ಉಡುಪಿ: ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ.. 2.5 ಲಕ್ಷ ಚಕ್ಕುಲಿ ನೈವೇದ್ಯ
Udupi: ಕೃಷ್ಣನಗರಿ ಉಡುಪಿಯಲ್ಲಿ 'ಶ್ರೀಕೃಷ್ಣ ಜನ್ಮಾಷ್ಮಿ'ಯ ಸಂಭ್ರಮ ಮನೆ ಮಾಡಿದೆ. ಇಂದು & ನಾಳೆ 2 ದಿನಗಳ ಕಾಲ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಕೃಷ್ಣ ಲೀಲೋತ್ಸವಕ್ಕೆ ಕೃಷ್ಣಮಠದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ 'ಶ್ರೀಕೃಷ್ಣ ಜನ್ಮಾಷ್ಮಿ'ಯ ಸಂಭ್ರಮ ಮನೆ ಮಾಡಿದೆ. ಇಂದು & ನಾಳೆ 2 ದಿನಗಳ ಕಾಲ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಕೃಷ್ಣ ಲೀಲೋತ್ಸವಕ್ಕೆ ಕೃಷ್ಣಮಠದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.
ಕೃಷ್ಣ ಭಕ್ತರು ಗುರುವಾರದಿಂದಲೇ, ಉಪವಾಸ, ವ್ರತ, ಜಪ, ಭಜನೆ ಹಾಗೂ ಪಾರಾಯಣಗಳಲ್ಲಿ ನಿರತರಾಗಿದ್ದಾರೆ. ಕೃಷ್ಣಾವತಾರದ ಪವಿತ್ರ ಗಳಿಗೆಗಾಗಿ ಎಲ್ಲರು ಕಾತರದಿಂದ ಕಾಯುತ್ತಿದ್ದಾರೆ.
ಶುಕ್ರವಾರ ಮತ್ತು ಶನಿವಾರದ ನಡುವಿನ ಮಧ್ಯರಾತ್ರಿ, ಚಂದ್ರೋದಯ ಕಾಲದ ನಿಖರವಾದ 12.12 ಗಂಟೆಗೆ ರೋಹಿಣಿ ನಕ್ಷತ್ರದ ಶುಭ ಸಂಯೋಗದಲ್ಲಿ ಜನ್ಮಾಷ್ಟಮಿಯ ಪ್ರಧಾನ ಪೂಜೆ ನಡೆಯಲಿದೆ.
ಶೀರೂರು ಮಠದ ಪರ್ಯಾಯ ಪೀಠಾಧೀಶರಾದ ವೇದವರ್ಧನ ತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ನೆರವೇರಿಸಿ, ಪ್ರಧಾನ ಅರ್ಘ್ಯ ಪ್ರದಾನ ಮಾಡಲಿದ್ದಾರೆ.
ಬಾಲಕೃಷ್ಣನಿಗೆ ವಿಶೇಷ ನೈವೇದ್ಯ:
ಮಹಾಪೂಜೆಯ ಪ್ರಯುಕ್ತ, ಬಾಲಕೃಷ್ಣನಿಗೆ ವೈವಿಧ್ಯಮಯ ನೈವೇದ್ಯಗಳನ್ನು ಸಮರ್ಪಿಸಲಾಗುತ್ತಿದೆ. ಇದಕ್ಕಾಗಿ ಕಳೆದ 4-5 ದಿನಗಳಿಂದ ಮಠದ ಬಾಣಸಿಗರು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 2.50 ಲಕ್ಷಕ್ಕೂ ಹೆಚ್ಚು ಚಕ್ಕುಲಿ, ಗುಂಡಿಟ್ಟು, ಎಳ್ಳುಂಡೆ, ಅರಳುಂಡೆ, ಕಡಲೇಉಂಡೆ, ರವೇಉಂಡೆ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಲಾಗಿದೆ.
ಶನಿವಾರ ವೈಭವದ ವಿಟ್ಲಪಿಂಡಿ - ಮೊಸರು ಕುಡಿಕೆ ಉತ್ಸವ:
ಕೃಷ್ಣ ಲೀಲೋತ್ಸವದ ಪ್ರಮುಖ ಆಕರ್ಷಣೆಯಾದ ವಿಟ್ಲಪಿಂಡಿ ಅರ್ಥಾತ್ ಮೊಸರು ಕುಡಿಕೆ ಉತ್ಸವಕ್ಕೆ ಜನಸಾಗರವೇ ಹರಿದು ಬರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಸುಮಾರು 1.50 ಲಕ್ಷ ಚಕ್ಕುಲಿ ಹಾಗೂ ಉಂಡೆಗಳನ್ನು ವಿತರಿಸಲಾಗುತ್ತದೆ. ನಗರದ ವಿವಿಧ ಶಾಲೆಗಳಿಗೂ ಕೃಷ್ಣ ಪ್ರಸಾದವನ್ನು ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಹುಲಿವೇಷವೇ ಈ ಉತ್ಸವದ ಜೀವಾಳ:
ಉಡುಪಿ ಅಷ್ಟಮಿಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ, ಹುಲಿವೇಷ ಕುಣಿತ. ಈ ಬಾರಿ ಸುಮಾರು 20ಕ್ಕೂ ಹೆಚ್ಚು ತಂಡಗಳಿಂದ ನೂರಾರು ಕಲಾವಿದರು ಹುಲಿವೇಷ ಧರಿಸಿ ಉಡುಪಿಯ ಬೀದಿ ಬೀದಿಗಳಲ್ಲಿ ಅಬ್ಬರಿಸಲಿದ್ದಾರೆ. ಶುಕ್ರವಾರ ಹಾಗೂ ಶನಿವಾರ ನಗರದಾದ್ಯಂತ ಹುಲಿಗಳದ್ದೇ ದರ್ಬಾರ್ ನಡೆಯಲಿದ್ದು, ನಗರದ ವಿವಿಧೆಡೆ ಲಕ್ಷಾಂತರ ರೂಪಾಯಿ ಬಹುಮಾನವಿರುವ ಹುಲಿ ಕುಣಿತ ಸ್ಪರ್ಧೆಗಳು ನಡೆಯಲಿವೆ.
ಕೃಷ್ಣಮಠದಲ್ಲೂ ಹುಲಿವೇಷ ಸ್ಪರ್ಧೆ ನಡೆಯಲಿದೆ. ಶೀರೂರು ಮಠದ ವಿಶೇಷ ಸಂಪ್ರದಾಯದಂತೆ ಹುಲಿವೇಷಧಾರಿಗಳಿಗೆ ನೋಚಿನ ಮಾಲೆ ಹಾಕಿ ಗೌರವಿಸುವ ಪದ್ಧತಿಯನ್ನು ಹಿಂದಿನ ಲಕ್ಷ್ಮೀವರ ತೀರ್ಥರು ಆರಂಭಿಸಿದ್ದರು.
ಆ ಸಂಪ್ರದಾಯವನ್ನು ವೇದವರ್ಧನ ತೀರ್ಥರು ಮುಂದುವರಿಸುತ್ತಿದ್ದು, ಪ್ರತಿ ಹುಲಿವೇಷಧಾರಿಗೆ ಹಾಕಲು ರೂ.500 ಮೌಲ್ಯದ ನೂರಾರು ಮಾಲೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.