ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

ಗಾಂಧಿ ಕುಟುಂಬ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಬದ್ದ ಎಂದು ಹೇಳಿದ ನಿಯೋಜಿತ ಮುಖ್ಯಮಂತ್ರಿ

Jun 2, 2026 - 21:25
ಕರ್ನಾಟಕದಲ್ಲಿ ಯುವ ಯುಗ ಆರಂಭ: ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್

ನವದೆಹಲಿ, ಜೂನ್ 2: "ಕರ್ನಾಟಕದ ಜನರು ನನ್ನ ಮೇಲೆ ವಿಶ್ವಾಸ ಹೊಂದಿದ್ದಾರೆ. ರೈತರು, ಮಹಿಳೆಯರು ಹಾಗೂ ಯುವ ಪೀಳಿಗೆಯನ್ನು ಸೇರಿ ನಾನು ಸಮಾಜದ ಪ್ರತಿಯೊಂದು ವರ್ಗವನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಕರ್ನಾಟಕದಲ್ಲಿ ಹೊಸ ಯುವ ಯುಗ ಪ್ರಾರಂಭವಾಗಲಿದೆ" ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಹೇಳಿದರು‌.

ದೆಹಲಿಯಲ್ಲಿ ಮಂಗಳವಾರ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

"ನಾನು ಯಾವುದನ್ನೂ ಕನಸು ಎಂದು ಹೇಳುವುದಿಲ್ಲ. ಕಠಿಣ ಪರಿಶ್ರಮದ ಜೊತೆಗೆ ಸಮರ್ಪಣೆ ಎಂದು ಕರೆಯುತ್ತೇನೆ.‌ ಇದು ಕಠಿಣ ಸಮಯ, ವಿಳಂಬವಾಗಿರಬಹುದು ಆದರೆ ನಿರಾಕರಣೆಗೆ ಒಳಗಾಗಿಲ್ಲ. ಇಲ್ಲಿ ಶಿವಕುಮಾರ್ ಒಬ್ಬನ ವಿಚಾರವಲ್ಲ, ಕಾಂಗ್ರೆಸ್ ಪಕ್ಷದ ಇತಿಹಾಸದೊಂದಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟಿರುವ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮದ ಫಲವಾಗಿದೆ" ಎಂದರು.

ಗಾಂಧಿ ಕುಟುಂಬ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದೆ

"ಗಾಂಧಿ ಕುಟುಂಬ ನನ್ನ ಮೇಲೆ ನಂಬಿಕೆಯನ್ನಿಟ್ಟಿತ್ತು. ಅವರು ನನಗೆ ವಿವಿಧ ಅವಕಾಶಗಳನ್ನು ನೀಡಿದರು. ರಾಜೀವ್‌ ಗಾಂಧಿ ಅವರಿಂದ ಹಿಡಿದು ಇಲ್ಲಿಯವರೆಗೆ ಕುಟುಂಬಕ್ಕೆ ತುಂಬಾ ನಿಷ್ಠನಾಗಿದ್ದೇನೆ. ನೆಹರು ಕುಟುಂಬದ ಸದಸ್ಯರು ತಮಗೆ ಸಿಕ್ಕ ವಿವಿಧ ಸ್ಥಾನಗಳನ್ನು ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರೂ ಉನ್ನತ ಸ್ಥಾನ ತ್ಯಾಗ ಮಾಡಿದರು. ಅವರು ಪ್ರಧಾನಿಯಾಗಬಹುದಿತ್ತು. ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬದಲಾಗಿ ದೇಶಕ್ಕಾಗಿ ಹೋರಾಡಿದರು. ರಾಹುಲ್‌ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಮೂಲಕ ಈ ದೇಶದ ಬೀದಿಗಳಲ್ಲಿ ಓಡಾಡಿದರು. ಯಾವ ನಾಯಕ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ, ಇಷ್ಟು ಕಷ್ಟದ ಕೆಲಸ ಮಾಡುತ್ತಿದ್ದಾನೆ ಹೇಳಿ" ಎಂದರು.

"ಇಂದಿರಾ ಗಾಂಧಿಯವರ ಮರಣದ ನಂತರ ನಾನು ನನ್ನ ಚಿತ್ರಮಂದಿರಕ್ಕೆ ಇಂದಿರಾಗಾಂಧಿ ಚಿತ್ರ ಮಂದಿರ ಎಂದು ಹೆಸರಿಟ್ಟಿದ್ದೇ ಗಾಂಧಿ ಕುಟುಂಬದೊಂದಿಗೆ ನಾನು ಹೊಂದಿದ್ದ ಬದ್ಧತೆಯನ್ನು ತೋರಿಸುತ್ತದೆ" ಎಂದರು.

ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಬದ್ಧ

"ನನ್ನ ಮೇಲೆ ಇಟ್ಟಿರವ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ತುಂಬಾ ಬದ್ಧನಾಗಿದ್ದೇನೆ ಮತ್ತು ನಾನು ಬಹಳಷ್ಟು ಕಷ್ಟಪಟ್ಟು ಕೆಲಸ ಮಾಡಿ ಎಲ್ಲರ ಆಶೋತ್ತರಗಳನ್ನು ಈಡೇರಿಸುತ್ತೇನೆ. ದಾರಿ ಅಷ್ಟು ಸುಲಭವಾಗಿಲ್ಲ. ಆದರೂ ಇದನ್ನು ನಿರ್ವಹಿಸಬೇಕು. ನಾನು ನನ್ನ ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ, ಸಮರ್ಪಣಾಭಾವದಿಂದ ಮಾಡುತ್ತೇನೆ" ಎಂದು ಹೇಳಿದರು.

"ನನ್ನ ಕೆಲಸಗಳ ಮೂಲಕ ನಾನು ಏನು ಎಂಬುದನ್ನು ಮರುನಿರೂಪಿಸಬೇಕಿದೆ. ಏಕೆಂದರೆ ಜಗತ್ತು ಬೆಂಗಳೂರು ಮತ್ತು ಕರ್ನಾಟಕದ ಮೂಲಕ ಭಾರತವನ್ನು ನೋಡುತ್ತದೆ. ಕರ್ನಾಟಕ ಸುಂದರ ರಾಜ್ಯ. ನಾನು ಯಾರನ್ನು ಭೇಟಿಯಾದರೂ, ಅವರು ಕರ್ನಾಟಕ ದೇಶದ ಪ್ರಮುಖ ರಾಜ್ಯ ಎಂದು ಹೇಳುತ್ತಾರೆ. ಆದ್ದರಿಂದ ಜವಾಬ್ದಾರಿ ಹೆಚ್ಚಿದೆ" ಎಂದರು.