ ಸಿದ್ಧಾಂತಗಳು ಇವೆ. ಇವು ನಮ್ಮ ಪೂರ್ವಜರ ಕುರಿತಾಗಿ ಜಿಗುಪ್ಸೆ ಹುಟ್ಟಿಸುವಂತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಬುಧವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ನೀಡಿದರು.
ಭಾರತೀಯ ಪರಂಪರೆ ಹೇಳುವಂತೆ ಕೃತಯುಗದಲ್ಲಿ ದೇವರು ಜಗತ್ತನ್ನು ತುಂಬಾ ಸುಂದರವಾಗಿ ಸೃಷ್ಟಿಸಿದ್ದ. ಅದು ದೇವರು ಸೃಷ್ಟಿಸಿದಂತೆಯೇ ಇದ್ದ ಕಾಲ. ಕೃತಯುಗ ಒಳಿತಿನ ಒಳಿತಾದರೆ, ಈಗಿನ ಕಲಿಯುಗ ಕೆಡುಕಿನ ಕೆಡುಕು ಎನ್ನಬಹುದು. ಅಂದು ಜನರು ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು. ಕೃತಯುಗದ ವರ್ಣನೆಯನ್ನು ಕೇಳುವಾಗ ಅದು ಅತಿಶಯೋಕ್ತಿ ಎನಿಸಬಹುದು. ಏಕೆಂದರೆ ನಾವು ಅಂತಹ ವಾತಾವರಣವನ್ನು ನೋಡಿಲ್ಲ. ಹಾಗಾಗಿ ಅದು ಸುಳ್ಳು ಎನಿಸಬಹುದು ಎಂದರು.
ಚರಕ ಸಂಹಿತೆಯು ಸೃಷ್ಟಿಯ ಆದಿಯಲ್ಲಿ ಮನುಷ್ಯರು ದೇವರಿಗೆ ಸರಿಸಮಾನವಾದ ಓಜಸ್ಸನ್ನು ಹೊಂದಿದ್ದರು. ಗಟ್ಟಿಮುಟ್ಟಾದ ಶರೀರ , ಪ್ರಸನ್ನವಾದ ಇಂದ್ರಿಯ, ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು ಎಂದಿದೆ. ಆಗ ರೋಗವೂ ಇರಲಿಲ್ಲ, ವೈದ್ಯರಿರಲಿಲ್ಲ, ವೈದ್ಯಶಾಸ್ತ್ರವು ಇರಲಿಲ್ಲ, ಔಷಧದ ಅಂಗಡಿಗಳು ಇರಲಿಲ್ಲ ಎಂದು ವಿವರಿಸಿದರು.
ಮೊದಲ ತಪ್ಪು ಹೆಜ್ಜೆ: ಕೃತಯುಗದಲ್ಲಿ ಅಗ್ನಿ ಮತ್ತು ಆಹಾರದ ವಿಚಾರದಲ್ಲಿ ಮೊದಲ ತಪ್ಪು ಹೆಜ್ಜೆ ಆರಂಭವಾಯಿತು. ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸ್ವೀಕರಿಸಲು ಕೆಲವರು ಆರಂಭಿಸಿದರು. ಪರಿಣಾಮವಾಗಿ ಮಾನವರ ದೇಹ ಸ್ಥೂಲವಾಯಿತು, ಆಲಸ್ಯ, ಕೂಡಿಡುವ ಬುದ್ಧಿ, ಲೋಭ, ದ್ರೋಹ, ಸುಳ್ಳು, ಕಾಮ ಕ್ರೋಧಾದಿಗಳು, ಹೀಗೆ ಒಂದರಿಂದ ಒಂದು ದುರ್ಗುಣಗಳು ಬೆಳೆಯುತ್ತಾ ಸಾಗಿತು. ಮನುಷ್ಯನ ವ್ಯಕ್ತಿತ್ವ ಪತನದ ದಾರಿಯನ್ನು ಹಿಡಿಯಿತು. ಅಗ್ನಿಯ ವ್ಯತ್ಯಾಸದಿಂದ ವಾತದಲ್ಲಿ ಬದಲಾವಣೆ, ಪರಿಣಾಮವಾಗಿ ರೋಗಗಳು ಮನುಷ್ಯನನ್ನು ಆಕ್ರಮಿಸಿದವು ಎಂದು ಚರಕ ಸಂಹಿತೆಯ ಪ್ರಕಾರ, ಮಾನವ ಜನಾಂಗದ ಮೊದಲ ತಪ್ಪು ಹೆಜ್ಜೆಯನ್ನು ತಿಳಿಸಿದರು.
ಹುಟ್ಟಿದ ಪ್ರತಿಜೀವಿಯೂ ಆಹಾರದ ಒಳಹೊರಗನ್ನು ತಿಳಿದುಕೊಳ್ಳಲೇ ಬೇಕು. ಆಹಾರದ ವಿಚಾರವನ್ನು ತಿಳಿದುಕೊಳ್ಳದೇ ಇದ್ದರೆ, ಮನುಷ್ಯನಾಗಿ ಜೀವಿಸುವ ಹಕ್ಕನ್ನೇ ಕಳೆದುಕೊಂಡಂತೆ. ಹಾಗಾಗಿ ಆಹಾರದ ವಿಚಾರವಾಗಿ ನಾವು ವಿಮರ್ಶೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಜನ್ನು, ಮಹೇಶ ಶೆಟ್ಟಿ ಹಾಗೂ ಹನುಮಂತ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳ ಆಶೀರ್ವಾದ ಪಡೆದರು.
ಉಪ್ಪಿನಂಗಡಿ ಹವ್ಯಕ ಮಂಡಲದ ಮಾಣಿ, ಕಬಕ, ಉಜಿರೆ, ಉಪ್ಪಿನಂಗಡಿ, ಉರುವಾಲು, ವೇಣೂರು ಹವ್ಯಕ ವಲಯಗಳ ಪರವಾಗಿ ವೈ.ಗಣರಾಜ ಕೊಣಮ್ಮೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು.
ನಾರಾಯಣ ಭಟ್ ಹಾರೆಕೆರೆ, ಅರವಿಂದ ದರ್ಬೆ, ಗಣಪತಿ ಜಟ್ಟಿಮನೆ, ಮಹೇಶ ಕುದಪುಲಾ, ಪರಮೇಶ್ವ ಭಟ್ ವೇಣೂರು , ಶಿವಪ್ರಸಾದ ವೇಣೂರು ಹಾಗೂ ದಿನಪ್ರಧಾನರಾಗಿ ವೆಂಕಟಗಿರಿ ಎಂ.ಆರ್ ದಂಪತಿಗಳು ಉಪಸ್ಥಿತರಿದ್ದರು.