ಬೇಸೂರು ಅಣುವಿದ್ಯುತ್ ಯೋಜನೆ ಬೇಡ: ಡಿ.ಸಿಗೆ ಮನವಿ
ಪಶ್ಚಿಮ ಘಟ್ಟಗಳು ಈಗಾಗಲೇ ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮ ಹಾಗೂ ಅಳಿವಿನಂಚಿನಲ್ಲಿರುವ ಪ್ರದೇಶವಾಗಿದ್ದು, ಇಲ್ಲಿ ಅಣುವಿದ್ಯುತ್ ಯೋಜನೆ ಜಾರಿಗೊಂಡಲ್ಲಿ ಅಪಾರ ಪ್ರಮಾಣದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಜಲ ಮೂಲಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಶಿವಮೊಗ್ಗ, ಮೇ 26: ರಾಷ್ಟ್ರಭಕ್ತರ ಬಳಗ ಮತ್ತು “ಪರಿಸರಕ್ಕಾಗಿ ನಾವು” ಸಂಘಟನೆಯ ವತಿಯಿಂದ ಪಶ್ಚಿಮ ಘಟ್ಟಗಳಲ್ಲಿ ಪ್ರಸ್ತಾವಿತವಾಗಿರುವ ಬೇಸೂರು ಅಣುವಿದ್ಯುತ್ ಯೋಜನೆಯನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಪಶ್ಚಿಮ ಘಟ್ಟಗಳು ಈಗಾಗಲೇ ಪರಿಸರದ ದೃಷ್ಟಿಯಿಂದ ಅತೀ ಸೂಕ್ಷ್ಮ ಹಾಗೂ ಅಳಿವಿನಂಚಿನಲ್ಲಿರುವ ಪ್ರದೇಶವಾಗಿದ್ದು, ಇಲ್ಲಿ ಅಣುವಿದ್ಯುತ್ ಯೋಜನೆ ಜಾರಿಗೊಂಡಲ್ಲಿ ಅಪಾರ ಪ್ರಮಾಣದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಜಲ ಮೂಲಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಯುನೆಸ್ಕೋ ಹಾಗೂ ಕಸ್ತೂರಿ ರಂಗನ್ ಮತ್ತು ಮಾಧವ್ ಗಾಡ್ಗಿಲ್ ವರದಿಗಳಲ್ಲಿಯೂ ಪಶ್ಚಿಮ ಘಟ್ಟಗಳಲ್ಲಿ ಹೊಸ ದೊಡ್ಡ ಯೋಜನೆಗಳನ್ನು ಕೈಗೊಳ್ಳುವುದು ಅಪಾಯಕಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಈಗಾಗಲೇ ಜಲವಿದ್ಯುತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗೆ ಹಾನಿಯಾಗಿದ್ದು, ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರ ನಾಶವಾದರೆ ದಕ್ಷಿಣ ಭಾರತದ ಕೋಟ್ಯಂತರ ಜನರು ನೀರಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ಅಣುವಿದ್ಯುತ್ ಯೋಜನೆಗಳು ಪರಿಸರ ಹಾಗೂ ಮನುಕುಲಕ್ಕೆ ಅಪಾಯಕಾರಿ ಎಂಬುದನ್ನು ವಿಶ್ವದ ಅನೇಕ ರಾಷ್ಟ್ರಗಳು ಮನಗಂಡಿದ್ದು, ಚೆರ್ನೋಬೈಲ್ ದುರಂತದಂತಹ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸೌರಶಕ್ತಿ ಹಾಗೂ ಪವನಶಕ್ತಿ ಮೂಲಕ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಿರುವಾಗ ಅತೀ ದುಬಾರಿ ಹಾಗೂ ಅಪಾಯಕಾರಿಯಾದ ಅಣುವಿದ್ಯುತ್ ಯೋಜನೆಯನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜಾರಿಗೆ ತರಲು ಮುಂದಾಗಿರುವುದು ಪ್ರಶ್ನಾರ್ಥಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಸಿಗಂದೂರಿನಿಂದ ಕೇವಲ 20 ಕಿಮೀ ದೂರದಲ್ಲಿ ಈ ಯೋಜನೆ ಪ್ರಸ್ತಾಪವಾಗಿದ್ದು, ಲಕ್ಷಾಂತರ ಭಕ್ತರ ಆರೋಗ್ಯಕ್ಕೂ ಭವಿಷ್ಯದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಹೊಸ ಯೋಜನೆಗಳನ್ನು ಕೈಗೊಳ್ಳಬಾರದು ಎಂದು ವಿವಿಧ ಸಂಘಟನೆಗಳು ಹಾಗೂ ಪರಿಸರವಾದಿಗಳು ನಿರಂತರ ಹೋರಾಟ ನಡೆಸುತ್ತಿದ್ದರೂ, ಜಿಲ್ಲಾಧಿಕಾರಿಗಳ ವರದಿಯಲ್ಲಿ ಈ ಅಂಶಗಳಿಗೆ ಸಮರ್ಪಕ ಪ್ರಸ್ತಾಪ ಇಲ್ಲದಿರುವುದು ಪ್ರಶ್ನಾರ್ಥಕವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲೂ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದರು.
ದೇಶದ ಕೃಷಿ, ಕುಡಿಯುವ ನೀರು ಹಾಗೂ ಆರ್ಥಿಕತೆಗೆ ಜೀವನಾಡಿಯಾಗಿರುವ ಪಶ್ಚಿಮ ಘಟ್ಟಗಳನ್ನು ಉಳಿಸಲು ಸರ್ಕಾರವು ಅಣುವಿದ್ಯುತ್ ಯೋಜನೆ ಕೈಬಿಟ್ಟು ಸೌರ ಹಾಗೂ ಪವನಶಕ್ತಿ ಆಧಾರಿತ ಪರ್ಯಾಯ ವಿದ್ಯುತ್ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಮಾಜಿ ನಗರಸಭಾ ಸದಸ್ಯ ವಿಶ್ವನಾಥ್ ಇತರರು ಇದ್ದರು.


