ಕರ್ನಾಟಕ ಗೂಂಡಾ ರಾಜ್ಯವಾಗಿದೆ: ಆರ್.ಅಶೋಕ್ ಆಕ್ರೋಶ

R.Ashok: ಕರ್ನಾಟಕವು ಗೂಂಡಾಗಳ ರಾಜ್ಯವಾಗಿದೆ. ಗೂಂಡಾ ಮುಖ್ಯಮಂತ್ರಿ ಇಲ್ಲಿದ್ದಾರೆ ಎಂದು ವಿ.ಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

Jul 22, 2026 - 16:28
ಕರ್ನಾಟಕ ಗೂಂಡಾ ರಾಜ್ಯವಾಗಿದೆ: ಆರ್.ಅಶೋಕ್ ಆಕ್ರೋಶ

ಬೆಂಗಳೂರು: ಕರ್ನಾಟಕವು ಗೂಂಡಾಗಳ ರಾಜ್ಯವಾಗಿದೆ. ಗೂಂಡಾ ಮುಖ್ಯಮಂತ್ರಿ ಇಲ್ಲಿದ್ದಾರೆ ಎಂದು ವಿ.ಪಕ್ಷ ನಾಯಕ ಆರ್.ಅಶೋಕ್ (R.Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಹುಲ್ ಗಾಂಧಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ದೇಶದ ಯುವಜನತೆಗೆ ಮೋಸ ಮಾಡುತ್ತಿದ್ದಾರೆಂದು ಆಕ್ಷೇಪಿಸಿ, ನಾವು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಆದರೆ, ಸರ್ಕಾರ ನಮ್ಮೆಲ್ಲರನ್ನು ಬಂಧಿಸಿದ್ದು, ನಾವೆಲ್ಲರೂ ಪೊಲೀಸ್ ಕಸ್ಟಡಿಯಲ್ಲಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಮಚ್ಚು, ಲಾಂಗು ಹಾಗೂ ಮೊಟ್ಟೆಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಶಾಸಕ ರಾಮಮೂರ್ತಿ ಹಾಗೂ ಅಶ್ವತ್ಥನಾರಾಯಣ್  ಮೇಲೆಯೂ ಹಲ್ಲೆ ಮಾಡಿದ್ದಾರೆ. ಹರೀಶ್ ಅವರಿಗೆ ಹಿಗ್ಗಾಮುಗ್ಗಾ ಮೊಟ್ಟೆಯಿಂದ ಹೊಡೆದಿದ್ದಾರೆ. ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದನ್ನು ನೋಡಿದರೆ ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಮತ್ತು ಹರಿಪ್ರಸಾದ್ ಕೊತ್ವಾಲ್ ಶಿಷ್ಯರು. ರಾಜ್ಯದಲ್ಲಿ ಕೊತ್ವಾಲ್ ರಾಮಚಂದ್ರನ ಆಡಳಿತವಿದೆ. ಇಲ್ಲಿ ವಿಪಕ್ಷಗಳಿಗೆ ರಕ್ಷಣೆ ಇದ್ಯಾ ಎಂದು ಪ್ರಶ್ನಿಸಿದರು. 

ನಾವೆಲ್ಲ ಪೊಲೀಸ್ ಸುಪರ್ದಿಯಲ್ಲಿದ್ದು, ನಮ್ಮ ಪ್ರಾಣಕ್ಕೆ ಏನಾದರೂ ಆದರೆ, ಯಾರು ಜವಾಬ್ದಾರರು. ಎಂಎಲ್‍ಎಗಳು ಹಾಗೂ ಎಂಎಲ್‍ಸಿಗಳು ಬಂದಿದ್ದು, ನಮಗೆ ರಕ್ಷಣೆ ಇಲ್ಲವಾದರೆ, ನಾವು ಯಾರ ಬಳಿ ರಕ್ಷಣೆ ಪಡೆಯಬೇಕು ಎಂದು ಕೇಳಿದರು. ಕಾಂಗ್ರೆಸ್ ಕಚೇರಿ ಗೂಂಡಾಗಳ ಕಚೇರಿಯಾಗಿದೆ. ಅದರ ಮೇಲೆ ಪೊಲೀಸರು ದಾಳಿ ಮಾಡಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಗೆ ಬಿಜೆಪಿ ಮುತ್ತಿಗೆ ಯತ್ನ:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 'ನೀಟ್' ಅಕ್ರಮವಾದ ವಿರುದ್ಧ ತೀವ್ರತರದ ಪ್ರತಿಭಟನೆಗಳಾಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ಬಿಜೆಪಿ & ಕಾಂಗ್ರೆಸ್ ನಡುವೆ ಜಟಾಪಟಿ ಶುರುವಾಗಿದೆ. ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಿದರು. ಪೊಲೀಸರು ಎಲ್ಲಾ ಮುಖಂಡರನ್ನು ವಶಕ್ಕೆ ಪಡೆದರು.